ಬೀದರ್‌ನ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು 'ವಂದೇ ಮಾತರಂ' ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಪ್ರಾಂಶುಪಾಲರೇ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್.
ಬೀದರ್ (ಆ.20): ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಬೆದರಿಕೆ ಆಘಾತಕಾರಿ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಈ ಘಟನೆ ನಡೆದಿದೆ. ರಾಷ್ಟ್ರ ಧ್ವಜಾರೋಹಣ ಬಳಿಕ ಪಿಯು ವಿದ್ಯಾರ್ಥಿ ಸಾಗರ್ ಗೌಳಿ ಭಾರತ್ ಮಾತಾಕಿ ಜೈ, ವಂದೇ ಮಾತರಂ.. ಘೋಷಣೆಯನ್ನ ಕೂಗಿದ್ದ. ಆದರೆ ಈ ಘೋಷಣೆಯನ್ನು ಕೂಗಿದ್ದಕ್ಕೆ ಯಾವುದೋ ಪುಂಡ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದಲ್ಲ. ಆ ಶಾಲೆಯ ಪ್ರಾಂಶುಪಾಲರೇ ವಿದ್ಯಾರ್ಥಿ ಸಾಗರ್ ಗೌಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಆಘಾತ ಹುಟ್ಟಿಸಿದೆ.
ಇನ್ನೊಮ್ಮೆ ವಂದೇ ಮಾತರಂ ಘೋಷಣೆ ಕೂಗಿದ್ರೆ ಹುಷಾರ್!
ಶಾಹೀನ್ ಶಾಲೆಯ ಪ್ರಾಂಶುಪಾಲ ಅಬ್ದುಲ್ ಹಕೀಮ್ ವಿರುದ್ಧ ವಿದ್ಯಾರ್ಥಿಯ ಪೋಷಕರು ಗಂಭೀರ ಆರೋಪ ಮಾಡಿದ್ದು, 'ಇದು(ವಂದೇ ಮಾತರಂ)ಒಂದು ಧಾರ್ಮಿಕ ಸಮುದಾಯಕ್ಕೆ ಸೇರಿದ ಘೋಷಣೆಯಾಗಿದ್ದು, ಈ ರೀತಿಯ ಘೋಷಣೆಗಳು ನಮ್ಮ ಕಾಲೇಜಿನಲ್ಲಿ ನಡೆಯುವುದಿಲ್ಲ. ಇನ್ನೊಮ್ಮೆ ಕೂಗಬೇಡ' ಎಂದು ವಿದ್ಯಾರ್ಥಿ ಸಾಗರ್ ಗೌಳಿಗೆ ಬೆದರಿಕೆ ಹಾಕಿದ್ದಾರೆ. ಶಾಹೀನ್ ಕಾಲೇಜಿನಲ್ಲಿ ಹಿಂದೂ-ಮುಸ್ಲಿಮ್ ವಿದ್ಯಾರ್ಥಿಗಳು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳ ನಡುವೆ ವೈಮನಸು ಮೂಡಿಸಿದ್ದಲ್ಲದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಎಂಬ ಆರೋಪಿಸಿದ್ದಾರೆ.
ವಿದ್ಯಾರ್ಥಿಯಿಂದ ಪೊಲೀಸ್ ಠಾಣೆಗೆ ದೂರು:
ವಂದೇ ಮಾತರಂ, ಭಾರತ್ ಮಾತಕೀ ಜೈ ಘೋಷಣೆ ಕೂಗಿದ್ದಕ್ಕೆ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಾಗರ್ ಗೌಳಿ ತಂದೆ ಹಿರೋಬಾ ಗೌಳಿ ಚಿಟಗುಪ್ಪಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿದ್ಯಾರ್ಥಿಯ ದೂರಿನನ್ವಯ ಪ್ರಾಂಶುಪಾಲರ ಅಬ್ದುಲ್ ಹಕೀಮ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಹೀನ್ ಶಾಲೆ ಪ್ರಾಂಶುಪಾಲರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದ್ದು,ಚಿಟಗುಪ್ಪಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶಾಲೆಯ ಪ್ರಾಂಶುಪಾಲರಾಗಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ಆ ಮೂಲದ ದೇಶದ ಬಗ್ಗೆ ಅವರಿಗಿರುವ ನಿಷ್ಠೆಯನ್ನ ನಾಗರಿಕರು ಪ್ರಶ್ನಿಸಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.


