ಬೆಂಗಳೂರಿನ ಬಿಎಂಟಿಸಿಯಲ್ಲಿ 3.97 ಕೋಟಿ ರೂಪಾಯಿ ಮೌಲ್ಯದ ಬಿಡಿಭಾಗಗಳ ಬೃಹತ್ ಹಗರಣ ಬೆಳಕಿಗೆ ಬಂದಿದೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸಂಸ್ಥೆಗೆ ವಂಚಿಸಿದ ಆರೋಪದಡಿ 21 ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು (ನ.23): ಬಿಎಂಟಿಸಿಯಲ್ಲಿ ಬರೋಬ್ಬರಿ 3.97 ಕೋಟಿ ರೂ ಮೌಲ್ಯದ ಬಿಡಿಭಾಗಗಳ (Spare parts) ಬೃಹತ್ ಹಗರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಡಿ ಬಿಎಂಟಿಸಿಯ 21 ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎಂಟಿಸಿ ಅಧಿಕಾರಿ ಪರಿಮಳಾ ಎಲ್. ನಾಯಕ್ (Parimala L Nayak) ಅವರು ನೀಡಿದ ದೂರಿನ ಆಧಾರದ ಮೇಲೆ ನವೆಂಬರ್ 20ರಂದು ವಿಲ್ಸನ್ ಗಾರ್ಡನ್ ಪೊಲೀಸರು ಈ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಬಿಎಂಟಿಸಿಯ ಒಟ್ಟು 21 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಅವರಲ್ಲಿ ಪ್ರಮುಖ ಎ1 ಆರೋಪಿಯೆಂದು ಶಾಂತಿನಗರದಲ್ಲಿರುವ ಬಿಎಂಟಿಸಿ ಸೆಂಟ್ರಲ್ ಸ್ಟೋರ್ CWS-1ರ ಸಹಾಯಕ ಉಗ್ರಾಣ ಪಾಲಕ (Assistant Store Keeper - ASK) ನಾಗರಾಜ ಅವರನ್ನು ಹೆಸರಿಸಲಾಗಿದೆ. ಎ2 ಆಗಿ ಅದೇ ಉಗ್ರಾಣದ ಕಿರಿಯ ಸಹಾಯಕ (Junior Assistant - JA) ಎನ್. ಅಶೋಕ್, ಎ3 ಆಗಿ ಸಹಾಯಕ ಉಗ್ರಾಣ ಪಾಲಕಿ (ASK) ಶಿಲ್ಪಾ ಎ.ಎಲ್, ಎ4 ಆಗಿ ಸಹಾಯಕ ಉಗ್ರಾಣ ಪಾಲಕ (ASK) ವಿಶ್ವನಾಥ್ ಎಲ್.ಡಿ ಹೆಸರನ್ನು ಎಫ್‌ಐಆರ್‌ನಲ್ಲಿ ಹಾಕಲಾಗಿದೆ.

2,820 ಬಿಡಿಭಾಗಗಳ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ವಂಚನೆ:

ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, 2021 ಮತ್ತು 2026ರ ನಡುವಿನ ಅವಧಿಯಲ್ಲಿ ಟಾಟಾ (Tata), ಲೇಲ್ಯಾಂಡ್ (Leyland) ಮತ್ತು ಐಷರ್ (Eicher) ವಾಹನಗಳ ಒಟ್ಟು 2,820 ಬಿಡಿಭಾಗಗಳನ್ನು ಬಿಎಂಟಿಸಿಗೆ ಸರಬರಾಜು ಮಾಡಲಾಗಿದೆ ಎಂದು ಸುಳ್ಳು ದಾಖಲೆ ಮತ್ತು ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಈ ನಕಲಿ ಬಿಲ್‌ಗಳ ಒಟ್ಟು ಮೊತ್ತ ಬರೋಬ್ಬರಿ 3,97,83,142 ರೂಪಾಯಿಗಳಾಗಿವೆ. ಆರೋಪಿಗಳು ಈ ಅಕ್ರಮ ವಹಿವಾಟುಗಳನ್ನು ನಡೆಸಲು ಬಿಎಂಟಿಸಿ ಈ ಹಿಂದೆ ಬಳಸುತ್ತಿದ್ದ 'ಮಾಸ್ಟರ್' (Master) ಸಾಫ್ಟ್‌ವೇರ್‌ನಲ್ಲಿದ್ದ 'ಮೆಟೀರಿಯಲ್ ಇಶ್ಯೂ ವಿಥೌಟ್ ಇಂಡೆಂಟ್' (Material Issue Without Indent) ಎಂಬ ಆಯ್ಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಸೆಕ್ಷನ್ 336 (ನಕಲಿ ದಾಖಲೆ ಸೃಷ್ಟಿ - Forgery), ಸೆಕ್ಷನ್ 340 (ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಅಸಲಿ ಎಂದು ಬಳಸುವುದು) ಮತ್ತು ಸೆಕ್ಷನ್ 318 (ವಂಚನೆ - Cheating) ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.