ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಿರ್ಮಾಣವಾಗಿರುವ ಶಂಕರ್ ನಾಗ್ ಉದ್ಯಾನವನವನ್ನು ಅವರ ಪತ್ನಿ ಅರುಂಧತಿ ನಾಗ್, ಮಗಳು ಹಾಗೂ ಮೊಮ್ಮಗಳು ಉದ್ಘಾಟಿಸಿದರು. ಈ ವೇಳೆ ಹಳೆಯ ದಿನಗಳನ್ನು ನೆನೆದು ಅರುಂಧತಿ ನಾಗ್ ಭಾವುಕರಾದರು. ಶಾಸಕ ಸತೀಶ್ ರೆಡ್ಡಿ ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಶಂಕರ್ ನಾಗ್ ಅವರ ಪುತ್ಥಳಿಯನ್ನು ಸಹ ಅನಾವರಣಗೊಳಿಸಲಾಯಿತು.

ಬೆಂಗಳೂರು: ಆಟೋ ರಾಜ, ಕರಾಟೆ ಕಿಂಗ್, ಕನ್ನಡದ ಕಣ್ಮಣಿಯೆಂದೇ ಖ್ಯಾತಿಗಳಿಸಿದ ಶಂಕರ್ ನಾಗ್ ಹೆಸರಿನಲ್ಲಿ ನಿರ್ಮಾಣವಾಗಿರುವ ಪಾರ್ಕ್ ಅನ್ನು ಇಂದು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಲೋಕಾರ್ಪಣೆ ಮಾಡಲಾಗಿದೆ. ವಿಶೇಷ ಎಂದರೆ ಈ ಉದ್ಯಾನವನ್ನು ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್, ಮಗಳು ಕಾವ್ಯನಾಗ್ ಮತ್ತು ಮೊಮ್ಮಗಳು ಉದ್ಘಾಟನೆ ಮಾಡಿದ್ದಾರೆ.

ಪಾರ್ಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರುಂಧತಿ ನಾಗ್

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ ಸಮೀಪದ ಚೆನ್ನಕೇಶವ ನಗರದಲ್ಲಿ ಶಂಕರ್ ನಾಗ್ ಅವರ ಹೆಸರಿನಲ್ಲಿ ಈ ಉದ್ಯಾನವನ್ನು ನಿರ್ಮಾಣ ಮಾಡಲಾಗಿದೆ. ಪಾರ್ಕ್ನಲ್ಲಿ ಶಂಕರ್ ನಾಗ್ ಅವರ ಪುತ್ಥಳಿಯನ್ನು ಕೂಡ ಸ್ಥಾಪನೆ ಮಾಡಲಾಗಿದೆ. ಈ ಪುಸ್ಥಳಿಯನ್ನು ಅರುಂಧತಿ ನಾಗ್ ಅವರು ಅನಾವರಣ ಮಾಡಿದರು.

ಜಿಬಿಎ ನಿರ್ಮಾಣ ಮಾಡಿರುವ ಹೊಸ ಪಾರ್ಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಶಂಕರ್ ನಾಗ್ ಅವರ ಕುಟುಂಬಕ್ಕೆ ಆಹ್ವಾನ ನೀಡಿ, ಅವರ ಕೈಯಿಂದಲೇ ಉದ್ಘಾಟನೆ ಮಾಡಲಾಗಿದೆ. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಅರುಂಧತಿ ನಾಗ್ ಅವರು ಮಗಳು ಕಾವ್ಯನಾಗ್ ಮತ್ತು ಮೊಮ್ಮಗಳೊಂದಿಗೆ ಭಾಗಿಯಾಗಿದ್ದರು.

ಶಂಕರ್ ನಾಗ್ ನೆನೆದು ಭಾವುಕರಾದ ಅರುಂಧತಿ ನಾಗ್

ಉದ್ಯಾನವನ ಉದ್ಘಾಟನೆ ಬಳಿಕ ಮಾತನಾಡಿದ ಅರುಂಧತಿ ನಾಗ್ ಅವರು, ಶಂಕರ್ ನಾಗ್ ಜೊತೆಗಿನ ಆ ದಿನಗಳ ಬಗ್ಗೆ ಮೆಲುಕು ಹಾಕಿದರು. 'ನಾನು ಮದುವೆಯಾದ ಎರಡೇ ವರ್ಷಕ್ಕೆ ಸಿಂಗಸಂದ್ರಕ್ಕೆ ಬಂದೆ. ಅದು 1982ರ ಸಮಯ, ಇಂದಿಗೆ ಸುಮಾರು 44 ವರ್ಷಗಳು ಕಳೆದು ಹೋಗಿದೆ. ನಾನು ಈ ಪ್ರದೇಶಕ್ಕೆ ಬಂದಾಗ ಹೊಸೂರು ಮುಖ್ಯರಸ್ತೆ ಇರಲಿಲ್ಲ, ಅಲ್ಲಿ ಎತ್ತಿನಗಾಡಿ ರಸ್ತೆ ಇತ್ತು. ಈ ಪ್ರದೇಶದಲ್ಲಿ ಯಾವುದೇ ಕರೆಂಟ್, ಸರಿಯಾದ ರಸ್ತೆ, ನೀರು ಹಾಗೂ ಫೋನ್ ಸಂಪರ್ಕ ಇರಲಿಲ್ಲ. ಅಂತಹ ಸಂದರ್ಭದಲ್ಲಿ ನಾನು ಬೆಂಗಳೂರು ಬಿಟ್ಟು ಸಿಂಗಸಂದ್ರದ ಹಳ್ಳಿಗೆ ಬಂದೆ. ಇವತ್ತಿಗೂ ನಾನು ಮಣ್ಣಿನ ಮನೆಯಲ್ಲಿದ್ದು, ಕಾಂಕ್ರೀಟ್ ಮನೆ ಕಟ್ಟಿಕೊಂಡಿಲ್ಲ. ಶಂಕರ್ ನಾಗ್ ಅವರು ಸದಾ ಶೂಟಿಂಗ್ ಅಂತ ಹೊರಟು ಬಿಡುತ್ತಿದ್ದರು. ಕೆಲಸದವರ ಜೊತೆಗೆ ನಾನು ಮನೆಯಲ್ಲಿ ಇರುತ್ತಿದೆ. ಕರ್ನಾಟಕದ ಜನರು ಹೃದಯವಂತರು. ಶಂಕರ್ ನಾಗ್ ಹೋದಮೇಲೆ ಅವರ ನೆನಪಿನಲ್ಲಿ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಶಂಕರ್ ನಾಗ್ ನನ್ನ ಗಂಡ ಮಾತ್ರ, ಆದರೆ ಆತ ನಿಮ್ಮ ಆಸ್ತಿ' ಎಂದು ಭಾವುಕರಾಗಿದರು.

ಕನ್ನಡದ ಜನರು ಸೌಜನ್ಯ ಇರುವ ಜನರು ನಾವು. ಸತೀಶ್ ಅವರು ಉದ್ಘಾಟನೆ ಮಾಡಲು ಆಹ್ವಾನ ಮಾಡಿದ ಸಂದರ್ಭದಲ್ಲಿ ಅಚ್ಚರಿ ಆಯಿತು. ಏಕೆಂದರೆ ಶಂಕರ್ ನಾಗ್ ಹೆಸರಿನಲ್ಲಿ ಎಲ್ಲರಿಗೂ ಉಪಯೋಗ ಆಗುವ ಪಾರ್ಕ್ ಮಾಡುತ್ತಿರುವುದು ನನಗೆ ಗೊತ್ತಿರಲಿಲ್ಲ. ಕರ್ನಾಟಕದಾದ್ಯಂತ ಶಂಕರ್ ನಾಗ್ ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುತ್ತಾರೆ. ಚಿತ್ರದುರ್ಗದಲ್ಲಿ ಕಾಲೇಜು, ಶಾಲೆ ಆರಂಭ ಮಾಡಿದ್ದಾರೆ. ಈ ರೀತಿ ಕೆಲಸಗಳು ನಾಡಿನಾದ್ಯಂತ ಮಾಡುತ್ತಾರೆ. ಆದ್ದರಿಂದಲೇ ನಾನು ಶಂಕರ್ ನಾಗ್ ಈ ನಾಡಿನ ಸೊತ್ತು ಎಂದು ಹೇಳುತ್ತೇನೆ ಎಂದು ತಿಳಿಸಿದರು.

ಎಲ್ಲರ ಗಮನ ಸೆಳೆದ ಶಂಕರ್ ನಾಗ್ ಮೊಮ್ಮಗಳು

ಇನ್ನು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಂಕರ್ ನಾಗ್ ಅವರ ಮೊಮ್ಮಗಳು ಎಲ್ಲರ ಗಮನ ಸೆಳೆದರು. ನಾಚಿಕೆಯ ಸ್ವಭಾವದ ಮಗುವಾಗಿ ಕಂಡರು, ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಳು. ಅಜ್ಜಿ, ಅಮ್ಮನ ಕೈಹಿಡಿದುಕೊಂಡೆ ಇದ್ದ ಮೊಮ್ಮಗಳು, ತಾತನ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದಳು.

ಶಂಕರ್ ನಾಗ್ ಅವರ ಮಗಳು ಕಾವ್ಯಾನಾಗ್ ಅವರು, ಉದ್ಯಮಿಯಾಗಿದ್ದು, ಹುಣಸೂರಿನ ತಮ್ಮ ತಂದೆಯ ಜಮೀನಿನಲ್ಲಿಯೇ ಕೋಕೋನೆಸ್ ಎಂಬ ಕಂಪನಿ ನಡೆಸುತ್ತಿದ್ದಾರೆ. ಈ ಕಂಪನಿಯ ಮೂಲಕ ಕೆಮಿಕಲ್ ಮುಕ್ತ ಸೋಪ್ ಮತ್ತು ಎಣ್ಣೆಯನ್ನು ಉತ್ಪಾದನೆ ಮಾಡಿ ಜನರಿಗೆ ತಲುಪಿಸುತ್ತಿದ್ದಾರೆ. ಬೆಂಗಳೂರಿನ ಬಹುತೇಕ ಆರ್ಗ್ಯಾನಿಕ್ ಶಾಪ್‌ಗಳಲ್ಲಿ ಕೋಕೋನೆಸ್ ಕಂಪನಿಯ ಉತ್ಪನ್ನಗಳು ಲಭ್ಯವಿದೆ. ಕಾವ್ಯಾನಾಗ್ಯ ಅವರ ತಮ್ಮ ಬಾಲ್ಯದ ಗೆಳೆಯ ಸಲಿಲ್ ಅವರೊಂದಿಗೆ ಮದುವೆಯಾಗಿದ್ದರು, ದಂಪತಿಗೆ ಒಂದು ಹೆಣ್ಣು ಮಗುವಿದೆ.

ಶಂಕರ್‌ ನಾಗ್ ಹಾಕಿ ಕೊಟ್ಟ ಹಾದಿಯಲ್ಲಿ ನಾವು ಸಾಗಬೇಕು!

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸತೀಶ್ ಅವರು, ಅರುಂಧತಿ ನಾಗ್ ಅವರು ಬಹಳ ದಿನಗಳ ಬಳಿಕ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರು ಕುಟುಂಬದೊಂದಿಗೆ ಇಲ್ಲಿದೆ ಬಂದಿದ್ದು ಸಂಸತ ತಂದಿದೆ. ಶಂಕರ್ ನಾಗ್ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಾವು ಮುನ್ನಡೆಯಬೇಕಾಗಿದೆ. ದೂರದೃಷ್ಟಿ ನಮ್ಮ ಇಂದಿಗೂ ಸ್ಫೂರ್ತಿಯಾಗಿದೆ. ನಾನು ಬಾಲಕನಾಗಿದ್ದಾಗ ಶಂಕರ್ ನಾಗ್ ಅವರು ಡೈರಿಗೆ ಹಾಲು ತೆಗೆದುಕೊಂಡು ಹೋಗಿದ್ದನ್ನು ನೋಡಿದ್ದೇನೆ. ಇದೇ ಹಾದಿಯಲ್ಲಿ ರೈತರಾಗಿ ಅರುಂಧತಿ ನಾಗ್ ಮೇಂಡ ಅವರು ನಡೆಯುತ್ತಿದ್ದಾರೆ ಎಂದು ಹೇಳಿದರು. ಅಲ್ಲದೇ ಸಿಂಗಸಂದ್ರ ಅಥವಾ ಚೆನ್ನಕೇಶ್ವರ ನಗರದಲ್ಲಿ ಒಂದು ಬಸ್ ನಿಲ್ದಾಣಕ್ಕೆ ಶಂಕರ್ ನಾಗ್ ಅವರ ಹೆಸರು ಹಿಡಲು ಜಿಬಿಎಗೆ ಮನವಿ ಸಲ್ಲಿಸುವುದಾಗಿ ಶಾಸಕರು ತಿಳಿಸಿದ್ದಾರೆ.