ತೀವ್ರ ಬರಗಾಲದ ನಡುವೆಯೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಕರ್ನಾಟಕದ ತೀವ್ರ ಆಕ್ಷೇಪದ ಹೊರತಾಗಿಯೂ ಸಿಡಬ್ಲ್ಯೂಆರ್ಸಿ ಶಿಫಾರಸನ್ನು ಪ್ರಾಧಿಕಾರ ಎತ್ತಿಹಿಡಿದಿದೆ.
ನವದೆಹಲಿ (ಅ.23): ತೀವ್ರ ಬರಗಾಲ ಹಾಗೂ ಕುಡಿಯುವ ನೀರಿನ ಅಭಾವದಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ತಮಿಳುನಾಡಿಗೆ ನೀರು ಬಿಡುವಂತೆ ಮಾಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಎತ್ತಿಹಿಡಿದಿದೆ. ಇದರೊಂದಿಗೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರನ್ನು ಹರಿಸುವಂತೆ ಪ್ರಾಧಿಕಾರವು ಕರ್ನಾಟಕಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಕುರಿತು ಮುಂದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯನ್ನು ಬರುವ ನವೆಂಬರ್ 6 ರಂದು ನಡೆಸಲು ತೀರ್ಮಾನಿಸಲಾಗಿದೆ.
ಸಿಡಬ್ಲ್ಯೂಆರ್ಸಿ ಶಿಫಾರಸಿಗೆ ಕರ್ನಾಟಕದ ತೀವ್ರ ಆಕ್ಷೇಪ
ಇದಕ್ಕೂ ಮುನ್ನ, ತಮಿಳುನಾಡಿಗೆ 15 ದಿನಗಳ ಕಾಲ ದಿನವೂ 3,000 ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯೂಆರ್ಸಿ (CWRC) ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸಿಗೆ ಕರ್ನಾಟಕ ಸರ್ಕಾರವು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇಡೀ ಕರ್ನಾಟಕದಲ್ಲಿ, ಅದರಲ್ಲೂ ಪ್ರಮುಖವಾಗಿ ಕಾವೇರಿ ಜಲಾನಯನ ಪ್ರದೇಶದ ಬಹುತೇಕ ತಾಲ್ಲೂಕುಗಳಲ್ಲಿ ಬರಗಾಲ ಘೋಷಣೆಯಾಗಿದೆ. ನಮ್ಮಲ್ಲೇ ಕುಡಿಯಲು ಹಾಗೂ ಕೃಷಿಗೆ ತೀವ್ರ ನೀರಿನ ಅಭಾವವಿರುವಾಗ ತಮಿಳುನಾಡಿಗೆ ಯಾವುದೇ ಕಾರಣಕ್ಕೂ 3,000 ಕ್ಯೂಸೆಕ್ ನೀರನ್ನು ಹರಿಸಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿತ್ತು.
ದೆಹಲಿಯ ಸಿಡಬ್ಲ್ಯೂಎಮ್ಎ ಸಭೆಯಲ್ಲಿ ನಡೆದಿದ್ದೇನು?
ಸಿಡಬ್ಲ್ಯೂಆರ್ಸಿ ಮಾಡಿದ್ದ ನೀರು ಹಂಚಿಕೆಯ ಶಿಫಾರಸನ್ನು ಪ್ರಶ್ನಿಸಿ ಕರ್ನಾಟಕ ಸಲ್ಲಿಕೆ ಮಾಡಿದ್ದ ಆಕ್ಷೇಪಣೆಯ ಹಿನ್ನೆಲೆಯಲ್ಲಿ, ನವದೆಹಲಿಯಲ್ಲಿರುವ ಸಿಡಬ್ಲ್ಯೂಎಮ್ಎ ಕಚೇರಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಮಹತ್ವದ ಸಭೆ ನಡೆಯಿತು.
ಈ ಸಭೆಯಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಗೌರವ್ ಗುಪ್ತಾ ಅವರು ಭಾಗವಹಿಸಿದ್ದರು. ಸಭೆ ಆರಂಭವಾಗುತ್ತಿದ್ದಂತೆ, ಸಿಡಬ್ಲ್ಯೂಆರ್ಸಿ ನೀಡಿದ್ದ ನೀರು ಹರಿಸುವ ಶಿಫಾರಸಿಗೆ ಗೌರವ್ ಗುಪ್ತಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲದ ಪರಿಸ್ಥಿತಿ, ಜಲಾಶಯಗಳಲ್ಲಿರುವ ನೀರಿನ ಸಂಗ್ರಹದ ಕೊರತೆ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಅಗತ್ಯತೆಯನ್ನು ಆಧಾರಸಹಿತವಾಗಿ ವಿವರಿಸಿದರು.
ಅಂತಿಮವಾಗಿ ಸಿಡಬ್ಲ್ಯೂಆರ್ಸಿ ನಿರ್ಧಾರವೇ ಎತ್ತಿಹಿಡಿದ ಪ್ರಾಧಿಕಾರ
ಕರ್ನಾಟಕದ ಅಧಿಕಾರಿಗಳು ರಾಜ್ಯದ ವಾಸ್ತವ ಬರಗಾಲದ ಪರಿಸ್ಥಿತಿಯನ್ನು ಪ್ರಾಧಿಕಾರದ ಮುಂದೆ ಮನವರಿಕೆ ಮಾಡಿಕೊಡಲು ಸತತ ಯತ್ನ ನಡೆಸಿದರೂ, ಅಂತಿಮವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಸಿಡಬ್ಲ್ಯೂಆರ್ಸಿ (CWRC) ನೀಡಿದ್ದ ಶಿಫಾರಸನ್ನೇ ಎತ್ತಿಹಿಡಿದಿದೆ. ತಮಿಳುನಾಡಿನ ಸುಳ್ಳು ವಾದಗಳಿಗೆ ಮಣಿದಂತೆ ಕಾಣುತ್ತಿರುವ ಪ್ರಾಧಿಕಾರ, ತಕ್ಷಣವೇ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಕಾಲ ದಿನಕ್ಕೆ 3,000 ಕ್ಯೂಸೆಕ್ ನೀರನ್ನು ಹರಿಸಲೇಬೇಕು ಎಂದು ಆದೇಶಿಸಿದೆ. ರಾಜ್ಯದಲ್ಲಿ ಮಳೆಯಿಲ್ಲದೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಬರಿದಾಗುತ್ತಿರುವ ಬೆನ್ನಲ್ಲೇ, ಪ್ರಾಧಿಕಾರದ ಈ ಆದೇಶವು ಕಾವೇರಿ ಪಾತ್ರದ ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಕಳವಳ ಮತ್ತು ಆಕ್ರೋಶವನ್ನುಂಟುಮಾಡಿದೆ.


