ಯಶವಂತಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ರೈಲಿನಲ್ಲಿ ನೀರಿನ ಸೌಲಭ್ಯವಿಲ್ಲದ ಕಾರಣ ಪ್ರಯಾಣಿಕರೊಬ್ಬರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಸೇವಾ ನ್ಯೂನತೆ ಎಸಗಿದ ರೈಲ್ವೆ ಇಲಾಖೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ. ಟಿಕೆಟ್ ಹಣದ ಜೊತೆಗೆ ಪರಿಹಾರ ಹಾಗೂ ಖರ್ಚು ವೆಚ್ಚಗಳನ್ನು ಪಾವತಿಸುವಂತೆ ಆದೇಶಿಸಲಾಗಿದೆ.

ಶಿವಮೊಗ್ಗ: ರೈಲಿನಲ್ಲಿ ನೀರಿನ ಸೌಲಭ್ಯ ಕಲ್ಪಿಸದೆ ಸೇವಾ ನ್ಯೂನತೆ ಎಸಗಿದ್ದಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ.

ಯಾವ ರೈಲಲ್ಲಿ ಸಮಸ್ಯೆ?

ಶಿವಮೊಗ್ಗದ ಬಸವನಗುಡಿಯ ಪಿ.ಡಬ್ಲ್ಯೂಡಿ ವಸತಿ ಗೃಹದ ನಿವಾಸಿ ನಾಗೇಂದ್ರ ಅವರು ತಮ್ಮ ಕುಟುಂಬದವರು ಮತ್ತು ಸಂಬಂಧಿಕರು ಸೇರಿ ಒಟ್ಟು 24 ಜನರು ತಿರುಪತಿ ತಿರುಮಲ ದೇವಸ್ಥಾನದ ದರ್ಶನ ಮುಗಿಸಿ ಯಶವಂತಪುರದಿಂದ ಶಿವಮೊಗ್ಗಕ್ಕೆ ತೆರಳಲು 1000 ರು. ಪಾವತಿಸಿ ಸಾಮಾನ್ಯ ಟಿಕೆಟ್‌ಗಳನ್ನು ಖರೀದಿಸಿ ರೈಲು ಸಂಖ್ಯೆ: 66575ರಲ್ಲಿ ಪ್ರಯಾಣಿಸುತ್ತಿದ್ದರು.

ನೀರಿಲ್ಲವೆಂದು ಮತ್ತೊಂದು ರೈಲು ಹತ್ತಿದ ಗ್ರಾಹಕ

ಆದರೆ, ರೈಲಿನ ಬಾತ್ ರೂಮ್‌ಗಳಲ್ಲಿ ನೀರಿನ ಸೌಲಭ್ಯವಿರಲಿಲ್ಲ. ಈ ಕುರಿತು ತುಮಕೂರು ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಬಳಿ ದೂರು ದಾಖಲಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ತುಮಕೂರಿನಲ್ಲಿ ಇಳಿದು ಮತ್ತೊಂದು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಹೆಚ್ಚುವರಿಯಾಗಿ 1760 ರು. ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸಬೇಕಾಯಿತು. ನಂತರ ಎದುರುದಾರರಿಗೆ ನೋಟಿಸ್ ನೀಡಿ, ರೈಲಿನಲ್ಲಿ ನೀರಿನ ಸೌಲಭ್ಯವಿಲ್ಲದೆ ಸೇವಾ ನ್ಯೂನತೆ ಎಸಗಿರುವುದಾಗಿ ತಿಳಿಸಿ ಟಿಕೆಟ್ ಹಣ ಹಿಂದಿರುಗಿಸಲು ಕೋರಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ದೂರುದಾರರು ಮತ್ತು ಎದುರುದಾರರು ಸಲ್ಲಿಸಿದ ದಾಖಲಾತಿಗಳು ಹಾಗೂ ವಾದ-ವಿವಾದಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ತೀರ್ಪು ನೀಡಿದೆ.

1 ಮತ್ತು 2ನೇ ಎದುರುದಾರರು (ಸ್ಟೇಷನ್ ಮಾಸ್ಟರ್, ಸೌತ್ ವೆಸ್ಟರ್ನ್ ರೈಲ್ವೆ, ಬೆಂಗಳೂರು ಹಾಗೂ ಸ್ಟೇಷನ್ ಮಾಸ್ಟರ್, ತುಮಕೂರು ರೈಲು ನಿಲ್ದಾಣ) ರೈಲು ಟಿಕೆಟ್ ಮೊತ್ತ 1000 ರು. ಗಳಿಗೆ 2025 ಏಪ್ರಿಲ್‌ 15 ರಿಂದ ವಾರ್ಷಿಕ ಶೇ. 6 ರಂತೆ ಬಡ್ಡಿ ಸೇರಿಸಿ ಈ ಆದೇಶವಾದ 45 ದಿನಗಳ ಒಳಗೆ ವಾಪಸ್ ನೀಡಬೇಕು. ತಪ್ಪಿದಲ್ಲಿ ಪೂರ್ತಿ ಹಣ ಪಾವತಿಸುವವರೆಗೆ ವಾರ್ಷಿಕ ಶೇ.10 ರಂತೆ ಬಡ್ಡಿ ವಿಧಿಸಿದೆ. ಹಾಗೂ ದೂರುದಾರರಿಗೆ ಪರಿಹಾರವಾಗಿ 10 ಸಾವಿರ ರು. ಹಾಗೂ ದೂರಿನ ಖರ್ಚು ವೆಚ್ಚಕ್ಕಾಗಿ 5 ಸಾವಿರ ಗಳನ್ನು ಕೂಡ ಆದೇಶದ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ಪೂರ್ತಿ ಹಣ ಪಾವತಿಸುವವರೆಗೆ ವಾರ್ಷಿಕ ಶೇ. 10ರಂತೆ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ಅ.23ರಂದು ತೀರ್ಪು ನೀಡಿದೆ