ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ವೇಳೆ ಓರ್ವ ಪಾಕಿಸ್ತಾನಿ ಸೇರಿ 716 ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ. ಇವರು ಅಕ್ರಮವಾಗಿ ಭಾರತದ ಮತದಾರರ ಗುರುತಿನ ಚೀಟಿ ಹೊಂದಿದ್ದು, ಇದೀಗ ಇವರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.
ಬೆಂಗಳೂರು: ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆ ವೇಳೆ ಓರ್ವ ಪಾಕಿಸ್ತಾನಿ ಪ್ರಜೆ ಸೇರಿ ಒಟ್ಟು 716 ವಿದೇಶಿ ಪ್ರಜೆಗಳು ಪತ್ತೆ ಆಗಿದ್ದಾರೆ.
ಅಚ್ಚರಿಯೆಂದರೆ, ಬಿಬಿಎಂಪಿ ಉತ್ತರ ಜಿಲ್ಲೆವೊಂದರಲ್ಲೇ 545 ನೇಪಾಳಿ ಪ್ರಜೆಗಳು, 24 ಮಂದಿ ಯುಎಸ್, 8 ಮಂದಿ ಆಸ್ಟ್ರೇಲಿಯಾ, ಇಬ್ಬರು ಕೆನಡಾ, 3 ಮಂದಿ ದುಬೈ, ಓರ್ವ ಕೆನಡಾ ಸೇರಿದಂತೆ ಒಟ್ಟು 583 ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ.
ಉಳಿದಂತೆ ದಕ್ಷಿಣ ಕನ್ನಡ, ಗದಗ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಹಾಸನ ಜಿಲ್ಲೆಗಳಲ್ಲೂ ನೇಪಾಳ, ಯುಕೆ, ನಾರ್ವೆ, ಐರ್ಲೆಂಡ್, ಬಾಂಗ್ಲಾದೇಶ, ಫ್ರಾನ್ಸ್, ನೆದರ್ಲೆಂಡ್ ಸೇರಿ ವಿವಿಧ ದೇಶಗಳ ಪ್ರಜೆಗಳಿದ್ದಾರೆ.
ಎನ್ಯುಮೆರೇಷನ್ ಫಾರ್ಮ್ ಭರ್ತಿ
ಈ ವಿದೇಶಿ ಪ್ರಜೆಗಳು ಎಸ್ಐಆರ್ ಪೂರ್ವದ ರಾಜ್ಯ ಮತದಾರರ ಪಟ್ಟಿಯಲ್ಲಿದ್ದರು. ಇವರು ಭಾರತದ ಮತದಾರರ ಗುರುತಿನ ಚೀಟಿಯನ್ನೂ ಹೊಂದಿದ್ದರು. ಎಸ್ಐಆರ್ ಸಂದರ್ಭದಲ್ಲಿ ಎನ್ಯುಮೆರೇಷನ್ ಫಾರ್ಮ್ ಭರ್ತಿ ಮಾಡುವಾಗ ಪೋಷಕರ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಆರ್ ವೇಳೆ ಈ ವಿದೇಶಿ ಪ್ರಜೆಗಳ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ವಿದೇಶಿ ಪ್ರಜೆಗಳು ಕರ್ನಾಟಕದ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.






