- Home
- Karnataka Districts
- Koppal: 15 ರೂ.ಗೆ 4 ಇಡ್ಲಿ ಕೊಡುವ ಗಂಗಾವತಿ 8ನೇ ಕ್ಲಾಸ್ ಹುಡುಗನ ದಿನದ ಸಂಪಾದನೆ ಎಷ್ಟು?
Koppal: 15 ರೂ.ಗೆ 4 ಇಡ್ಲಿ ಕೊಡುವ ಗಂಗಾವತಿ 8ನೇ ಕ್ಲಾಸ್ ಹುಡುಗನ ದಿನದ ಸಂಪಾದನೆ ಎಷ್ಟು?
ಕೊಪ್ಪಳದ ಗಂಗಾವತಿಯ 8ನೇ ತರಗತಿಯ ಬಾಲಕನೊಬ್ಬ ಪ್ರತಿದಿನ ಮುಂಜಾನೆ ಎದ್ದು ತನ್ನ ತಾಯಿಯೊಂದಿಗೆ ಇಡ್ಲಿ ತಯಾರಿಸಿ, ಶಾಲೆಗೆ ಹೋಗುವ ಮುನ್ನ ಮಾರಾಟ ಮಾಡುತ್ತಾನೆ. ನಿತ್ಯ ವ್ಯಾಪಾರ ಮಾಡುವ ಈತನ ಶ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹಲವರಿಗೆ ಸ್ಫೂರ್ತಿಯಾಗಿದೆ.

ಅಮ್ಮನಿಗೆ ನೆರವಾಗುವ ಮಗ!
ಸೂರ್ಯ ಉದಯಿಸುವ ಮುನ್ನವೇ ಈತ ನಿದ್ದೆಯಿಂದ ಎಳ್ತಾನೆ. ಈ ವೇಳೆಗೆ ಆತನ ಅಮ್ಮ ಸ್ಟವ್ ಬಳಿ ಕುಳಿತು ಇಡ್ಲಿ ಮಾಡುತ್ತಿರುತ್ತಾರೆ. ಬಾಲಕ ನಿದ್ದೆಯಿಂದ ಎದ್ದು, ನಿತ್ಯ ಕರ್ಮಗಳನ್ನು ಪೂರ್ಣಗೊಳಿಸಿ, ಅಮ್ಮನಿಗೆ ನೆರವಾಗುತ್ತಾನೆ. ಒಂದೊಂದು ಇಡ್ಲಿಯನ್ನು ಎಚ್ಚರಿಕೆಯಿಂದ ಒಂದು ಕ್ಯಾರಿಯರ್‌ನಲ್ಲಿ ಜೋಡಿಸಿಕೊಳ್ಳುತ್ತಾನೆ. ಮತ್ತೊಂದು ಕಡೆ ಅಮ್ಮ ಪಾತ್ರೆಯಲ್ಲಿ ಚಟ್ನಿ ಸಿದ್ಧ ಮಾಡಿರುತ್ತಾರೆ.
ವ್ಯಾಪಾರ ಮುಗಿಸಿ ಶಾಲೆಗೆ ತೆರಳುವ ಬಾಲಕ
ಅಮ್ಮನಿಗೆ 'ನಾನು ಹೋಗಿ ಬರ್ತೀನಿ' ಎಂದು ಹೇಳಿ ಮನೆಯಿಂದ ಹೊರಬರುವ ಬಾಲಕ, ನಿತ್ಯ 500 ರೂಪಾಯಿ ವ್ಯಾಪಾರ ಮಾಡದೆ ವಾಪಸ್ ಬರೋದಿಲ್ಲ. ಅದು ಶಾಲೆಯ ಬೆಲ್ ರಿಂಗ್ ಆಗುವ ವೇಳೆ ಮನೆಗೆ ವಾಪಸ್ ಆಗಿ, ಬ್ಯಾಗ್ ತೆಗೆದುಕೊಂಡು ಶಾಲೆಯ ಕಡೆ ಮುಖ ಮಾಡ್ತಾನೆ.
ಹಲವರಿಗೆ ಸ್ಪೂರ್ತಿಯಾದ ಬಾಲಕ ಕೆಲಸ
ಅಂದಹಾಗೇ, ಇದು ನಡೆಯೋದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ. ಗಂಗಾವತಿ ನಗರದ ಬಾಲಕ 8ನೇ ತರಗತಿ ಓದುತ್ತಿದ್ದು, ಆರ್ಥಿಕವಾಗಿ ಕುಟುಂಬಕ್ಕೆ ಸಹಾಯ ಮಾಡುತ್ತಿರುವ ಬಾಲಕ ನಿತ್ಯ ಇಡ್ಲಿ ಮಾರಾಟ ಮಾಡಲು ತೆರಳುತ್ತಾನೆ. ಶಾಲೆಗೆ ಹೋಗಿ ಬಂದ ಬಳಿಕ ಸ್ನೇಹಿತರೊಂದಿಗೆ ಆಟವಾಡುತ್ತಾ ಸಮಯ ಕಳೆಯುವ ಮಕ್ಕಳ ನಡುವೆ, ಈತ ಮಾಡುತ್ತೀರುವ ಕೆಲಸ ಹಲವರಿಗೆ ಪ್ರೇರಣೆಯಾಗಿದೆ.
ಜಸ್ಟ್ 15 ರೂಪಾಯಿಗೆ ನಾಲ್ಕು ಇಡ್ಲಿ
ಗಂಗಾವತಿಯ ಬಾಲಕ ನಗರದ ಗಾಂಧಿ ನಗರ, ಉಪ್ಪಾರ ಓಣಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆದುಕೊಂಡೇ ಇಡ್ಲಿ ಮಾರಾಟ ಮಾಡುತ್ತಾನೆ. ನಾಲ್ಕು ಇಡ್ಲಿಗೆ ಕೇವಲ 15 ರೂಪಾಯಿ ತೆಗೆದುಕೊಳ್ಳುತ್ತಾನೆ. ಮನೆಗಳ ಬಳಿಯೇ ಹೋಗಿ ಇಡ್ಲಿ ಮಾರಾಟ ಮಾಡುವ ಕಾರಣ ಹಲವರು ಬಾಲಕ ಬಳಿಯೇ ಇಡ್ಲಿ ಖರೀದಿ ಮಾಡುತ್ತಾರೆ.
ಮನೆ ಬಾಗಿಲಿಗೆ ಬಂದು ಇಡ್ಲಿ ಮಾರಾಟ
‘ಇಡ್ಲಿ ಇಡ್ಲಿ’ ಅಂತ ಸಣ್ಣ ಧ್ವನಿಯಲ್ಲಿಯೇ ಬೀದಿ ಸುತ್ತುವ ಈ ಬಾಲಕನನ್ನು ಕಂಡ ವ್ಯಕ್ತಿಯೊಬ್ಬರು, ಆತನನ್ನು ಮಾತನಾಡಿಸಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಕೇವಲ 24 ಗಂಟೆಯಲ್ಲಿ ಒಂದು ಲಕ್ಷದ 31 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಮೂರು ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಶೇರ್ ಮಾಡಿದ್ದಾರೆ.
ಜಸ್ಟ್ ಎರಡು ಗಂಟೆಯಲ್ಲಿ ಕ್ಯಾರಿಯರ್ ಖಾಲಿ, ಸಖತ್ ವ್ಯಾಪಾರ
ವಿಡಿಯೋದಲ್ಲಿ ವ್ಯಕ್ತಿ ಶಾಲೆಗೆ ಹೋಗ್ತೀಯಾ ಎಂದು ಕೇಳಿದಾಗ ಬಾಲಕ, ನಗುತ್ತಲೇ ಇಡ್ಲಿ ಮಾರಾಟ ಮಾಡಿದ ಬಳಿಕ ಶಾಲೆಗೆ ಹೋಗುತ್ತೇನೆ. 8ನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಯ ಬೆಲ್ ಬಾರಿಸಲು ಇನ್ನು ಒಂದು ಗಂಟೆ ಸಮಯ ಇದೆ, ಅಷ್ಟರೊಳಗೆ ಇಡ್ಲಿ ಖಾಲಿ ಆಗುತ್ತೆ ಎಂದು ಹೇಳಿದ್ದಾನೆ. ಜಸ್ಟ್ ಎರಡು ಗಂಟೆಯಲ್ಲಿ ಕ್ಯಾರಿಯರ್ ತುಂಬಾ ಇರುವ ಇಡ್ಲಿ ಮಾರಾಟ ಮಾಡುವ ಬಾಲಕ, ನಿತ್ಯ 500 ರೂಪಾಯಿ ವ್ಯಾಪಾರ ಮಾಡ್ತಾನೆ. ಶಾಲೆಯಿಂದ ಬಳಿಕ ಎಂದಿನಿಂತೆ ನಾಳೆಯ ವ್ಯಾಪಾರಕ್ಕೆ ಸಿದ್ಧತೆಗಳು ಆರಂಭವಾಗುತ್ತದೆ. ಇದಕ್ಕೆ ಅಮ್ಮನಿಗೆ ಬಾಲಕ ನೆರವು ಮಾಡ್ತಾನೆ. ನಾಳೆ ಬೆಳಗ್ಗೆ ಆಗುತ್ತಿದ್ದಂತೆ ಮತ್ತೆ ಇದೇ ಕೆಲಸ.

