ಎಣ್ಣೆ ಪಾತ್ರೆಗಳನ್ನು ಕ್ಲೀನ್ ಮಾಡೋದು ದೊಡ್ಡ ತಲೆ ನೋವಿನ ಕೆಲಸ. ಅದ್ರಲ್ಲೂ ಎಣ್ಣೆ ಬಾಟಲಿ ಕ್ಲೀನ್ ಮಾಡೋದು ಕಷ್ಟಸಾಧ್ಯ. ಅನೇಕರು ಜಿಡ್ಡು ಹಿಡಿದ ಎಣ್ಣೆ ಬಾಟಲಿ, ಪಾತ್ರೆಯನ್ನೇ ಹಾಗೆ ಬಳಸ್ತಿರ್ತಾರೆ. ಮತ್ತೆ ಕೆಲವರು ಹಳೆಯ ಪಾತ್ರೆ ಎಸೆದು ಹೊಸ ಪಾತ್ರೆ ಬಳಕೆ ಶುರು ಮಾಡ್ತಾರೆ. ನಿಮ್ಮ ಮನೆ ಎಣ್ಣೆ ಪಾತ್ರೆ, ಬಾಟಲಿ ಎಣ್ಣೆ ಜಿಡ್ಡಾಗಿದ್ದರೆ ಹೀಗೆ ಮಾಡಿ.
ಬಹುತೇಕ ಪ್ರತಿಯೊಬ್ಬರ ಮನೆಯ ಎಣ್ಣೆ ಬಾಟಲಿಗಳು ಜಿಗುಟಾಗಿ, ಹೊರಗೆ ಕೊಳಕಾಗಿರುತ್ತವೆ. ಎಣ್ಣೆ ಸುರಿಯುವಾಗ, ಬಳಸುವಾಗ ಕೆಲವು ಹನಿಗಳು ಬಾಟಲಿ ಮೇಲೆ ಇಲ್ಲ ಪಾತ್ರೆ ಮೇಲೆ ಬಿದ್ದಿರುತ್ತವೆ. ಅದಕ್ಕೆ ಕ್ರಮೇಣ ಧೂಳು, ಕೊಳಕು ಸೇರಿ ಅದು ಜಿಡ್ಡಾಗುತ್ತದೆ. ಎಣ್ಣೆ ಪಾತ್ರೆ ಮುಟ್ಟಿದ ತಕ್ಷಣ ಜಿಡ್ಡಿನ ಅನುಭವವಾಗುತ್ತದೆ. ಎಣ್ಣೆ ಪಾತ್ರೆಯಲ್ಲೇ ಇರೋದ್ರಿಂದ ಅದನ್ನು ಪ್ರತಿ ದಿನ ಕ್ಲೀನ್ ಮಾಡಲು, ತೊಳೆಯಲು ಸಾಧ್ಯವಿಲ್ಲ. ಎಣ್ಣೆಯ ಜಿಗುಟನ್ನು ಸ್ವಚ್ಛಗೊಳಿಸೋದು ಸವಾಲಿನ ಕೆಲ್ಸ. ನಿಮ್ಮ ಮನೆ ಎಣ್ಣೆ ಪಾತ್ರೆ ಕೂಡ ಎಣ್ಣೆ ಜಿಡ್ಡಾಗಿದ್ದರೆ ಮನೆಯಲ್ಲಿರು ಕೆಲ ವಸ್ತುಗಳನ್ನು ಬಳಸಿ ನೀವು ನಿಮಿಷದಲ್ಲಿ ಬಾಟಲಿಯನ್ನು ಕ್ಲೀನ್ ಮಾಡಬಹುದು.
ಅಡಿಗೆ ಸೋಡಾ ಮತ್ತು ನಿಂಬೆ
ಎಣ್ಣೆಯ ಜಿಡ್ಡು ಸಾಮಾನ್ಯ ನೀರು ಅಥವಾ ಸೋಪಿನಿಂದ ಹೋಗೋದಿಲ್ಲ. ಉಜ್ಜಿ ಉಜ್ಜಿ ನಿಮ್ಮ ಕೈ ನೋವಾಗುತ್ತೆ ವಿನಃ ಜಿಡ್ಡು ಹೋಗೋದಿಲ್ಲ. ನೀವು ಈ ಜಿಡ್ಡನ್ನು ತೆಗೆಯಲು ಅಡಿಗೆ ಸೋಡಾ ಬಳಸಬೇಕು. ಅಡುಗೆ ಸೋಡಾದ ನೈಸರ್ಗಿಕ ಸಂಕೋಚಕತೆ ಮತ್ತು ನಿಂಬೆಯ ಆಮ್ಲೀಯತೆ, ಮೊಂಡುತನದ ಗ್ರೀಸ್ ತೆಗೆಯಲು ಸಹಕಾರಿ. ಅಡಿಗೆ ಸೋಡಾವನ್ನು ಅರ್ಧ ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಬಾಟಲಿ ಅಥವಾ ಪಾತ್ರೆಗೆ ಹಚ್ಚಿ 5 ನಿಮಿಷಗಳ ಕಾಲ ಬಿಡಿ. ನಿಂಬೆ ಸಿಪ್ಪೆ ಅಥವಾ ಸ್ಪಂಜಿನಿಂದ ಬಾಟಲಿಯನ್ನು ಚೆನ್ನಾಗಿ ಸ್ಕ್ರಬ್ ಮಾಡಿ. ಇದು ಎಣ್ಣೆಯ ಜಿಗುಟನ್ನು ತೆಗೆದುಹಾಕುತ್ತದೆ. ಬಾಟಲಿ ಹೊಸದರಂತೆ ಹೊಳೆಯಲು ಕಾರಣವಾಗುತ್ತದೆ.
ಬಿಳಿ ವಿನೆಗರ್ ಮತ್ತು ಬೆಚ್ಚಗಿನ ನೀರು
ಬಿಳಿ ವಿನೆಗರ್ ಮತ್ತು ಬೆಚ್ಚಗಿನ ನೀರು ಕೂಡ ಎಣ್ಣೆ ಬಾಟಲಿಗೆ ಅಂಟಿರುವ ಗ್ರೀಸ್ ಸ್ವಚ್ಛಗೊಳಿಸಲು ಸಹಕಾರಿ. ಸ್ವಲ್ಪ ಬಿಳಿ ವಿನೆಗರ್ ಮತ್ತು ಪಾತ್ರೆ ತೊಳೆಯುವ ದ್ರವವನ್ನು ಬೆಚ್ಚಗಿನ ನೀರಿನಲ್ಲಿ ಮಿಕ್ಸ್ ಮಾಡಿ. ಬಾಟಲಿಯನ್ನು ನೀರಿನಿಂದ ತೊಳೆಯುವ ಮೊದಲು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಬೆಚ್ಚಗಿನ ನೀರು ಮತ್ತು ಲಿಕ್ವಿಡ್
ಬೆಚ್ಚಗಿನ ನೀರು ಮತ್ತು ಪಾತ್ರೆ ತೊಳೆಯುವ ಲಿಕ್ವಿಡ್ ಬಳಸುವುದರಿಂದ ಗ್ರೀಸ್ ತೆಗೆಯಬಹುದು. ದೊಡ್ಡ ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ ಮತ್ತು ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ ಸೇರಿಸಿ. ಎಣ್ಣೆ ಬಾಟಲಿಯನ್ನು ಖಾಲಿ ಮಾಡಿ ಅಥವಾ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಮತ್ತು ಈ ನೀರಿನಲ್ಲಿ 10-15 ನಿಮಿಷಗಳ ಕಾಲ ನೆನೆಸಿಡಿ. ನಂತರ, ಸ್ಕ್ರಬ್ಬರ್ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ.


