ಹಾಸನ ಅತ್ಯಾ**ರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಸನದ ಹೊಳೆನರಸೀಪುರದಲ್ಲಿ ಫ್ಲೆಕ್ಸ್‌ಗಳನ್ನು ಹಾಕಿ ಆಚರಿಸುತ್ತಿದ್ದಾರೆ. ಅಪರಾಧಿಯೊಬ್ಬನ ಈ ಸಂಭ್ರಮಾಚರಣೆಯು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಮಾಜದ ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹಾಸನ (ಆ.05): ಹಾಸನದಲ್ಲಿ ಅತ್ಯಾ**ರ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಲಾಗುತ್ತಿದೆ. ಪ್ರಜ್ವಲ್ ರೇವಣ್ಣನ ಅಭಿಮಾನಿಗಳು ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಾದ್ಯಂತ ಶುಭಾಶಯ ಕೋರುವ ಬೃಹತ್ ಫ್ಲೆಕ್ಸ್ (Flex) ಹಾಗೂ ಕಟೌಟ್‌ಗಳನ್ನು ಅಳವಡಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾ**ರ ಆರೋಪ ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದರೂ, ಪ್ರಜ್ವಲ್ ರೇವಣ್ಣ ಅವರ ಮೇಲಿನ ಅಭಿಮಾನವನ್ನು ಕಾರ್ಯಕರ್ತರು ಹಾಗೂ ಬೆಂಬಲಿಗರು ಫ್ಲೆಕ್ಸ್ ಹಾಕುವ ಮೂಲಕ ಮೆರೆದಿದ್ದಾರೆ. ಹೊಳೆನರಸೀಪುರ ಪಟ್ಟಣದ ಮುಖ್ಯ ರಸ್ತೆ ಹಾಗೂ ಪ್ರಮುಖ ವೃತ್ತಗಳಲ್ಲಿ 'ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದಿರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಪಶ್ಚಾತ್ತಪಕ್ಕೂ ಬಿಡದೇ ಮೆರೆಸುತ್ತಿರುವ ಅಂದಾಭಿಮಾನಿಗಳು:

ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಕೆಟ್ಟ ಕೆಲಸ ಮಾಡಿದರೆ ಅಂಥವರನ್ನು ದೂಷಣೆ ಮಾಡುವ ಮೂಲಕ ಆತನಿಗೆ ಪಶ್ಚಾತ್ತಾಪ ಅನುಭವಿಸುವಂತೆ ಮಾಡಬೇಕು. ಆದರೆ, ಇಲ್ಲಿ ಒಬ್ಬ ಅಪರಾಧಿ ಜೈಲು ಶಿಕ್ಷೆಯಾಗಿ ಮುದ್ದೆ ಮುರಿಯುತ್ತಿದ್ದರೂ, ತಪ್ಪಿತಸ್ಥನನ್ನು ಬೆಂಬಲಿಸಿ ಅಭಿಮಾನಿಗಳ ಸಂಘವನ್ನು ಕಟ್ಟಿಕೊಂಡು ಸಂಭ್ರಮಾಚರಣೆ ಮಾಡುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಶ್ರೀರಾಮನನ್ನು ಪೂಜಿಸುವ ನಾಡಿನಲ್ಲಿ ಒಬ್ಬ ಅಪರಾಧಿಯನ್ನು ಆರಾಧನೆ ಮಾಡುತ್ತಿರುವುದು ಸಮಾಜದ ದಿಕ್ಕು ಎತ್ತ ಸಾಗುತ್ತಿದೆ ಎಂಬುದು ಚಿಂತಕರ ನಿದ್ದೆಗೆಡಿಸಿದೆ.