ನಾವು ಮನೆಯಲ್ಲಿ ಗೋಧಿ ಹಿಟ್ಟು, ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಡಬ್ಬದಲ್ಲಿ ಇಟ್ಟಾಗ ಬೇಗ ಹುಳ ಆಗುತ್ತೆ. ಈ ಸಮಸ್ಯೆ ತಪ್ಪಿಸಲು ನೀವು ಮನೆಯ ತೋಟ ಅಥವಾ ಹಿತ್ತಲಲ್ಲಿರುವ ಒಂದು ಗಿಡದ ಎಲೆಯನ್ನು ಡಬ್ಬಕ್ಕೆ ಹಾಕಿದರೆ ಸಾಕು. ಇದಕ್ಕೆ ಯಾವುದೇ ಖರ್ಚು ಇಲ್ಲ. ಅದು ಯಾವ ಎಲೆ? ಈ ಸ್ಟೋರಿ ನೋಡಿ..

ನಾವು ಅಡುಗೆಮನೆಯಲ್ಲಿ ಗೋಧಿ ಹಿಟ್ಟು, ಮೈದಾ ಅಥವಾ ಅಕ್ಕಿ ಹಿಟ್ಟನ್ನು ಇಟ್ಟಾಗ ಕೆಲವೇ ದಿನಗಳಲ್ಲಿ ಸಣ್ಣ ಕಪ್ಪು ಹುಳಗಳು ಮತ್ತು ಬಿಳಿ ಬೂಸ್ಟ್ ಬರುವುದನ್ನು ನೋಡುತ್ತೇವೆ. ತೇವಾಂಶ ಹೆಚ್ಚಿರುವಾಗ ಹಿಟ್ಟಿನಲ್ಲಿ ಹುಳಗಳು ಸುಲಭವಾಗಿ ಮೊಟ್ಟೆ ಇಡುತ್ತವೆ. ಬಹಳಷ್ಟು ಜನ ಅಂಗಡಿಯಲ್ಲಿ ಸಿಗುವ ಕೆಮಿಕಲ್ ಮಾತ್ರೆಗಳನ್ನು ತಂದು ಡಬ್ಬಕ್ಕೆ ಹಾಕುತ್ತಾರೆ. ಆದರೆ ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ಕೆಮಿಕಲ್ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಬದಲು ನಮ್ಮ ತೋಟದಲ್ಲಿ ಅಥವಾ ಹಿತ್ತಲಲ್ಲಿ ಇರುವ ಲಕ್ಕಿ ಸೊಪ್ಪು ಅಥವಾ ಲಕ್ಕಿ ಎಲೆ ಬಳಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತೆ.

ಲಕ್ಕಿ ಸೊಪ್ಪು ನೈಸರ್ಗಿಕ ಕೀಟನಾಶಕದಂತೆ ಕೆಲಸ ಮಾಡುತ್ತೆ. ಇದರಲ್ಲಿ ವಿಶೇಷ ಸುಗಂಧ ತೈಲಗಳು ಇವೆ. ಈ ಎಲೆಯ ಘಾಟು ವಾಸನೆ ನಮಗೆ ಇಷ್ಟವಾದರೂ, ಹಿಟ್ಟಿನಲ್ಲಿರುವ ಸಣ್ಣ ಹುಳಗಳಿಗೆ ಮತ್ತು ಕೀಟಗಳಿಗೆ ಇದು ಆಗಿಬರಲ್ಲ. ಆ ವಾಸನೆಗೆ ಹುಳಗಳು ಡಬ್ಬದ ಹತ್ತಿರವೂ ಸುಳಿಯಲ್ಲ. ಕೆಮಿಕಲ್ ಮಾತ್ರೆಗಳಂತೆ ಇದು ಹಿಟ್ಟಿನ ರುಚಿ ಅಥವಾ ಗುಣವನ್ನು ಬದಲಾಯಿಸುವುದಿಲ್ಲ. ಇದು ಯಾವುದೇ ಅಡ್ಡಪರಿಣಾಮಗಳಿಲ್ಲದ ಸಂಪೂರ್ಣ ಸುರಕ್ಷಿತ ಮತ್ತು ನೈಸರ್ಗಿಕ ವಿಧಾನ.

ನೀವು ಹಿಟ್ಟು ತುಂಬುವ ಮುನ್ನ ಡಬ್ಬವನ್ನು ಒದ್ದೆ ಇಲ್ಲದಂತೆ ಒರೆಸಿ ಚೆನ್ನಾಗಿ ಒಣಗಿಸಬೇಕು. ಹಿಟ್ಟು ಹಾಕಿದ ಮೇಲೆ ಅದರ ಪ್ರಮಾಣಕ್ಕೆ ತಕ್ಕಂತೆ, ಲಕ್ಕಿ ಸೊಪ್ಪು ಅಥವಾ ಕೆಲವು ಎಲೆಗಳನ್ನು ಅಥವಾ ಒಂದು ಗೊಂಚಲನ್ನು ಹಿಟ್ಟಿನ ಮಧ್ಯದಲ್ಲಿ ಮತ್ತು ಮೇಲ್ಭಾಗದಲ್ಲಿ ಇಡಬೇಕು. ಆಮೇಲೆ ಗಾಳಿ ಹೋಗದಂತೆ ಡಬ್ಬದ ಮುಚ್ಚಳವನ್ನು ಟೈಟ್ ಆಗಿ ಮುಚ್ಚಿ. ಕೆಲವು ತಿಂಗಳ ನಂತರ ಎಲೆಗಳ ಘಾಟು ಕಡಿಮೆಯಾಗಿದೆ ಎನಿಸಿದರೆ, ಹಳೆಯ ಎಲೆಗಳನ್ನು ತೆಗೆದು ಹೊಸ ಎಲೆಗಳನ್ನು ಇಡಿ. ಒಂದು ರೂಪಾಯಿ ಖರ್ಚಿಲ್ಲದೆ ಹಿಟ್ಟನ್ನು ಫ್ರೆಶ್ ಆಗಿ ಇಡಲು ಇದಕ್ಕಿಂತ ಒಳ್ಳೆ ಐಡಿಯಾ ಬೇರೊಂದಿಲ್ಲ.