ಹಾಸನ(ಜು.21): ಬೇಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ರಕ್ತ ಪರೀಕ್ಷಾ ಕೇಂದ್ರ ರಾತ್ರಿ 8 ಗಂಟೆಯವರೆಗೆ ಕಡ್ಡಾಯವಾಗಿ ತೆರೆದಿರಲಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಮಲ್ಲಪ್ಪ ಅವರು ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ರಕ್ತ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ಉತ್ತರಿಸಿದ ಅವರು, ಹೆಚ್ಚುವರಿ ಸಿಬ್ಬಂದಿ ನೇಮಿಸಲು ಮುಂದಾಗುವುದಾಗಿ ತಿಳಿಸಿದರು.

ಇನ್ನು ಮುಂದೆ ನಾಲ್ಕು ಗಂಟೆಗೆ ಬಾಗಿಲು ಹಾಕುತ್ತಿದ್ದ ಸಮಯವನ್ನು ಬದಲಿಸಿ ಕಡ್ಡಾಯವಾಗಿ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸಬೇಕು. ನೀವೆ ಪಾಳಿಯನ್ನು ಹಾಕಿಕೊಂಡು ಸರದಿಯಂತೆ ಒಬ್ಬರಾದ ಮೇಲೊಬ್ಬರಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಈ ಬಾರಿ ಸಾಂಕ್ರಾಮಿಕ ರೋಗ ಕಡಿಮೆ:

ತಾಲೂಕಿನಲ್ಲಿ ಕಳೆದ ಬಾರಿಗೆ ಹೊಲಿಸಿದರೆ, ಈ ಬಾರಿ ಚಿಕನ್‌ ಗುನ್ಯಾ ಡೆಂಘೀ ವೈರಲ್‌ ಜ್ವರದ ಪ್ರಮಾಣ ಈ ಬಾರಿ ಕಡಿಮೆ ಇದೆ. ಪಟ್ಟಣದ ಮುಸ್ತಾಪ ಬೀದಿ ಪುರಿಬಟ್ಟಿದಾವೂದ್‌ ಬೀದಿಗಳಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ ನೀರು ನಿಂತಿದ್ದು, ಲಾರ್ವಾ ಸೊಳ್ಳೆಗಳು ಹೆಚ್ಚುತ್ತಿದೆ. ಈಗಾಗಲೇ ಅವುಗಳ ನಿರ್ಮೂಲನೆಗೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಆಸ್ಪತ್ರೆಯ ಸೀಮಿತ ಸಿಬ್ಬಂದಿ ಮನೆ ಮನೆಗೆ ತೆರಳಿ ಮನೆ ಮುಂದಿರುವ ಬಕೆಟ್‌, ಪ್ಲಾಸ್ಟಿಕ್‌, ಕಾಯಿ ಚಿಪ್ಪು ಮುಂತಾದ ಕಡೆ ಇರುವ ನೀರುಗಳನ್ನು ಚೆಲ್ಲಿ ಸಿಂಪರಣೆ ಮಾಡುತ್ತಿದ್ದಾರೆ. ಲಾರ್ವ ಸೊಳ್ಳೆಗಳ ನಿರ್ಮೂಲನೆಗೆ ಕೇವಲ ಆಸ್ಪತ್ರೆ ಸಿಬ್ಬಂದಿಯಿಂದ ಮಾತ್ರ ಸಾಧ್ಯವಾಗುವುದಿಲ್ಲ. ಸಾರ್ವಜನಿಕರು, ಗ್ರಾಮಸ್ಥರು ಕೂಡ ಸ್ವಚ್ಛತೆಯ ಬಗ್ಗೆ ಗಮನ ಹರಿಸಿದಾಗ ರೋಗ ಬರದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಜಿಲ್ಲಾ ಕೀಟಶಾಸ್ತ್ರ ತಜ್ಞ ರಾಕೇಶ್‌ ಕುಲಕರ್ಣಿ, ಆರೋಗ್ಯ ಕಲ್ಯಾಣ ಸಹಾಯಕ ಕಲ್ಲೇಶ್‌, ತಾಲೂಕು ವೈದ್ಯಾಧಿಕಾರಿ ವಿಜಯ್‌, ಆಸ್ಪತ್ರೆ ಆಡಳಿತಾಧಿಕಾರಿ ನರಸೇಗೌಡ, ಆರೋಗ್ಯ ಶಿಕ್ಷಣ ಅಧಿಕಾರಿ ಉಷಾ ಇದ್ದರು.