ಅತಿಥಿಗಳಿಗೆ ನೀಡಲೆಂದೇ ಮಾರ್ಕೆಟ್ ನಿಂದ ಹೊಸ ಟೀ ಕಪ್ ತಂದಿರ್ತೀರಿ. ಆದ್ರೆ ಈ ಕಪ್ ನಾಲ್ಕೈದು ಬಾರಿ ಬಳಸಿದ್ಮೇಲೆ ಬಣ್ಣ ಕಳೆದುಕೊಳ್ಳುತ್ತೆ. ಅಲ್ಲಲ್ಲಿ ಟೀ ಕಲೆ ಕಾಣಿಸುತ್ತೆ. ಅದನ್ನು ಕ್ಲೀನ್ ಮಾಡುವ ಟಿಪ್ಸ್ ಇಲ್ಲಿದೆ.
ಟೀ ಕಪ್ ಗಳನ್ನು ಪ್ರತಿ ದಿನ ನಾವು ಬಳಸ್ತೇವೆ. ಅದ್ರ ಹೊರಗೆ ಚೆನ್ನಾಗಿದ್ರೂ ಒಳಗೆ ಬಣ್ಣ ಮಾಸಿರುತ್ತೆ. ತಿಳಿ ಕಂದು ಬಣ್ಣದ ಪದರ ಸಂಗ್ರಹವಾಗಲು ಶುರುವಾಗುತ್ತೆ. ಕಪ್ ತಿಳಿ ಅಥವಾ ಬಿಳಿ ಬಣ್ಣದಲ್ಲಿದ್ರೆ ಇದು ಎದ್ದು ಕಾಣೋದು ಮಾಮೂಲಿ. ಗೆಸ್ಟ್ ಬಂದಾಗ ಇಂಥ ಕಪ್ ನಲ್ಲಿ ಟೀ ಕೊಡೋಕೆ ಮುಜುಗರವಾಗೋದು ಸಾಮಾನ್ಯ. ಹಾಗಂತ ನೀವು ಗಂಟೆಗಟ್ಟಲೆ ಈ ಕಪ್ ತೊಳೆದ್ರೂ ಅನೇಕ ಬಾರಿ ಕಲೆ ಹೋಗೋದಿಲ್ಲ. ಇನ್ಮುಂದೆ ಸ್ಕ್ರಬ್ಬರ್ ನಲ್ಲಿ ಗಂಟೆಗಟ್ಟಲೆ ರಬ್ ಮಾಡುವ ಬದಲು ಈ ಸುಲಭ ಹ್ಯಾಕ್ಸ್ ಟ್ರೈ ಮಾಡಿ ಕೆಲವೇ ನಿಮಿಷದಲ್ಲಿ ಕಲೆ ತೆಗೆಯಿರಿ.
ಬೇಕಿಂಗ್ ಸೋಡಾ ಬಳಸಿ
ಟೀ ಕಪ್ ಸ್ವಚ್ಛಗೊಳಿಸಲು ನೀವು ಬೇಕಿಂಗ್ ಸೋಡಾ ಬಳಸಬಹುದು. ಮೊದಲು ಸ್ವಲ್ಪ ನೀರಿಗೆ 1 ರಿಂದ 2 ಟೀ ಚಮಚ ಅಡಿಗೆ ಸೋಡಾವನ್ನು ಸೇರಿಸಿ ಮತ್ತು ದಪ್ಪ ಪೇಸ್ಟ್ ಮಾಡಿ. ನಂತರ, ಈ ಪೇಸ್ಟ್ ಅನ್ನು ಕಪ್ ಒಳಗಿನ ಕಂದು ಬಣ್ಣದ ಪದರಕ್ಕೆ ಹಚ್ಚಿ ಕೆಲ ಸಮಯ ಹಾಗೇ ಬಿಡಿ. ನಂತ್ರ ಮೃದುವಾದ ಸ್ಪಂಜಿ ಬಳಸಿ ನಿಧಾನವಾಗಿ ಸ್ಕ್ರಬ್ ಮಾಡಿ, ನೀರಿನಿಂದ ತೊಳೆಯಿರಿ.
ಬಿಳಿ ವಿನೆಗರ್
ಬಿಳಿ ವಿನೆಗರ್ ಕೂಡ ಕಪ್ ಕ್ಲೀನ್ ಮಾಡಲು ಸಹಕಾರಿ. ಮೊದಲು, ಸ್ವಲ್ಪ ಬಿಳಿ ವಿನೆಗರ್ ಮತ್ತು ಸಮಾನ ಪ್ರಮಾಣದ ನೀರನ್ನು ಕಪ್ಗೆ ಹಾಕಿ. ಕನಿಷ್ಠ 10 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತ್ರ ವಿನೆಗರ್ ವಾಸನೆಯನ್ನು ತೆಗೆದುಹಾಕಲು ಕಪ್ ಅನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.
ನಿಂಬೆ ಸಿಪ್ಪೆ ಬಳಸಿ
ಚಹಾ ಕುಡಿದ ನಂತ್ರ ಕತ್ತರಿಸಿದ ನಿಂಬೆ ಸಿಪ್ಪೆಯನ್ನು ತೆಗೆದುಕೊಂಡು ಕಪ್ನ ಒಳಭಾಗದಲ್ಲಿ ನಿಧಾನವಾಗಿ ಉಜ್ಜಿ. ಟೀ ಕಲೆಗಳು ಹಳೆಯದಾಗಿದ್ದರೆ, ಮೊದಲು ಅದನ್ನು ಮೃದುಗೊಳಿಸಲು ಸ್ವಲ್ಪ ನೀರನ್ನು ಹಾಕಿ. ನಂತ್ರ ನಿಧಾನವಾಗಿ ಉಜ್ಜಿ. ಇದು ಹಗುರ ಮತ್ತು ತಾಜಾ ಕಲೆಯನ್ನು ತೆಗೆದುಹಾಕುತ್ತದೆ.
ಉಪ್ಪು ಮತ್ತು ನಿಂಬೆ
ಒಂದು ಪಾತ್ರೆಗೆ ಕೆಲವು ಹನಿ ನಿಂಬೆ ರಸ ಹಾಗೂ ಸ್ವಲ್ಪ ಉಪ್ಪನ್ನು ಹಾಕಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕಪ್ ಒಳಗಿನ ಕಲೆ ಇರುವ ಜಾಗಕ್ಕೆ ಹಚ್ಚಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಸ್ಪಂಜಿನಿಂದ ನಿಧಾನವಾಗಿ ಉಜ್ಜಿ, ಕ್ಲೀನ್ ಮಾಡಿ.
ಈ ತಪ್ಪು ಮಾಡಬೇಡಿ
ಟೀ ಕಲೆ ತೆಗೆದ ನಂತ್ರ ಸ್ವಚ್ಛವಾದ ಕಪ್ ಅನ್ನು ಚೆನ್ನಾಗಿ ತೊಳೆದು ಒಣಗಿಸಿ. ಕಪ್ನಲ್ಲಿ ಚಹಾ ಉಳಿದಿದ್ದರೆ, ಅದನ್ನು ಹೆಚ್ಚು ಹೊತ್ತು ಬಿಡಬೇಡಿ. ಚಹಾ ಕಲೆ ಅಂಟಿಕೊಳ್ಳದಂತೆ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಕಪ್ ಅನ್ನು ಸ್ವಚ್ಛಗೊಳಿಸಲು ಒರಟಾದ ತಂತಿಯ ಸ್ಕ್ರಬ್ಬರ್ ಬಳಸಬೇಡಿ.

