ಹುಳಿಯಾರು(ಆ.09): ಸರ್ಕಾರಿ ಆಸ್ಪತ್ರೆ ಮೆಟ್ಟಿಲನ್ನೇ ತುಳಿಯದೆ ಅಪಪ್ರಚಾರ ಮತ್ತು ಅಪನಂಬಿಕೆ ಬೇಡ ಎಂದು ಹುಳಿಯಾರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ವೆಂಕಟರಾಮಯ್ಯ ಹಾಗೂ ಎಲ್‌.ಎಚ್‌.ವಿ.ಅನುಸೂಯಮ್ಮ ಅವರು ಮನವಿ ಮಾಡಿದ್ದಾರೆ.

ಇಲ್ಲಿನ ಆಜಾದ್‌ ನಗರದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಸ್ತನ್ಯಪಾನ ಸಪ್ತಾಹದ ಕಾರ್ಯಕ್ರಮದಲ್ಲಿ ಸುವರ್ಣ ವಿದ್ಯಾ ಕೇಂದ್ರದ ರಾಮಕೃಷ್ಣಪ್ಪ ಅವರು ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೂ ಹದಿನೈದು ಇಪ್ಪತ್ತು ಸಾವಿರ ಕೇಳುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪುಕ್ಕಟ್ಟೆಹೆರಿಗೆ ಮಾಡಿ ಆರೈಕೆಗೆ ಹಣ ಸಹ ಕೊಡ್ತಾರೆ ಎಂದರು. ಇದನ್ನು ಕೇಳಿದ ಸಬೀಕರೊಬ್ಬರು ಸರ್ಕಾರಿ ಆಸ್ಪತ್ರೆಗೆ ಹೋಗಿ ಅಂತೀರಲ್ಲ ಅಲ್ಲಿ ವೈದ್ಯರೇ ಇರಲ್ಲ. ಹೋದರೆ ಸ್ಪಂದಿಸುವವರಿರಲ್ಲ ಎಂದು ದೂರಿದರು.

ಹಾಸನದಲ್ಲಿ ಸರ್ಕಾರಿ ರಕ್ತ ಪರೀಕ್ಷಾ ಕೇಂದ್ರ 8ರ ತನಕ ತೆರೆದಿರುವುದು ಕಡ್ಡಾಯ

ಈ ಆರೋಪಕ್ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೆಂಕಟರಾಮಯ್ಯ ಮತ್ತು ಅನುಸೂಯಮ್ಮ ಇಬ್ಬರೂ ಎದ್ದು ನಿಂತು ಖಾರವಾಗಿ ಪ್ರತಿಕ್ರಿಯಿಸಿದರು. ನೀವು ಎಷ್ಟುಬಾರಿ ಆಸ್ಪತ್ರೆಗೆ ಬಂದಿದ್ದೀರಿ, ಹೆರಿಗೆಗೆ ಎಷ್ಟುಜನರನ್ನು ಕರೆದುಕೊಂಡು ಬಂದಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ಹುಳಿಯಾರು ಆಸ್ಪತ್ರೆ ಈಗ 24*7 ಆಸ್ಪತ್ರೆಯಾಗಿದ್ದು, ಹಗಲಿನಲ್ಲಿ ಒಬ್ಬರು ವೈದ್ಯರು ರಾತ್ರಿ ಮೂರು ಮಂದಿ ನರ್ಸ್‌ ಇರ್ತಾರೆ. ಆಸ್ಪತ್ರೆಗೆ ಬಾರದೆ ಸುಮ್ಮನೆ ಅಪಪ್ರಚಾರ ಮತ್ತು ಅಪನಂಬಿಕೆ ಮಾಡಬೇಡಿ ಎಂದರು.

ತಾಯಿ ಕಾರ್ಡ್‌ಗೆ ಸರ್ಕಾರಿ ಆಸ್ಪತ್ರೆ, ಚಿಕಿತ್ಸೆ ಖಾಸಗಿ ಆಸ್ಪತ್ರೆ:

ಗರ್ಭಿಣಿಯರಂತೂ ತಾಯಿ ಕಾರ್ಡ್‌ ಪಡೆಯಲು ಮಧ್ಯರಾತ್ರಿ ಎನ್ನದೆ ಫೋನ್‌ ಮಾಡ್ತಾರೆ, ಪ್ರಭಾವಿಗಳಿಂದ ಒತ್ತಡ ತರುತ್ತಾರೆ. ಊಟ ತಿಂಡಿ ಮಾಡಲು ಬಿಡದೆ ದುಂಬಾಲು ಬಿದ್ದು ಕಾರ್ಡ್ ಮಾಡಿಸಿಕೊಳ್ಳುತ್ತಾರೆ. ಆದರೆ, ಹೆರಿಗೆಗೆ ಮಾತ್ರ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಹೆರಿಗೆ ನಂತರ ಪುನಃ ಮಕ್ಕಳಿಗೆ ಚುಚ್ಚುಮದ್ದು ಹಾಕಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಬಿಸಿಜಿ, ಪೆಂಟಾವೆಂಟ್‌, ಹೆಪಟೈಟಿಸ್‌ ಬಿ, ಒಪಿವಿ, ದಡಾರ ಹೀಗೆ ಒಂದೂವರೆ ವರ್ಷದವರೆಗೂ ಬಂದು ಚುಚ್ಚುಮದ್ದು ಹಾಕಿಸಿಕೊಳ್ತಾರೆ ಎಂದರು.

 ರಾಂಪುರ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಮೇಲೆ ರೋಗ ಪೀಡಿತ ಶ್ವಾನಗಳು..!

ಸರ್ಕಾರಿ ಆಸ್ಪತ್ರೆಗೆ ಬನ್ನಿ:

ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಹೆರಿಗೆ ಸೌಲಭ್ಯಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಕಷ್ಟವಾದರೆ 108 ಆಬ್ಯುಲೆನ್ಸ್‌ನಲ್ಲೇ ತಾಲೂಕು ಆಸ್ಪತ್ರೆಗೆ ಕಳುಹಿಸಿಕೊಟ್ಟು ಉಚಿತವಾಗಿ ಸಿಜೇರಿಯನ್‌ ಹೆರಿಗೆ ಸಹ ಮಾಡಿಸಿ 48 ಗಂಟೆಗಳ ಕಾಲ ಗರ್ಭಿಣಿ ಸಹಾಯಕರಿಗೆ ಊಟ, ತಿಂಡಿ ಕೊಟ್ಟು ನಂತರ ಮಗು-ನಗು ವಾಹನದಲ್ಲಿ ಮನೆಗೆ ಕಳುಹಿಸಿಕೊಡಲಾಗುತ್ತದೆ. ಹಾಗಾಗಿ ತಾಯಿ ಕಾರ್ಡ್‌ ಪಡೆದವರೆಲ್ಲರೂ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ಬನ್ನಿ ಎಂದು ಮನವಿ ಮಾಡಿದರು.