ಹಳಿಯಾಳ(ಮೇ.11): ಭಟ್ಕಳ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಹೊರ ಜಿಲ್ಲೆಯ ತನಿಖಾ ಕೇಂದ್ರಗಳನ್ನು ಇನ್ನಷ್ಟು ಭದ್ರತೆಗೊಳಿಸುವಂತೆ ಉಪ ವಿಭಾಗಧಿಕಾರಿಗಳು ಆಯಾ ತಹಸೀಲ್ದಾರರಿಗೆ ನಿರ್ದೇಶಿಸಿದ್ದಾರೆ.

ಈ ಬಗ್ಗೆ ಕಾರವಾರ ಉಪವಿಭಾಗದ ಕಾರವಾರ, ಜೋಯಿಡಾ, ದಾಂಡೇಲಿ, ಹಳಿಯಾಳ ತಾಲೂಕುಗಳ ತಹಸೀಲ್ದಾರರ ಜೊತೆ ಉಪವಿಭಾಗಧಿಕಾರಿ ಪ್ರಿಯಾಂಕಾ ಎಮ್‌. ಅವರು ವಿಡಿಯೋ ಕಾನ್ಪೆರನ್ಸ್‌ ಮೂಲಕ ನಡೆಸಿದ ಸಭೆಯಲ್ಲಿ ಈ ನಿರ್ದೇಶನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭಟ್ಕಳದ 7 ಸೋಂಕಿಗೆ ಮಂಗಳೂರಿನ ಆಸ್ಪತ್ರೆ ಕಾರಣ.. ಎಚ್ಚರ..ಎಚ್ಚರ

ಬೆಳಗಾವಿ ಮತ್ತು ಧಾರವಾಡದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿದೆ ಈಗಲೂ ಹೆಚ್ಚುತ್ತಿದೆ. ಆ ಕಾರಣಕ್ಕೆ ಬೆಳಗಾವಿಗೆ ಹತ್ತಿರವಾಗಿರುವ ಜೋಯಿಡಾ, ದಾಂಡೇಲಿ, ಹಳಿಯಾಳಕ್ಕೆ ಅವರ ಸೋಂಕಿತನ ಭಯ ಇದ್ದೇ ಇದೆ. ಬೆಳಗಾವಿ, ಹುಬ್ಬಳ್ಳಿಯಿಂದಲೇ ಈ ಭಾಗಕ್ಕೆ ತರಕಾರಿ ಹಾಗೂ ರೇಶನ್‌ಗಳು ಬರುತ್ತಿದೆ. ಆ ಕಾರಣಕ್ಕೆ ಇಲ್ಲಿಯ ಸಂಚಾರವನ್ನು ಹಿಂದೆಯೇ ಬಿಗಿಗೊಳಿಸಲಾಗಿತ್ತು. ಲಾಕ್‌ಡೌನ್‌ ಸಡಿಲಿಕೆಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಇಲ್ಲಿಯ ಸಂಚಾರದಲ್ಲಿಯೂ ಒಂದಿಷ್ಟುರಿಯಾಯಿತಿ ನೀಡಲಾಗಿತ್ತು. ಇದೀಗ ಮತ್ತೆ ಭಟ್ಕಳದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಇಲ್ಲಿಯ ಸಂಚಾರ ಹಾಗೂ ತನಿಖಾ ಕೇಂದ್ರಗಳನ್ನು ಭದ್ರಗೊಳಿಸಲಾಗಿದೆ.

ಸ್ಥಳದಲ್ಲಿಯೇ ಕೊರೆಂಟೈನ್‌:

ಮೊದಲು ಯಾವ ಪ್ರದೇಶದವರು ಬರುತ್ತಾರೋ ಹಾಗೆ ಬಂದವರಿಗೆ ಅವರವರ ಊರಲ್ಲಿಯೇ ಹೋಮ್‌ ಕ್ವಾರಂಟೈನ್‌ ಇಡುವ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಭಟ್ಕಳದ ಪ್ರಕರಣ ಹೆಚ್ಚುತ್ತಿದ್ದಂತೆಯೇ ಹೊರಗಿನಿಂದ ಬರುವವರು ಯಾವ್ಯಾವ ಪ್ರದೇಶದಲ್ಲಿ ಯಾವ್ಯಾವ ತನಿಖಾ ಕೇಂದ್ರಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೋ ಅಲ್ಲಿಯೇ ಕ್ವಾರಂಟೈನ್‌ ಮಾಡಲು ಸೂಚಿಸಲಾಗಿದೆ. ಅವರ ಪ್ರಕಾರ ಗೋವಾದಿಂದ ಬಂದವರು ಅನಮೋಡ್‌ ತನಿಖಾ ಕೇಂದ್ರದಲ್ಲಿ ಸಿಕ್ಕರೆ ಅವರಿಗೆ ಅನಮೋಡದಲ್ಲಿಯೇ ಕ್ವಾರೆಂಟೈನ್‌ ಮಾಡಲಾಗುತ್ತದೆ. ಬೆಳಗಾವಿಯಿಂದ ಬರುವವರಿಗೆ ರಾಮನಗರದಲ್ಲಿ, ಧಾರವಾಡ ಕಡೆಯಿಂದ ಬಂದರೆ ಅವರಿಗೆ ಹಳಿಯಾಳದಲ್ಲಿ ಕ್ವಾರೆಂಟೈನ್‌ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಟ್ಕಳದಲ್ಲಿ ಕೊರೋನಾ ಕರಿನೆರಳು: 8 ಜನರಿಗೆ ಸೋಂಕು

ದಾಂಡೇಲಿ-ಹಳಿಯಾಳ-ಜೋಯಿಡಾ ಇವು ಇದುವರೆಗೂ ಕೊರೋನಾ ಸೋಂಕಿನ ವಿಚಾರದಲ್ಲಿ ಮುಕ್ತವಾಗಿದ್ದು, ಸ್ಥಳೀಯ ಅಧಿಕಾರಿಗಳು ಕೈಗೊಂಡ ಮುಂಜಾಗ್ರತೆಯಿಂದಾಗಿ ಇದುವರೆಗೂ ಇಲ್ಲಿ ಸೋಂಕಿತರಿಲ್ಲ. ಆದರೆ ಇದರ ಅಕ್ಕ ಪಕ್ಕದ ಜಿಲ್ಲೆಗಳಾದ ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಕೊರೊನಾ ಸೋಂಕಿತರಿದ್ದು, ಅವರ ಸಂಖ್ಯೆ ಬೆಳಗಾವಿಯಲ್ಲಂತೂ ದಿನೇ ದಿನೇ ಹೆಚ್ಚುತ್ತಲಿದೆ. ಹಳಿಯಾಳ- ದಾಂಡೇಲಿಗಳಿಗೆ ಬೆಳಗಾವಿ, ಹುಬ್ಬಳ್ಳಿಯಿಂದ ತರಕಾರಿ, ದಿನಸಿಗಳು ಪ್ರತಿನಿತ್ಯ ಬರುತ್ತಿದ್ದು, ಹೀಗೆ ಬರುವಾಗ ಅತ್ಯವಶ್ಯ ಜಾಗೃತಿ ವಹಿಸಬೇಕಾದ ಅಗತ್ಯವಿದೆ. ಜೊತೆಗೆ ಲಾಕ್‌ಡೌನ್‌ ಸಡಿಲಿಕೆ ಹಾಗೂ ಹೊರ ಊರಲ್ಲಿದ್ದ ಕಾರ್ಮಿಕರು ಬರಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಮುಂಬೈ ಕೆಂಪು ವಲಯಗಳಿಂದಲೂ ಈಗಾಗಲೇ ಹಳಿಯಾಳ ಪಟ್ಟಣಕ್ಕೆ ಪ್ರದೇಶದಿಂದ 600ಕ್ಕೂ ಅಧಿಕ ಜನ ಬಂದಿದ್ದಾರೆ. ಅವರಲ್ಲಿ 282 ಜನರನ್ನು ತಾಂತ್ರಿಕ ಅಳವಡಿಕೆ ಆಧಾರದ ಮೇಲೆ ನಿಗಾ ವಹಿಸಲಾಗಿದೆ ಹಾಗೂ ಅವರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಭಟ್ಕಳ ನಗರದಲ್ಲಿ ಈಗಾಗಲೇ ಕೊರೊನಾ ವೈರಸ್‌ ಮತ್ತೆ ವಕ್ಕರಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸಾಮಾಜಿಕ ಆಂತರ ಕಾಪಾಡದೇ ಸುಮ್ಮನೆ ಸುತ್ತಾಡುತ್ತಿರುವ ಜನರನ್ನು ಹಾಗೂ ಸಮಯಕ್ಕೆ ಸರಿಯಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲು ಹಳಿಯಾಳ ತಾಲೂಕಾಡಳಿತ ತಹಸೀಲ್ದಾರ ವಿದ್ಯಾದರ ಗುಳಗುಳೆ ಅವರ ಮುಂದಾಳತ್ವದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.

ಬೀದಿಗಿಳಿದ ಅಧಿಕಾರಿಗಳು:

ತಾಲೂಕಾಡಳಿತ ಅಧಿಕಾರಿಗಳಾದ ಸಿಪಿಐ ಬಿ.ಎಸ್‌. ಲೋಕಾಪೂರ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೇ, ಹಳಿಯಾಳ ಹೋಬಳಿ ಮಟ್ಟದ ನೋಡಲ್‌ ಅಧಿಕಾರಿ ರವೀಂದ್ರ ಮೆಟಗುಡ್‌ ಹಾಗೂ ಪುರಸಭೆ ಸಿಬ್ಬಂದಿ ಬೀದಿಗಳಿದು ಸಾರ್ವಜನಿಕರಿಗೆ ತಿಳಿಹೇಳಿದರು. ರಸ್ತೆಗಳಲ್ಲಿ ಅನಾವಶ್ಯಕವಾಗಿ ಓಡಾಡಬಾರದು. ಅಂಗಡಿ ಮಾಲೀಕರು ಬಂದಂತಹ ಗ್ರಾಹಕರಿಗೆ ಮಾಸ್ಕ್‌ ಧರಿಸಿದರೆ ಮಾತ್ರ ಅವರಿಗೆ ಬೇಕಾಗುವ ವಸ್ತುಗಳನ್ನು ನೀಡಬೇಕಾಗಿ ವಾಹನ ಮಾಲೀಕರು ಬೇಕಾಬಿಟ್ಟಿಮನೆಯಿಂದ ಹೊರ ಬರದಂತೆ ನೋಡಿಕೊಳ್ಳಿ ಎಂದು ಸಾರ್ವಜನಿಕರಿಗೆ ತಿಳಿ ಹೇಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಬೆಳಗಾವಿ ರೆಡ್‌-ಝೋನ್‌ನಿಂದ ಬಂದ ಕೆಲವರಿಗೆ ಹೋಮ್‌ ಕ್ವಾರೆಂಟೈನ್‌ನಲ್ಲಿ ಯಾವ ರೀತಿಯಾಗಿ ನಿಯಮಗಳನ್ನು ಪಾಲಿಸಬೇಕು ಎಂದು ನೋಡಲ್‌ ಅಧಿಕಾರಿಗಳು ಮನೆಗೆ ಹೋಗಿ ಮಾಹಿತಿ ನೀಡಿದರು. ಲಾಕ್‌ಡೌನ್‌ ಸಡಿಲಿಕೆ ಆದ ದಿನದಿಂದ ಅನವಶ್ಯಕವಾಗಿ ಮಾಸ್ಕ್‌ ಧರಿಸದೇ ಓಡಾಡುವವರ ಮೇಲೆ ಹಾಗೂ ಸಾಮಾಜಿಕ ಅಂತರ ಕಾಪಾಡದೇ ಇರುವವರ ಮೇಲೆ ದಂಡ ವಿಧಿಸಲಾಗುತ್ತಿದೆ. ಇಲ್ಲಿಯವರೆಗೆ ಮಾಸ್ಕ್‌ ಧರಿಸದೇ ಇದ್ದವರ ಮೇಲೆ ಅಂದಾಜು 6 ಸಾವಿರ ಹಾಗೂ ಸಾಮಾಜಿಕ ಅಂತರ ಕಾಪಾಡದೇ ಓಡಾಡಿದವರ ಮೇಲೆ 4000 ದಂಡ ವಿಧಿಸಲಾಗುವುದು ಎಂದು ತಾಲೂಕಾಡಳಿತ ಸಾರ್ವಜನಿಕರನ್ನು ಎಚ್ಚರಿಸಿದೆ.