ಬೆಂಗಳೂರಿನಲ್ಲಿ ಓದಿ ಅಮೆರಿಕದಲ್ಲಿ ಖ್ಯಾತ ವಕೀಲರಾಗಿದ್ದ ವಿನೋದ್ ದೊಡ್ಡಮನಿ ವಿರುದ್ಧ ವಲಸೆ ವಂಚನೆ ಆರೋಪ ಕೇಳಿಬಂದಿದೆ. ಭಾರತೀಯರ ಪರವಾಗಿ ನಕಲಿ ಆಶ್ರಯ ಅರ್ಜಿಗಳನ್ನು ಸಲ್ಲಿಸಿದ ಕಾರಣಕ್ಕೆ ಅಮೆರಿಕ ಸರ್ಕಾರವು ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 2.14 ಕೋಟಿ ರೂ.ಗಳ ಬೃಹತ್ ದಂಡ ವಿಧಿಸಲು ಮುಂದಾಗಿದೆ.
ಬೆಂಗಳೂರು: ಹತ್ತು ಭಾಷೆಗಳನ್ನು ಸರಾಗವಾಗಿ ಮಾತನಾಡುವ, ನಾಲ್ಕು ಉನ್ನತ ಪದವಿಗಳನ್ನು ಪಡೆದ, ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಜೋಸೆಫ್ ಕಾಲೇಜಿನ ಹಳೇ ವಿದ್ಯಾರ್ಥಿಯೊಬ್ಬರ ವಿರುದ್ಧ ಈಗ ಇಡೀ ಅಮೆರಿಕ ಸರ್ಕಾರವೇ ತಿರುಗಿ ಬಿದ್ದಿದೆ! ಅಮೆರಿಕದ ಇತಿಹಾಸದಲ್ಲೇ ಹಿಂದೆಂದೂ ಕೈಗೊಳ್ಳದ ಅತ್ಯಂತ ಕಠಿಣ ಮತ್ತು ಐತಿಹಾಸಿಕ ನಿರ್ಧಾರವನ್ನು ಅಲ್ಲಿನ ಇಮಿಗ್ರೇಷನ್ ಇಲಾಖೆ ಕೈಗೊಂಡಿದೆ.
ಬೆಂಗಳೂರಿನಲ್ಲಿ ಬಿಎಸ್ಸಿ ಮುಗಿಸಿ, ಅಮೆರಿಕಾದಲ್ಲಿ ದೊಡ್ಡ ಇಮಿಗ್ರೇಷನ್ ಮತ್ತು ಪೇಟೆಂಟ್ ಲಾಯರ್ ಆಗಿ ಮಿಂಚುತ್ತಿದ್ದ ಭಾರತೀಯ ಮೂಲದ ವಿನೋದ್ ದೊಡ್ಡಮನಿ (Vinod Doddamani) ಅವರ ವಿರುದ್ಧ ಅಮೆರಿಕದ ಇಮಿಗ್ರೇಷನ್ ಆಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಮತ್ತು ಗೃಹ ಭದ್ರತಾ ಇಲಾಖೆ (DHS) ಈ ಕಠಿಣ ಕ್ರಮ ಜರುಗಿಸಿದೆ. ವಲಸೆ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಕಕ್ಷಿದಾರರ ಪರವಾಗಿ ವಂಚನೆಯ ಆಶ್ರಯ ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಇವರಿಗೆ ಬರೋಬ್ಬರಿ 2,55,000 ಡಾಲರ್ (ಭಾರತದ ರೂಪಾಯಿಗಳಲ್ಲಿ ಸುಮಾರು 2.14 ಕೋಟಿ ರೂ.) ಭಾರಿ ದಂಡ ವಿಧಿಸಲು ಉದ್ದೇಶಿಸಿ ನೋಟಿಸ್ ಜಾರಿ ಮಾಡಲಾಗಿದೆ.
ಏನಿದು ವಂಚನೆ ಪ್ರಕರಣ? ಅಮೆರಿಕ ಸರ್ಕಾರದ ಆರೋಪವೇನು?
ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಮತ್ತು ಗೃಹ ಭದ್ರತಾ ತನಿಖಾಧಿಕಾರಿಗಳು (HSI) ಜಂಟಿಯಾಗಿ ವಕೀಲ ವಿನೋದ್ ದೊಡ್ಡಮನಿ ಅವರಿಗೆ ದಂಡ ವಿಧಿಸುವ ಉದ್ದೇಶದಿಂದ ಒಟ್ಟು ಐದು ನೋಟಿಸ್‌ಗಳನ್ನು ಸಲ್ಲಿಸಿದ್ದಾರೆ. ಏಜೆನ್ಸಿಯ ಅಧಿಕೃತ ಪ್ರಕಟಣೆಯ ಪ್ರಕಾರ, ವಿನೋದ್ ಅವರು ಒಟ್ಟು 32 ವಲಸೆ ಪ್ರಕರಣಗಳಿಗೆ ಸಂಬಂಧಿಸಿದಂತೆ 64 ವಂಚನೆಯ ಮತ್ತು ನಕಲಿ ದಾಖಲೆಗಳನ್ನು ಅಮೆರಿಕ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವಿನೋದ್ ದೊಡ್ಡಮನಿ ಅವರು ತಮ್ಮ ಕಕ್ಷಿದಾರರ ಪರವಾಗಿ ರಾಜಕೀಯ ಅಥವಾ ಧಾರ್ಮಿಕ ಕಿರುಕುಳದ ಆಧಾರದ ಮೇಲೆ ಅಮೆರಿಕದಲ್ಲಿ ಆಶ್ರಯ (Asylum) ಕೋರಿ ಅರ್ಜಿ ಸಲ್ಲಿಸುವಾಗ ಪದೇ ಪದೇ ಒಂದೇ ರೀತಿಯ ಸುಳ್ಳು ಕಥೆಗಳು, ವಾಸ್ತವಿಕ ನಿರೂಪಣೆಗಳು ಮತ್ತು ಪೋಷಕ ವಿವರಗಳನ್ನು ಬಳಸಿದ್ದಾರೆ. ಭಾಷೆ ಮತ್ತು ಸಾರದಲ್ಲಿ ಒಂದೇ ರೀತಿಯಾಗಿದ್ದ ಈ ಅರ್ಜಿಗಳು ಕೇವಲ ಹೆಸರುಗಳನ್ನು ಬದಲಾಯಿಸಿ ಕಾಪಿ-ಪೇಸ್ಟ್ ಮಾಡಿದಂತಿದ್ದವು ಎಂದು DHS ಪತ್ತೆಹಚ್ಚಿದೆ. ಈ ಎಲ್ಲಾ ಅರ್ಜಿಗಳನ್ನು ಭಾರತೀಯ ಪ್ರಜೆಗಳ ಪರವಾಗಿ ಸಲ್ಲಿಸಲಾಗಿತ್ತು.
ಅಮೆರಿಕ ಅಧಿಕಾರಿಗಳ ಖಡಕ್ ಸಂದೇಶ
ಈ ಮಹತ್ವದ ಬೆಳವಣಿಗೆಯ ಕುರಿತು DHS ತನ್ನ ಅಧಿಕೃತ 'X' (ಟ್ವಿಟರ್) ಖಾತೆಯಲ್ಲಿ ಕಠಿಣ ಸಂದೇಶವೊಂದನ್ನು ಪೋಸ್ಟ್ ಮಾಡಿದೆ. ನಮ್ಮ ವಲಸೆ ವ್ಯವಸ್ಥೆಯನ್ನು ವಕೀಲರು ದುರುಪಯೋಗಪಡಿಸಿಕೊಳ್ಳುವ ಮತ್ತು ವಂಚಿಸುವ ದಿನಗಳು ಈಗ ಮುಗಿದಿವೆ. ಭಾರತೀಯ ಪ್ರಜೆಗಳ ಪರವಾಗಿ 64 ಮೋಸದ ದಾಖಲೆಗಳನ್ನು ಸಲ್ಲಿಸಿದ್ದಕ್ಕಾಗಿ HSI ವಕೀಲ ವಿನೋದ್ ದೊಡ್ಡಮನಿ ಅವರಿಗೆ $255,000 ಕ್ಕಿಂತ ಹೆಚ್ಚು ದಂಡ ವಿಧಿಸಲು ಉದ್ದೇಶಪೂರ್ವಕವಾಗಿ ಐದು ನೋಟಿಸ್‌ಗಳನ್ನು ಸಲ್ಲಿಸಿದೆ. ವಲಸೆ ವಕೀಲರಿಗೆ ನಮ್ಮ ಸಂದೇಶ ಸ್ಪಷ್ಟವಾಗಿದೆ: ನೀವು ವಂಚನೆಯಲ್ಲಿ ತೊಡಗಿದ್ದರೆ, ನಿಮ್ಮನ್ನು ಕಡ್ಡಾಯವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
DHS ನ ಜನರಲ್ ಕೌನ್ಸಿಲ್ ಜೇಮ್ಸ್ ಪರ್ಸಿವಲ್ ಈ ಕುರಿತು ಟ್ವೀಟ್ ಮಾಡಿ, "ಕಳೆದ ತಿಂಗಳು, ನಾವು ಮುಕ್ತ ಗಡಿ ಕೈಗಾರಿಕಾ ಸಂಕೀರ್ಣಕ್ಕೆ ಮುನ್ನೆಚ್ಚರಿಕೆ ನೀಡಿದ್ದೆವು. ವಂಚನೆಯ ಆಶ್ರಯ ಹಕ್ಕುಗಳನ್ನು ಸಲ್ಲಿಸುವ ವಕೀಲರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದೆವು. ಅದರಂತೆ ಇಂದು ನಾವು ಭಾರತೀಯ ಪ್ರಜೆಗಳ ಪರವಾಗಿ ಬಹು ವಂಚನೆಯ ಹಕ್ಕುಗಳನ್ನು ಸಲ್ಲಿಸಿದ್ದಕ್ಕಾಗಿ ವಕೀಲರೊಬ್ಬರಿಗೆ $255,000 ಕ್ಕಿಂತ ಹೆಚ್ಚು ದಂಡ ವಿಧಿಸಿದ್ದೇವೆ. ಮೋಸದ ಆಶ್ರಯ ಹಕ್ಕುಗಳು ಅಮೆರಿಕನ್ನರ ಸುರಕ್ಷತೆಗೆ ಬೆದರಿಕೆ ಹಾಕುತ್ತವೆ," ಎಂದು ತಿಳಿಸಿದ್ದಾರೆ.
ಯುಎಸ್ ಅಧಿಕಾರಿಗಳ ಪ್ರಕಾರ, ವಂಚನೆಯ ಆಶ್ರಯ ಹಕ್ಕುಗಳನ್ನು ಸಲ್ಲಿಸಿದ ಆರೋಪ ಹೊತ್ತಿರುವ ವಕೀಲರ ವಿರುದ್ಧ DHS ಇಷ್ಟೊಂದು ದೊಡ್ಡ ಮಟ್ಟದ ಆರ್ಥಿಕ ದಂಡವನ್ನು ಕೋರಿರುವುದು ಅಮೆರಿಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಯಾಗಿದೆ.
ಹಾಗಾದರೆ ಯಾರು ಈ ವಿನೋದ್ ದೊಡ್ಡಮನಿ?
ಪ್ರತಿಷ್ಠಿತ ವೆಬ್‌ಸೈಟ್ USAttorneys.com ನಲ್ಲಿ ಲಭ್ಯವಿರುವ ಅವರ ಪ್ರೊಫೈಲ್ ಪ್ರಕಾರ, ವಿನೋದ್ ದೊಡ್ಡಮನಿ ಅವರ ಹಿನ್ನೆಲೆ ಅತ್ಯಂತ ರೋಚಕವಾಗಿದೆ. ವಿನೋದ್ ಭಾರತದ ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (PCM) ವಿಷಯಗಳಲ್ಲಿ ಬಿಎಸ್ಸಿ ಪದವಿ ಪಡೆದಿದ್ದರು.
ಭಾರತದಲ್ಲಿ ಜನಿಸಿದ ಇವರು ನಂತರದ ದಿನಗಳಲ್ಲಿ ಜರ್ಮನಿಯ ಪೌರತ್ವವನ್ನು ಪಡೆದರು. ತಮ್ಮನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದವರು ಎಂದು ಕರೆದುಕೊಳ್ಳುವ ಇವರು, 2009 ರಿಂದ ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ನೆಲೆಸಿದ್ದರು. ಪ್ರಸ್ತುತ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ.
ನಾಲ್ಕು ಪದವಿಗಳು ಹಾಗೂ ಹತ್ತು ಭಾಷೆಗಳು: ವಿನೋದ್ ವ್ಯಾಪಕ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದು, ಒಟ್ಟು ನಾಲ್ಕು ಪದವಿಗಳನ್ನು ಪಡೆದಿದ್ದಾರೆ. ಅಮೆರಿಕದ ಪ್ರತಿಷ್ಠಿತ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪದವಿಪೂರ್ವ ಪದವಿ ಹಾಗೂ ಚಾಪ್ಮನ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ (Law) ಮುಗಿಸಿದ್ದಾರೆ. ಇವರು ಜರ್ಮನ್, ಫ್ರೆಂಚ್, ಪೋಲಿಷ್, ಇಟಾಲಿಯನ್, ಸ್ಪ್ಯಾನಿಷ್, ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ಒಟ್ಟು ಹತ್ತು ಭಾಷೆಗಳನ್ನು ಮಾತನಾಡಬಲ್ಲ ಬಹುಭಾಷಾ ತಜ್ಞರಾಗಿದ್ದಾರೆ.
ಐಟಿ ಸಲಹೆಗಾರರಿಂದ ಇಮಿಗ್ರೇಷನ್ ಲಾಯರ್ ವರೆಗಿನ ಜರ್ನಿ
ಕಾನೂನು ವೃತ್ತಿಗೆ ಪ್ರವೇಶಿಸುವ ಮೊದಲು, ವಿನೋದ್ ದೊಡ್ಡಮನಿ ಅವರು ಹಲವು ಜಾಗತಿಕ ದೈತ್ಯ ಸಂಸ್ಥೆಗಳಿಗೆ ಐಟಿ ಸಲಹೆಗಾರ ಮತ್ತು ಸಿಸ್ಟಮ್ಸ್ ಅನಲಿಸ್ಟ್ ಆಗಿ ಕೆಲಸ ಮಾಡಿದ್ದರು. ಅವರ ಪುನರಾರಂಭದಲ್ಲಿ (Resume) ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್, ಕ್ರೆಡಿಟ್ ಸ್ಯೂಸ್ಸೆ, ಪಿಮ್ಕೊ, ಕ್ಯಾಪಿಟಲ್ ಗ್ರೂಪ್ ಮತ್ತು ಸೈಮನ್ ವೈಸೆಂಥಾಲ್ ಸೆಂಟರ್‌ನಂತಹ ವಿಶ್ವವಿಖ್ಯಾತ ಸಂಸ್ಥೆಗಳ ಹೆಸರುಗಳಿವೆ.
ನಂತರ ಇಲಿನಾಯ್ಸ್ ಮತ್ತು ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಬಾರ್ ಅಸೋಸಿಯೇಷನ್‌ಗಳಲ್ಲಿ ಪ್ರವೇಶ ಪಡೆದ ಇವರು ಪೇಟೆಂಟ್, ಟ್ರೇಡ್‌ಮಾರ್ಕ್, ಬೌದ್ಧಿಕ ಆಸ್ತಿ (Intellectual Property) ಮತ್ತು ವಲಸೆ ಕಾನೂನು ವಕೀಲರಾಗಿ ಖಾಸಗಿ ಅಭ್ಯಾಸ ಆರಂಭಿಸಿದರು. ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ (USCIS) ಮುಂದೆ ಸಾವಿರಾರು ಕಕ್ಷಿದಾರರನ್ನು ಪ್ರತಿನಿಧಿಸಿ, ಗಡೀಪಾರು ಮತ್ತು ವಲಸೆ ನ್ಯಾಯಾಲಯದ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅಮೆರಿಕದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ, ಈಗ ಅವರದೇ ದೇಶದ ವಲಸೆ ವ್ಯವಸ್ಥೆಗೆ ವಂಚಿಸಿದ ಗಂಭೀರ ಆರೋಪದ ಮೇಲೆ ಅಮೆರಿಕ ಸರ್ಕಾರ ಅವರ ವಿರುದ್ಧ ಸಮರ ಸಾರಿದೆ.


