ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಎಂಬ ಗಾದೆ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಜನರಿಗಿರುವ ಹಣವ ವ್ಯಾಮೋಹ ಅಂಥದ್ದು. ಆದರೆ ಇಲ್ಲೊಂದು ಕಡೆ ರೈತ ಮಹಿಳೆಯೊಬ್ಬರು ತಮ್ಮ ಖಾತೆಗೆ ಅಚಾನಕ್ ಆಗಿ ಬಂದು ಬಿದ್ದ 10 ಕೋಟಿ ರೂಪಾಯಿ ಹಣ ನನ್ನದಲ್ಲ, ಹೀಗಾಗಿ ಹಣ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಎಂಬ ಗಾದೆ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಜನರಿಗಿರುವ ಹಣವ ವ್ಯಾಮೋಹ ಅಂಥದ್ದು. ಒಮ್ಮೆ ಹಣವೊಂದು ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬಿದ್ದರೆ ಅದು ನಿಮ್ಮ ಹಣ. ಅದರ ಮೇಲೆ ಯಾರೂ ಹಕ್ಕು ಸಾಧಿಸಲು ಸಾಧ್ಯವಿಲ್ಲ.ಕೆಲವೊಮ್ಮೆ ಬ್ಯಾಂಕ್ ಖಾತೆ ಸಂಖ್ಯೆ ತಪ್ಪಾಗಿ ಬರೆದ ಕಾರಣವೋ ಇನ್ಯಾವುದೋ ಎಡವಟ್ಟಿನಿಂದ ಬೇರೆಯವರ ಖಾತೆಗೆ ಹಣ ಹೋಗಿ ಬಿದ್ದರೆ ಅವರ ಅನುಮತಿ ಇಲ್ಲದೇ ನೀವು ಹಣ ವಾಪಸ್ ಪಡೆಯಲಾಗದು. ಇಂತಹ ಸಂದರ್ಭದಲ್ಲಿ ಮನವಿ ಮಾಡಿದರು ವಾಪಸ್ ಹಣ ನೀಡದ ಜನರಿದ್ದಾರೆ. ಆದರೆ ಇಲ್ಲೊಂದು ಕಡೆ ರೈತ ಮಹಿಳೆಯೊಬ್ಬರು ತಮ್ಮ ಖಾತೆಗೆ ಅಚಾನಕ್ ಆಗಿ ಬಂದು ಬಿದ್ದ 10 ಕೋಟಿ ರೂಪಾಯಿ ಹಣ ನನ್ನದಲ್ಲ, ಹೀಗಾಗಿ ಹಣ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದ ಮಣಿಪುರ ಜಿಲ್ಲೆಯ ರೈತರೊಬ್ಬರ ಪತ್ನಿಯ ಬ್ಯಾಂಕ್ ಖಾತೆಗೆ ಬರೋಬ್ಬರಿ 10 ಕೋಟಿ ಹಣ ಬಂದು ಬಿದ್ದಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಈ ರೀತಿಯಾಗಿದ್ದು, ಅವರ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಇಷ್ಟೊಂದು ಮೊತ್ತದ ಹಣ ಬಂದು ಬಿದ್ದಿತ್ತು. ಆದರೆ ಅಷ್ಟೊಂದು ಮೊತ್ತದ ಹಣದಿಂದ ಒಂದು ರೂಪಾಯಿ ಹಣವನ್ನು ವಿಷಯ ಇತ್ಯರ್ಥವಾಗುವವರೆಗೆ ಹಿಂಪಡೆಯಲು ಅವರು ನಿರಾಕರಿಸಿದ್ದಾರೆ. ಇವರ ನಿಯತ್ತು ಪ್ರಮಾಣಿಕತೆಗೆ ಈಗ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ಎಂಬುವವರೇ ಹೀಗೆ ಇಷ್ಟೊಂದು ಮೊತ್ತದ ಹಣವನ್ನು ತಿರಸ್ಕರಿಸಿದರು. ತಮ್ಮ ಕುಟುಂಬದೊಂದಿಗೆ ವಾಸ ಮಾಡುವ ಅವರು ಕೃಷಿ ಮೂಲಕ ಜೀವನ ನಡೆಸುತ್ತಿದ್ದಾರೆ. ನವರಾತ್ರಿ ನಡುವೆ ಬರುವ ಅಷ್ಟಮಿ ಸಮಯದಲ್ಲಿ ಅವರು ತಮ್ಮ ಸ್ಥಳೀಯ ಬ್ಯಾಂಕ್‌ಗೆ ಹಣ ಪಡೆಯುವುದಕ್ಕಾಗಿ ಭೇಟಿ ನೀಡಿದ್ದರು. ಆದರೆ ಬ್ಯಾಂಕ್ ಬಂದ್ ಆಗಿದ್ದರಿಂದ ಬ್ಯಾಂಕ್‌ನಿಂದ ಹಣ ಪಡೆಯಲಾಗಲಿಲ್ಲ, ಆದರೆ ನಂತರ ಅವರು ಹತ್ತಿರ ಎಟಿಎಂಗೆ ಹೋಗಿ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ಪರಿಶೀಲಿಸಿದಾಗ ಅವರಿಗೆ ಆಘಾತ ಕಾದಿತ್ತು.
ಅವರ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ 9,99,49,588 ರೂ. ಅಂದರೆ ಸುಮಾರು ಹತ್ತು ಕೋಟಿ ರೂಪಾಯಿಗಳ ಬ್ಯಾಲೆನ್ಸ್ ಇತ್ತು. ತನ್ನ ಕಣ್ಣುಗಳನ್ನು ನಂಬಲು ಸಾಧ್ಯವಾಗದೆ, ಅವರು ಮತ್ತೊಂದು ಎಟಿಎಂನಲ್ಲಿ ಎರಡನೇ ಬಾರಿಗೆ ಬ್ಯಾಲೆನ್ಸ್ ಪರಿಶೀಲಿಸಿದರು ಮತ್ತು ಸ್ಕ್ರೀನ್ ವೀಡಿಯೊವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡರು ಅಂದಿನಿಂದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ತನ್ನ ಖಾತೆಯಲ್ಲಿ ಅಪಾರ ಮೊತ್ತದ ಹಣ ಇದ್ದರೂ ರೀಟಾ ಯಾವುದೇ ಹಣವನ್ನು ಅದರಿಂದ ಪಡೆಯಲು ಮುಂದಾಗಲಿಲ್ಲ, ಈ ಪರಿಸ್ಥಿತಿ ಸರಿ ಹೋಗುವವರೆಗೆ ಅದರಿಂದ ಹಣವನ್ನು ಮುಟ್ಟಬೇಡಿ ಎಂದು ಅವರು ತನ್ನ ಕುಟುಂಬ ಸದಸ್ಯರಿಗೂ ಹೇಳಿದ್ದಾರೆ. ಈ ವಿಚಾರ ನೆರೆಹೊರೆಯವರಿಗೂ ತಿಳಿದಿದ್ದು, ಆಕೆಯ ಪ್ರಮಾಣಿಕತೆಗೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ರೀಟಾ ಮತ್ತು ಅವರ ಕುಟುಂಬ ಈ ವಿಷಯವನ್ನು ವರದಿ ಮಾಡಲು ಬ್ಯಾಂಕಿಗೆ ಹೋದಾಗ, ಸಾರ್ವಜನಿಕ ರಜೆಗಾಗಿ ಬ್ಯಾಂಕ್ ಶಾಖೆ ಮುಚ್ಚಿತ್ತು.ನಂತರ ಬ್ಯಾಂಕ್ ಆಫ್ ಇಂಡಿಯಾದ ಕರೀಮ್‌ಗಂಜ್ ಶಾಖೆಯ ವ್ಯವಸ್ಥಾಪಕ ರಿಷಿಕಾಂತ್ ಪಾಂಡೆ, ಘಟನೆಯು ತಾಂತ್ರಿಕ ದೋಷ ಅಥವಾ ವಹಿವಾಟಿನ ದೋಷದಿಂದ ಉಂಟಾಗಿರುವ ಸಾಧ್ಯತೆಯಿದೆ ಎಂದು ಹೇಳಿದರು ಮತ್ತು ಶಾಖೆ ಮತ್ತೆ ತೆರೆದ ನಂತರ ಈ ವಿಷಯವನ್ನು ತನಿಖೆ ಮಾಡಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಘಟನೆಯು ಈಗ ಆ ಪ್ರದೇಶದಾದ್ಯಂತ ಚರ್ಚೆಯ ವಿಷಯವಾಗಿದೆ, ರೀಟಾ ಅವರ ಕುಟುಂಬಕ್ಕೆ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಎಲ್ಲಾ ಅವಕಾಶಗಳು ಇದ್ದಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಅವರ ಪ್ರಮಾಣಿಕತೆಯನ್ನು ಶ್ಲಾಘಿಸಿದ್ದಾರೆ.


