ದಸರಾ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾವ್ ನಡುವೆ ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಆದರೆ, ಈ ರೈಲು ಮಂಗಳೂರು ಜಂಕ್ಷನ್ ಮತ್ತು ಸೆಂಟ್ರಲ್ ನಿಲ್ದಾಣಗಳನ್ನು ಕೈಬಿಟ್ಟಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಮಂಗಳೂರು (ಅ.15): ದಸರಾ ಹಬ್ಬದ ಅಂಗವಾಗಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ-ಮಡಗಾವ್- ಬೆಂಗಳೂರು ದಂಡು ಮಧ್ಯೆ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೇ ಮಾಡಿದೆ. 06591 ಸಂಖ್ಯೆಯ ಯಶವಂತಪುರ-ಮಡಗಾವ್ ಎಕ್ಸ್ಪ್ರೆಸ್ ವಿಶೇಷ ರೈಲು ಅ.16ರ ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, 17ರ ಸಂಜೆ 6.10ಕ್ಕೆ ಮಡಗಾವ್ ತಲುಪಲಿದೆ. 06592 ರೈಲು 18ರಂದು ಬೆಳಗ್ಗೆ 8.40ಕ್ಕೆ ಮಡಗಾವ್ನಿಂದ ಹೊರಟು ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು ದಂಡು ತಲುಪಲಿದೆ.
ಎರಡೂ ದಿಕ್ಕುಗಳಲ್ಲಿ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾ, ಕಾರವಾರ ಮತ್ತು ಕಣಕೋಣ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ. ಈ ವಿಶೇಷ ರೈಲಿನಲ್ಲಿ 18 ಕೋಚ್ ಇರಲಿವೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ಈ ರೈಲು ಮಡಗಾವ್ನಿಂದ ಬರುವಾಗ ಯಶವಂತಪುರದ ಬದಲಿಗೆ ಎಸ್ಎಂವಿಟಿ ರೈಲು ನಿಲ್ದಾಣದಲ್ಲಿ ನಿಲುಗಡೆ ಇರಲಿದೆ.
ಮಂಗಳೂರಿಗರ ಅಸಮಾಧಾನ:
ದಸರಾ ಸಂದರ್ಭವೂ ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳು ಬೆಂಗಳೂರಿನ ವಿಶೇಷ ರೈಲು ಸಂಚಾರದಿಂದ ವಂಚಿತಗೊಂಡಿವೆ. ಚೌತಿ ವೇಳೆಯೂ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ಸೌಲಭ್ಯ ಇರಲಿಲ್ಲ. ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಬಳಿಕವೂ ಮಂಗಳೂರನ್ನು ವಿಶೇಷ ರೈಲು ಹೋರಾಟದಿಂದ ನೈರುತ್ಯ ರೈಲ್ವೆ ಹೊರಗಿಡುತ್ತಿರುವುದು ವಿಪರ್ಯಾಸ ಎಂದು ರೈಲ್ವೆ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.


