ದಿನನಿತ್ಯದ ತಿಂಡಿಗಳಿಂದ ಬೇಸರವಾಗಿದ್ದರೆ, ಹುದುಗಿಸುವ ಅಗತ್ಯವಿಲ್ಲದ ಈ ಹೊಸ ಬಗೆಯ ದೋಸೆಯನ್ನು ನೀವು ಸುಲಭವಾಗಿ ಮಾಡಬಹುದು. ಕೇವಲ ಕೆಲವು ನಿಮಿಷಗಳಲ್ಲಿ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಗರಿಗರಿಯಾದ ದೋಸೆ ತಯಾರಿಸುವ ವಿಧಾನ ಇಲ್ಲಿದೆ.
ದಿನ ಅದೇ ಇಡ್ಲಿ, ಚಿತ್ರಾನ್ನ, ದೋಸೆ ತಿಂದು ನಾಲಗೆ ಕೆಟ್ಟುಹೋಗಿದೆಯಾ? ಹಾಗಾದ್ರೆ ಅಡುಗೆ ಪ್ರಿಯರಿಗೆ ಇಲ್ಲೊಂದು ಹೊಸ ರೆಸಿಪಿ ಇದೆ. ಅತ್ಯಂತ ಕಡಿಮೆ ಸಮಯದಲ್ಲಿ, ಮನೆಯಲ್ಲಿನ ಪದಾರ್ಥಗಳನ್ನೇ ಬಳಸಿಕೊಂಡು ಈ ತಿಂಡಿಯನ್ನ ಪಟಾಪಟ್ ರೆಡಿ ಮಾಡಬಹುದು. ಹೊಸ ರುಚಿಯ ಈ ದೋಸೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅರೇ, ದೋಸೆ ಹಿಂಗೂ ಮಾಡಬಹುದು ಅಂತಾ ಗೊತ್ತೇ ಇರಲಿಲ್ಲ ಅಂತಾ ಆಹಾರ ಪ್ರಿಯರು ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ಆ ವರೈಟಿ ದೋಸೆ ಯಾವುದು, ಮಾಡುವ ವಿಧಾನ ಹೇಗೆ ಅನ್ನೋದು ಇಲ್ಲಿ ನಿಮಗಾಗಿ ವಿವರಿಸಲಾಗಿದೆ.

ಹೆಸರುಬೇಳೆ ರಾಗಿ ದೋಸೆ ರೆಸಿಪಿ
ಸಾಮಾನ್ಯವಾಗಿ ದೋಸೆ ಮಾಡುವುದು ಎಂದರೆ ಅಕ್ಕಿ, ಉದ್ದಿನಬೇಳೆ ರಾತ್ರಿಯೆಲ್ಲ ರುಬ್ಬಿಕೊಂಡು ನಂತರ ಹಿಟ್ಟನ್ನು ಕಲಸಿ ರಾತ್ರಿಯೆಲ್ಲ ನೆನಸಿಡುತ್ತಾರೆ. ಆದರೆ ಹೆಸರು ಬೇಳೆ ರಾಗಿ ಹುದುಗಿಸದೆ ಇನ್‌ಸ್ಟಾಂಟ್ ಆಗಿ ಕೆಲವೇ ನಿಮಿಷಗಳಲ್ಲಿ ದೋಸೆ ಮಾಡಬಹುದಾಗಿದೆ.
ಮನೆಯಲ್ಲಿ ಮೂವರು ನಾಲ್ವರು ಇರುವಷ್ಟು ಚಿಕ್ಕ ಕುಟುಂಬವಿದ್ದರೆ ಹೆಸರುಬೇಳೆ-ರಾಗಿ ದೋಸೆ ತಯಾರಿಸಲು ಎಷ್ಟು ಪ್ರಮಾಣ ಬೇಕಾಗಬಹುದು ಎಂಬುದು ಇಲ್ಲಿ ತಿಳಿಸಲಾಗಿದೆ.

ಹೆಸರುಬೇಳೆ+ರಾಗಿ ದೋಸೆಗೆ ಬೇಕಾಗುವ ಪದಾರ್ಥಗಳು
- ಹೆಸರುಬೇಳೆ (moong dal) – ½ ಕಪ್
- ರಾಗಿ ಹಿಟ್ಟು – ½ ಕಪ್
- ಶುಂಠಿ – 1 ಸೆಂ.ಮೀ ಉದ್ದ
- ಹಸಿರು ಮೆಣಸಿನಕಾಯಿ – 2
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಜೀರಿಗೆ – ½ ಟೀಸ್ಪೂನ್
- ಉಪ್ಪು – ರುಚಿಗೆ ತಕ್ಕಷ್ಟು
- ನೀರು – ಅಗತ್ಯಕ್ಕೆ (ಸುಮಾರು 1¼ ಕಪ್, ಹಾಲಿನಂತೆ ತೆಳುವಾದ ಬ್ಯಾಟರ್‌ಗೆ)
- ಎಣ್ಣೆ / ತುಪ್ಪ – ದೋಸೆ ಹಾಕಲು
ಹೆಸರುಬೇಳೆ+ರಾಗಿ ದೋಸೆ ತಯಾರಿಸುವ ವಿಧಾನ:
ಮೊದಲಿಗೆ ಅರ್ಧ ಕಪ್ ಹೆಸರುಬೆಳೆ, ಅರ್ಧ ಕಪ್ ರಾಗಿ ತೆಗೆದುಕೊಂಡು ಎರಡು ಒಟ್ಟಿಗೆ ಚೆನ್ನಾಗಿ ತೊಳೆಯಿರಿ, ತೊಳೆದ ಬಳಿಕ 15–30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಈಗ ನೆನದ ಹೆಸರುಬೇಳೆ+ರಾಗಿಯನ್ನ ಒಟ್ಟಿಗೆ ಮಿಕ್ಸ್‌ರನಲ್ಲಿ ಹಾಕಿ. ಸ್ವಲ್ಪ ಶುಂಠಿ, ಎರಡು ಅಥವಾ ಮೂರು ಹಸಿ ಮೆಣಸಿನಕಾಯಿ, ಒಂದು ಹಿಡಿ ಕೊತ್ತಂಬರಿ ಸೊಪ್ಪು ಜೊತೆಗೆ ಒಂದು ಟೀ ಸ್ಪೂನ್ ಜೀರಿಗೆ ಮಿಕ್ಸ್‌ಗೆ ಹಾಕಿ ನಂತರ ಸ್ವಲ್ಪ ನೀರು ಹಾಕಿ ಚೆನ್ನಾಗಿ ಒಂದೆರಡು ನಿಮಿಷ ಮಿಕ್ಸ್ ಮಾಡಿ. ಈಗ ದೋಸೆಗೆ ಹಿಟ್ಟು ಸಿದ್ಧವಾಗಿರುತ್ತದೆ.

ರುಬ್ಬಿದ ಹಿಟ್ಟು ಮಿಕ್ಸರ್ ಜಾರ್‌ನಿಂದ ಬಟ್ಟಲಿಗೆ ಹಾಕಿಕೊಳ್ಳಿ. ಅಗತ್ಯವಿದ್ದರೆ ಇನ್ನು ಸ್ವಲ್ಪ ನೀರು ಸೇರಿಸಿ ಹಾಲಿನಂತೆ ತೆಳುವಾಗಿ ಅಂದರೆ ಮಿಲ್ಕ್ ಶೇಕ್‌ನಂತೆ ಕಾಣುವಂತೆ. ಈಗ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ.
ಹೆಸರುಬೇಳೆ+ರಾಗಿ ದೋಸೆ ಹಾಕಲು ತಯಾರಿ:
ಗ್ಯಾಸ್ ಆನ್ ಮಾಡಿಕೊಂಡು ತವಾ ಬಿಸಿ ಮಾಡಿ. ಕಡಿಮೆ ಹುರಿಯಲ್ಲಿರಲಿ. ತವಾ ಬಿಸಿಯಾದ ಬಳಿಕ ಅದರ ಮೇಲೆ ಅಡುಗೆ ಎಣ್ಣೆ ಅಥವಾ ತುಪ್ಪ ಹಚ್ಚಿ ನಂತರ ಅದರ ಮೇಲೆ ತೆಳುವಾಗಿ ದೋಸೆ ಹಿಟ್ಟನ್ನು ತೆಳುವಾಗಿ ದುಂಡಗೆ ಹರಡಿ ದೋಸೆ ಹಾಕಿ. ಬೇಗನೇ ಬೇಯಲು ಅದರ ಮೇಲೆ ಮುಚ್ಚಳ ಮುಚ್ಚಿ. ಬಳಿಕ ದೋಸೆ ತಿರುವಿ ಇನ್ನೊಂದು ಬದಿ ಚೆನ್ನಾಗಿ ಬೇಯುವವರೆಗೆ ಸಣ್ಣಗೆ ಹುರಿಯಿರಿ. ಯಾವಾಗ ಮೇಲೆ ಹೆಂಚಿನ ತುದಿಯಲ್ಲಿ ಗರಿಗರಿಯಾಗಿ ಕಾಣಲಾರಂಭಿಸುತ್ತದೆ ಆಗ ದೋಸೆ ಮಾಡಸಿ(ಚಿತ್ರದಲ್ಲಿ ತೋರಿಸಿದಂತೆ)

ಈಗ ಹೆಸರುಬೇಳೆ+ರಾಗಿ ದೋಸೆ ರೆಡಿ
ಬಿಸಿಬಿಸಿ ದೋಸೆಯನ್ನು ಕೊಬ್ಬರಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ಚಟ್ನಿ ಪುಡಿಯೊಂದಿಗೆ ಸವಿದರೆ ಆಹಾ.. ಹೆಸರುಬೇಳೆ+ರಾಗಿ ದೋಸೆಯ ವಿಶೇಷವೆಂದರೆ ಇದನ್ನ ಕೆಲವು ನಿಮಿಷಗಳಲ್ಲೇ ತಯಾರಿಸಬಹುದು. ಹುದುಗಿಸಲು ಅಗತ್ಯವಿಲ್ಲ. ಹೆಚ್ಚು ಗರಿಗರಿ ಆಗಲು ತೆಳುವಾಗಿ ಹಾಕಿ. ರುಚಿ ಹೆಚ್ಚಿಸಲು ಇಷ್ಟವಿದ್ದರೆ ಸ್ವಲ್ಪ ಹಿಂಗು ಸೇರಿಸಬಹುದು.
ಈ ರೆಸಿಪಿ ಬಳಸಿಕೊಂಡು ನೀವು ಪ್ರಯತ್ನಿಸಿ ನೋಡಿ. ಲಿಂಕ್ ಕೆಳಗಿದೆ
https://www.facebook.com/share/v/1HrZWiHMds/


