ದಾಂಡೇಲಿಯ ತಾಮೀರ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ 5.09 ಕೋಟಿ ರೂಪಾಯಿಗಳ ಬೃಹತ್ ಹಗರಣ ಬೆಳಕಿಗೆ ಬಂದಿದೆ. ಸೊಸೈಟಿಯ ಸಿಬ್ಬಂದಿಗಳೇ ನಕಲಿ ಚಿನ್ನವನ್ನು ಅಡವಿಟ್ಟು, 208 ಖಾತೆಗಳ ಮೂಲಕ ಸಾಲ ಪಡೆದು ವಂಚಿಸಿದ್ದಾರೆ. 9 ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಉತ್ತರ ಕನ್ನಡ (ಏ.02): ಜಿಲ್ಲೆಯ ದಾಂಡೇಲಿಯ ತಾಮೀರ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ (Tameer Co-operative Credit Society) ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ನಕಲಿ ಚಿನ್ನದ ಮೇಲೆ ಸಾಲ ನೀಡುವ ಮೂಲಕ ಸೊಸೈಟಿಗೆ ಸುಮಾರು 5.09 ಕೋಟಿ ರೂಪಾಯಿಗಳ ಪಂಗನಾಮ ಹಾಕಿದ ಒಂಬತ್ತು ಮಂದಿ ಸಿಬ್ಬಂದಿಗಳ ವಿರುದ್ಧ ಈಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ನಕಲಿ ಚಿನ್ನದ ಅಸಲಿ ಆಟ:

ದಾಂಡೇಲಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಸೇರಿಕೊಂಡು ಈ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಸಲಿ ಚಿನ್ನದ ಬದಲಾಗಿ ನಕಲಿ ಚಿನ್ನವನ್ನು ಅಡವಿಟ್ಟು, ಸುಮಾರು 208 ಬೇರೆ ಬೇರೆ ಖಾತೆಗಳ ಮೂಲಕ ಒಟ್ಟು 5,09,09,450 ರೂಪಾಯಿಗಳ ಬೃಹತ್ ಮೊತ್ತವನ್ನು ಸಾಲವಾಗಿ ಪಡೆದಿದ್ದಾರೆ. ಈ ಹಣವನ್ನು ಸೊಸೈಟಿಯ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿಕೊಂಡು ಸಂಸ್ಥೆಗೆ ದ್ರೋಹ ಬಗೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಟಕಟೆಯಲ್ಲಿರುವ ಸಿಬ್ಬಂದಿಗಳು:

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಮೀರ್ ಸೊಸೈಟಿಯ ದಾಂಡೇಲಿ ಶಾಖಾ ವ್ಯವಸ್ಥಾಪಕ ಮೀರ್ ಕರೀಂ ಮೀರ್ ಇಸ್ಮಾಯಿಲ್ ಸೇರಿದಂತೆ ಒಂಬತ್ತು ಮಂದಿ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖವಾಗಿ ಖಲೀಮೂದ್ದೀನ್ ಖಾನ್ ಸರದಾರ್ ಖಾನ್, ಮಂಚಾಲಿ ಚೂಡಾಮಣಿ ನೇತ್ರೇಕರ್, ಹನೀಫದ ಖಾಸಿಂಸಾಬ್ ಮೋಮೀನ್ ಹಾಗೂ ಇಬ್ರಾಹಿಂ ಗುಲಾಮ್ ಮೊಹಿದ್ದೀನ್‌ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ (FIR) ದಾಖಲಿಸಲಾಗಿದೆ.

ದೂರು ದಾಖಲಿಸಿದ ಪ್ರಧಾನ ವ್ಯವಸ್ಥಾಪಕರು:

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಒಟ್ಟು 12 ಶಾಖೆಗಳನ್ನು ಹೊಂದಿರುವ ತಾಮೀರ್ ಸಹಕಾರಿ ಸಂಘವು ತನ್ನದೇ ಆದ ವಿಶ್ವಾಸಾರ್ಹತೆ ಹೊಂದಿತ್ತು. ಆದರೆ ದಾಂಡೇಲಿ ಶಾಖೆಯಲ್ಲಿ ನಡೆದ ಈ ಅವ್ಯವಹಾರವು ಸಂಸ್ಥೆಯ ಆಡಳಿತ ಮಂಡಳಿಯನ್ನು ಬೆಚ್ಚಿಬೀಳಿಸಿದೆ. ಈ ಗಂಭೀರ ವಂಚನೆಯ ಕುರಿತು ತಾಮೀರ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಮೊಹ್ಮದ ಅಜೀಮ್ ರುಕ್ಸುದ್ದೀನ್ ಶೇಖ್ ಅವರು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ತನಿಖೆ ಚುರುಕು:

ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಈ ಗಂಭೀರ ಪ್ರಕರಣವನ್ನು ದಾಂಡೇಲಿ ಪೊಲೀಸರು ಕೈಗೆತ್ತಿಕೊಂಡಿದ್ದು, ಈಗಾಗಲೇ ತನಿಖೆ ಆರಂಭಿಸಿದ್ದಾರೆ. ನಕಲಿ ಚಿನ್ನದ ಮೌಲ್ಯಮಾಪನ ಮಾಡಿದವರು ಯಾರು? ಈ ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಹಕಾರಿ ಸಂಘಗಳಲ್ಲಿ ಇಂತಹ ದೊಡ್ಡ ಮಟ್ಟದ ವಂಚನೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಮತ್ತು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.