ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆಯ ಮೂರನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿದೆ. ಯುವ ದಸರಾ ಉದ್ಘಾಟನೆಗೆ ಖ್ಯಾತ ನಟ ಪ್ರಭುದೇವ ಆಗಮಿಸಿದ್ದು, ದಸರಾ ಉದ್ಘಾಟಿಸಿದ ಗವಿಶ್ರೀಗಳು ಮೈಸೂರಿನ ಪ್ರಮುಖ ಸಾಂಸ್ಕೃತಿಕ ತಾಣಗಳಿಗೆ ಭೇಟಿ ನೀಡಿದ್ದಾರೆ.
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಜಂಬೂಸವಾರಿಗೆ ಸಜ್ಜಾಗ್ತಿರುವ ಗಜಪಡೆಗೆ ಮೂರನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದೆ. ಮತ್ತೊಂದೆಡೆ ಯುವ ದಸರಾ ಉದ್ಘಾಟನೆಗೆ ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ ಮೈಸೂರಿಗೆ ಆಗಮಿಸಿದ್ದು, ದಸರಾ ಉದ್ಘಾಟಿಸಿದ ಕೊಪ್ಪಳ ಗವಿಮಠದ ಗವಿಶ್ರೀಗಳು ಮೈಸೂರಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ಜಂಬೂಸವಾರಿಗೆ ಗಜಪಡೆ ಸಜ್ಜು, 3ನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಗಜಪಡೆ ಸಜ್ಜಾಗ್ತಿದೆ. ಅರಮನೆ ಆವರಣದಲ್ಲಿ ಗಜಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಏಳು ಪಿರಂಗಿ ಗಾಡಿಗಳ ಮೂಲಕ 21 ಸುತ್ತು ಕುಶಾಲತೋಪು ಸಿಡಿಸಿ ತಾಲೀಮು ನಡೆಸಿದ್ರು. ಕುಶಾಲತೋಪಿನ ಕಿವಿಗಡಚಿಕ್ಕುವ ಶಬ್ದಕ್ಕೂ ಗಜಪಡೆ ಎದೆಗುಂದಲಿಲ್ಲ. ಅಭಿಮನ್ಯು, ಧನಂಜಯ, ಪ್ರಶಾಂತ, ಸುಗ್ರೀವ, ಶ್ರೀರಾಮ, ಗೋಪಿ, ಮಹೇಂದ್ರ, ಲಕ್ಷ್ಮಿ, ಚೈತ್ರಾ, ರೂಪ ಮತ್ತು ಕಾವೇರಿ ಸೇರಿದಂತೆ 11 ಆನೆಗಳು ಹಾಗೂ 46 ಅಶ್ವಗಳು ತಾಲೀಮಿನಲ್ಲಿ ಭಾಗವಹಿಸಿದ್ವು. ಅರಮನೆಯ ಪೂಜಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶ್ರೀಕಂಠ ಮತ್ತು ಏಕಲವ್ಯ ಆನೆಗಳು ತಾಲೀಮಿನಿಂದ ದೂರ ಉಳಿದಿದ್ವು.
ಇನ್ನು ಈ ಬಾರಿಯ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲ ಹೆಚ್ಚಾಗಿದೆ. ಪ್ರಶಾಂತ, ಸುಗ್ರೀವ ಮತ್ತು ಧನಂಜಯ ಆನೆಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆನೆಗಳ ನಡಿಗೆ, ಆರೋಗ್ಯ ಮತ್ತು ಆದೇಶಗಳಿಗೆ ಸ್ಪಂದಿಸುವ ಸಾಮರ್ಥ್ಯವನ್ನು ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಶ್ರೀರಂಗಪಟ್ಟಣ ದಸರಾಗೆ ಧನಂಜಯ, ಲಕ್ಷ್ಮೀ ಹಾಗೂ ರೂಪಾ ಆನೆಗಳು ಭಾಗಿಯಾಗಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯುವ ದಸರಾ ಉದ್ಘಾಟನೆಗೆ ಪ್ರಭುದೇವ ಆಗಮನ
ಇತ್ತ ಯುವ ದಸರಾ ಉದ್ಘಾಟನೆಗಾಗಿ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಮೈಸೂರಿಗೆ ಆಗಮಿಸಿದ್ದಾರೆ. ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಅವರನ್ನು ಶ್ರೀಗಳು ಶಾಲು ಹೊದಿಸಿ ಗೌರವಿಸಿದರು.
ನಂತರ ಮಾತನಾಡಿದ ಪ್ರಭುದೇವ, ಮೈಸೂರು ದಸರಾ ಜೊತೆಗಿನ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ತಮ್ಮ ತಾಯಿಯ ಊರು ದೂರ, ತಂದೆಯ ಊರು ಮೂಗೂರು. ಚಿಕ್ಕಂದಿನಲ್ಲಿ ಏಪ್ರಿಲ್ ರಜೆಯಲ್ಲಿ ಮಾತ್ರ ಊರಿಗೆ ಬರುತ್ತಿದ್ದ ಕಾರಣ ಅಕ್ಟೋಬರ್‌ನಲ್ಲಿ ನಡೆಯುವ ಮೈಸೂರು ದಸರಾವನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿರಲಿಲ್ಲ ಎಂದು ನೆನಪಿಸಿಕೊಂಡರು. ಯುವ ದಸರಾ ಉದ್ಘಾಟನೆಗೆ ಆಹ್ವಾನ ಬಂದ ತಕ್ಷಣ ಒಪ್ಪಿಕೊಂಡಿದ್ದಾಗಿ ತಿಳಿಸಿದ ಅವರು, ತಾವು ಉದ್ಘಾಟನೆ ಮಾಡುತ್ತಿರುವುದಕ್ಕೆ ತಂದೆ-ತಾಯಿಗೆ ತುಂಬಾ ಸಂತೋಷವಾಗಿದೆ ಎಂದರು.
ಮೈಸೂರಿನ ಸಾಂಸ್ಕೃತಿಕ ತಾಣಗಳಿಗೆ ಭೇಟಿ ಕೊಟ್ಟ ಗವಿಶ್ರೀಗಳು
ಮತ್ತೊಂದೆಡೆ ದಸರಾ ಉದ್ಘಾಟಿಸಿ ಮೈಸೂರಿನಲ್ಲೇ ವಾಸ್ತವ್ಯ ಹೂಡಿರುವ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನಗರದ ಸಾಂಸ್ಕೃತಿಕ ತಾಣಗಳಿಗೆ ಭೇಟಿ ನೀಡಿದರು. ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕಕ್ಕೆ ಭೇಟಿ ನೀಡಿದ ಶ್ರೀಗಳು, ಸ್ವಾಮಿ ವಿವೇಕಾನಂದರು ತಂಗಿದ್ದ ಕೊಠಡಿ, ಗ್ರಂಥಾಲಯ ಮತ್ತು ಸಭಾಂಗಣವನ್ನು ವೀಕ್ಷಿಸಿದರು. ಬಳಿಕ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿರುವ ಪುಸ್ತಕ ಮೇಳಕ್ಕೆ ಭೇಟಿ ನೀಡಿದ ಗವಿಶ್ರೀಗಳು ಪುಸ್ತಕಗಳನ್ನು ವೀಕ್ಷಿಸಿದರು. ನಂತರ ಮೈಸೂರು ಆಕಾಶವಾಣಿ ಕೇಂದ್ರ, ಛಾಯಾಚಿತ್ರ ಪ್ರದರ್ಶನವನ್ನೂ ವೀಕ್ಷಿಸಿ ಕಲಾವಿದರ ಪ್ರಯತ್ನವನ್ನು ಮೆಚ್ಚಿಕೊಂಡರು.
ಒಂದೆಡೆ ಕುಶಾಲತೋಪಿನ ಸದ್ದಿಗೆ ಸಜ್ಜಾಗುತ್ತಿರುವ ಗಜಪಡೆ. ಮತ್ತೊಂದೆಡೆ ಸಾಂಸ್ಕೃತಿಕ ತಾಣಗಳಲ್ಲಿ ಗವಿಶ್ರೀಗಳ ಸಂಚಾರ. ನಾಳೆಯಿಂದ ಯುವ ದಸರಾ ಮೆರುಗು ಸೇರಿಕೊಂಡು ಮೈಸೂರು ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟುತ್ತಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)



