ಅಕ್ರಮ ವಲಸೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅಸ್ಸಾಂ ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆ ಹೊಸ ಆಧಾರ್ ಕಾರ್ಡ್ ವಿತರಣೆಯನ್ನು ನಿರ್ಬಂಧಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಈ ನಿರ್ಧಾರದ ಪ್ರಕಾರ, ಇನ್ನು ಮುಂದೆ ಸರ್ಕಾರದ ವಿಶೇಷ ಅನುಮತಿ ಪಡೆದ ನಂತರವೇ ಆಧಾರ್ ನೀಡಲಾಗುತ್ತದೆ.

ಈ ಕ್ರಮ ಏಕೆ?

  •  ಕೆಲವು ಜಿಲ್ಲೆಗಳಲ್ಲಿ ಇರುವ ಜನಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಧಾರ್‌ಗೆ ಬೇಡಿಕೆ
  •  ಹೀಗಾಗಿ ಅಕ್ರಮ ವಲಸಿಗರು ಆಧಾರ್ ಪಡೆಯುತ್ತಿದ್ದಾರೆ ಎಂದು ಅನುಮಾನ ಸೃಷ್ಟಿ
  •  ಅಸ್ಸಾಂನಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್‌ ಸೇರಿ ಹಲವು ಅಕ್ರಮ ವಲಸಿಗರ ಹಾವಳಿ
  • ಇಂಥವರಿಗೆ ಆಧಾರ್‌ ಸಿಗಬಾರದು ಎಂದು ಅಸ್ಸಾಂ ಬಿಜೆಪಿ ಸರ್ಕಾರದಿಂದ ನಿಯಮ
  • 18 ವರ್ಷ ಮೇಲ್ಪಟ್ಟವರಿಗೆ ಆಧಾರ್‌ ಬೇಕೆಂದರೆ ಸರ್ಕಾರದ ಅನುಮತಿ ಕಡ್ಡಾಯ
  •  18ಕ್ಕಿಂತ ಕೆಳಗಿನ ವಯಸ್ಸಿನವರಿಗೆ ಆಧಾರ್‌ ಕಾರ್ಡು ಪಡೆಯಲು ಸಮಸ್ಯೆ ಇಲ್ಲ

ಗುವಾಹಟಿ (ಜೂ.14): ರಾಜ್ಯದಲ್ಲಿ ಇನ್ನು ಮುಂದೆ 18 ವರ್ಷ ಮೇಲ್ಪಟ್ಟವರಿಗೆ ಹೊಸದಾಗಿ ಆಧಾರ್‌ ಕಾರ್ಡ್‌ ವಿತರಣೆ ಮಾಡದೇ ಇರಲು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸರ್ಕಾರ ನಿರ್ಧರಿಸಿದೆ.

ಅಕ್ರಮ ವಲಸೆಗೆ ಕಡಿವಾಣ, ಬಾಂಗ್ಲಾದೇಶೀಯರು ಸೇರಿದಂತೆ ನೆರೆಯ ದೇಶಗಳ ಜನರು ಅಕ್ರಮ ಮಾರ್ಗದಲ್ಲಿ ಭಾರತದಲ್ಲಿ ದಾಖಲೆ ಪಡೆಯದಂತೆ ತಡೆಯುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಒಂದೊಮ್ಮೆ ಅಗತ್ಯವಿದ್ದಲ್ಲಿ, ಅಂಥವರಿಗೆ ಆಧಾರ್‌ ಕೊಡುವ ಮೊದಲು ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ. ಬಳಿಕ ಸರ್ಕಾರ ಅದನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನಿಸಲಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಚಹಾ ತೋಟದ ಸಮುದಾಯ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಮುಂದಿನ ವರ್ಷದ ಏ.1ರ ವರೆಗೆ ಆಧಾರ್‌ ಕಾರ್ಡ್‌ ವಿತರಿಸಲಾಗುವುದು ಎಂದು ತಿಳಿಸಿದರು. 18 ವರ್ಷಕ್ಕಿಂತ ಕೆಳಗಿನವರು ಆಧಾರ್‌ ಪಡೆಯಲು ಯಾವುದೇ ನಿರ್ಬಂಧ ಇಲ್ಲ.