ಎಚ್‌ಡಿಎಫ್‌ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬಂಧನ್ ಬ್ಯಾಂಕ್‌ಗಳು ಏಪ್ರಿಲ್ 1, 2026 ರಿಂದ ತಮ್ಮ ಎಟಿಎಂ ವಹಿವಾಟು ನಿಯಮಗಳನ್ನು ಬದಲಾಯಿಸಿವೆ. ಈ ಹೊಸ ನಿಯಮಗಳು ನಗದು ವಿತ್‌ಡ್ರಾ ಮಿತಿ, ಯುಪಿಐ ವಹಿವಾಟುಗಳ ಲೆಕ್ಕಾಚಾರ ಮತ್ತು ಉಚಿತ ವಹಿವಾಟುಗಳ ನಂತರ ವಿಧಿಸುವ ಶುಲ್ಕಗಳ ಮೇಲೆ ಪರಿಣಾಮ ಬೀರುತ್ತವೆ.
ಬೆಂಗಳೂರು (ಏ.1): ಎಚ್‌ಡಿಎಫ್‌ಸಿ (HDFC), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಬಂಧನ್ ಬ್ಯಾಂಕ್ ಸೇರಿದಂತೆ ದೇಶದ ಪ್ರಮುಖ ಬ್ಯಾಂಕ್‌ಗಳು ತಮ್ಮ ಎಟಿಎಂ (ATM) ವಹಿವಾಟಿನ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ. ಈ ಹೊಸ ನಿಯಮಗಳು ಏಪ್ರಿಲ್ 1, 2026 ರಿಂದ ಜಾರಿಗೆ ಬಂದಿವೆ. ನಗದು ವಿತ್‌ಡ್ರಾ ಮಿತಿ, ಉಚಿತ ವಹಿವಾಟುಗಳ ಮಿತಿ ಮತ್ತು ವಿಧಿಸಲಾಗುವ ಶುಲ್ಕಗಳಲ್ಲಿ ಈ ಬದಲಾವಣೆಗಳಾಗಿದ್ದು, ಗ್ರಾಹಕರು ತಮ್ಮ ಎಟಿಎಂ ಬಳಕೆಯ ಮೇಲೆ ಬೀರುವ ಪರಿಣಾಮಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank): ಯುಪಿಐ ಎಟಿಎಂ ವಿತ್‌ಡ್ರಾ ಈಗ ಉಚಿತ ಮಿತಿಯ ಭಾಗ
ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ನಿಯಮಗಳನ್ನು ಪರಿಷ್ಕರಿಸಿದ್ದು, ಇನ್ಮುಂದೆ ಎಟಿಎಂಗಳಲ್ಲಿ ನಡೆಸುವ ಯುಪಿಐ (UPI) ಆಧಾರಿತ ನಗದು ವಿತ್‌ಡ್ರಾಗಳನ್ನು ಸಹ ಮಾಸಿಕ 'ಉಚಿತ ವಹಿವಾಟು ಮಿತಿ'ಯ ಅಡಿಯಲ್ಲೇ ಪರಿಗಣಿಸಲಾಗುತ್ತದೆ.
ಯುಪಿಐ ಮೂಲಕ ಹಣ ತೆಗೆದರೂ ಅದನ್ನು ಸಾಮಾನ್ಯ ಎಟಿಎಂ ವಹಿವಾಟಿನಂತೆಯೇ ಎಣಿಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ತಿಂಗಳಿಗೆ ನೀಡಲಾಗುವ 5 ಉಚಿತ ವಹಿವಾಟುಗಳ ಮಿತಿ ಮೀರಿದ ನಂತರ ಶುಲ್ಕ ಅನ್ವಯವಾಗುತ್ತದೆ. ಉಚಿತ ಮಿತಿ ಮುಗಿದ ನಂತರ ಪ್ರತಿ ವಹಿವಾಟಿಗೆ 23 ರೂ. (ಜೊತೆಗೆ ಅನ್ವಯವಾಗುವ ತೆರಿಗೆ) ಪಾವತಿಸಬೇಕಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): ದೈನಂದಿನ ವಿತ್‌ಡ್ರಾ ಮಿತಿಯಲ್ಲಿ ಕಡಿತ
ಪಿಎನ್‌ಬಿ ತನ್ನ ಕೆಲವು ಆಯ್ದ ಡೆಬಿಟ್ ಕಾರ್ಡ್‌ಗಳ ದೈನಂದಿನ ನಗದು ವಿತ್‌ಡ್ರಾ ಮಿತಿಯನ್ನು ಅರ್ಧದಷ್ಟು ಕಡಿತಗೊಳಿಸಿದೆ. ಈ ಹಿಂದೆ ದಿನಕ್ಕೆ 1,00,000 ರೂ. ವರೆಗೆ ವಿತ್‌ಡ್ರಾ ಮಾಡಲು ಅವಕಾಶವಿದ್ದ ಕಾರ್ಡ್‌ಗಳ ಮಿತಿಯನ್ನು ಈಗ 50,000 ರೂ. ಗೆ ಇಳಿಸಲಾಗಿದೆ. ಈ ಹಿಂದೆ 1,50,000 ರೂ. ಮಿತಿ ಹೊಂದಿದ್ದ ಕಾರ್ಡ್‌ಗಳ ಮಿತಿಯನ್ನು ಈಗ 75,000 ರೂ. ಗೆ ಇಳಿಸಲಾಗಿದೆ. ಈ ಬದಲಾವಣೆಯು ಬ್ಯಾಂಕ್ ವಿತರಿಸಿರುವ ರುಪೇ (RuPay), ವೀಸಾ (Visa) ಮತ್ತು ಮಾಸ್ಟರ್ ಕಾರ್ಡ್ (Mastercard) ಡೆಬಿಟ್ ಕಾರ್ಡ್‌ಗಳಿಗೆ ಅನ್ವಯವಾಗಲಿದೆ.
ಬಂಧನ್ ಬ್ಯಾಂಕ್ (Bandhan Bank): ಉಚಿತ ವಹಿವಾಟು ಮಿತಿ ಪರಿಷ್ಕರಣೆ
ಬಂಧನ್ ಬ್ಯಾಂಕ್ ವಿಶೇಷವಾಗಿ ಇತರ ಬ್ಯಾಂಕ್‌ಗಳ ಎಟಿಎಂ ಬಳಕೆಯ ನೀತಿಯನ್ನು ಬದಲಾಯಿಸಿದೆ. ಬಂಧನ್ ಬ್ಯಾಂಕ್ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ಹಣಕಾಸು ವಹಿವಾಟುಗಳು; ಹಣಕಾಸೇತರ ವಹಿವಾಟುಗಳಿಗೆ (ಬ್ಯಾಲೆನ್ಸ್ ಚೆಕ್ ಇತ್ಯಾದಿ) ಯಾವುದೇ ಮಿತಿಯಿಲ್ಲ.
ಇತರ ಬ್ಯಾಂಕ್ ಎಟಿಎಂಗಳಲ್ಲಿಅಂದರೆ ಮೆಟ್ರೋ ನಗರಗಳಲ್ಲಿ ತಿಂಗಳಿಗೆ 3 ಉಚಿತ ವಹಿವಾಟುಗಳು ಇರಲಿದೆ. ಮೆಟ್ರೋ ಅಲ್ಲದ ನಗರಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳು. ಇದು ಹಣಕಾಸು ಮತ್ತು ಹಣಕಾಸೇತರ ಎರಡೂ ವಹಿವಾಟುಗಳನ್ನು ಒಳಗೊಂಡಿರುತ್ತದೆ. ಉಚಿತ ಮಿತಿ ಮೀರಿದ ನಂತರ ಪ್ರತಿ ಹಣಕಾಸು ವಹಿವಾಟಿಗೆ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ಹಣಕಾಸೇತರ ವಹಿವಾಟಿಗೆ 10 ರೂಪಾಯಿ ಶುಲ್ಕ, ಖಾತೆಯಲ್ಲಿ ಹಣವಿಲ್ಲದೆ (Insufficient Balance) ವಹಿವಾಟು ವಿಫಲವಾದರೆ 5 ರೂ. ದಂಡ ಹಾಕಲಾಗುತ್ತದೆ.


