ಶಿವಮೊಗ್ಗದ ಶಿಕಾರಿಪುರದಲ್ಲಿ ಹರಿಯುವ ನೀರಿನ ಕಾಲುವೆ ಮೇಲೆ ಬೃಹತ್ ಡೆಕ್ ಅಳವಡಿಸಿ 10 ಎಕರೆ ವಿಸ್ತೀರ್ಣದ ಸುಸಜ್ಜಿತ ಸಂತೆ ಮೈದಾನ ನಿರ್ಮಿಸಲಾಗಿದೆ. ಇದರೊಂದಿಗೆ ರೈತರ ಅನುಕೂಲಕ್ಕಾಗಿ 15 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಕೂಡ ತಲೆಎತ್ತಿದೆ. ಇದು ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಯೋಜನೆಯಾಗಿದ್ದು, ರಾಜ್ಯದಲ್ಲೇ ಮೊದಲ ಮಾದರಿಯಾಗಿದೆ.
ಶಿವಮೊಗ್ಗ (ನ.03): ನೀರಿನ ಕಾಲುವೆ (ಕೆನಾಲ್) ಮೇಲೆ ಸಂತೆ ಮೈದಾನ ನಿರ್ಮಿಸುವುದನ್ನು ಎಂದಾದರೂ ಕೇಳಿದ್ದೀರಾ? ಇಂತಹದ್ದೊಂದು ಅಚ್ಚರಿಯ ಮತ್ತು ಇಡೀ ರಾಜ್ಯದಲ್ಲೇ ಮೊದಲ ಮಾದರಿಯ ನೂತನ ಯೋಜನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸಾಕಾರಗೊಂಡಿದೆ. ಹರಿಯುವ ಕೆನಾಲ್ ಮೇಲೆಯೇ ಬೃಹತ್ ಡೆಕ್ ಹಾಕಿ ಸುಮಾರು 10 ಎಕರೆ ಜಾಗದಲ್ಲಿ ಸುಸಜ್ಜಿತ ಸಂತೆ ಮೈದಾನ ಹಾಗೂ ₹15 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗಿದ್ದು, ಈ ಭಾಗದ ಕೃಷಿಕರಿಗೆ ಬಹುದೊಡ್ಡ ವರದಾನವಾಗಿದೆ.
ಈ ಕುರಿತು ಶಿಕಾರಿಪುರದಲ್ಲಿ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ, 'ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ ನಬಾರ್ಡ್ (NABARD) ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ' ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.
ಕೆನಾಲ್ ಮೇಲೆ 10 ಎಕರೆ ಜಾಗ ಸೃಷ್ಟಿ - ಎಂಜಿನಿಯರಿಂಗ್ ಕಮಾಲ್:
ಶಿಕಾರಿಪುರ ನಗರದ ಹೃದಯಭಾಗದಲ್ಲಿ ಅಂಜನಾಪುರ ಜಲಾಶಯದ ಪ್ರಮುಖ ನಾಲೆ ಹಾದುಹೋಗುತ್ತದೆ. ನಗರದ ಮಧ್ಯಭಾಗದಲ್ಲಿ ಒಂದು ಚದರ ಅಡಿಗೆ ₹2,000 ರಿಂದ ₹3,000 ವರೆಗೆ ಭೂಮಿಯ ಬೆಲೆಯಿದೆ. ಇಂತಹ ದುಬಾರಿ ಜಾಗದಲ್ಲಿ ನೀರಿನ ಹರಿವಿಗೆ ಕಿಂಚಿತ್ತೂ ಅಡ್ಡಿಯಾಗದಂತೆ ಕಾಲುವೆಯ ಮೇಲೆ ಬಲಿಷ್ಠವಾದ ಕಾಂಕ್ರೀಟ್ ಡೆಕ್ (Deck) ನಿರ್ಮಿಸಲಾಗಿದೆ.
ವಿಸ್ತೀರ್ಣ: 365 ಮೀಟರ್ ಉದ್ದ ಹಾಗೂ 30 ರಿಂದ 50 ಮೀಟರ್ ಅಗಲದ ಬೃಹತ್ ಜಾಗ ಲಭ್ಯವಾಗಿದೆ.
ಇದರಿಂದಾಗಿ ನಗರದ ಮಧ್ಯಭಾಗದಲ್ಲೇ ಬರೋಬ್ಬರಿ 8 ರಿಂದ 10 ಎಕರೆ ಜಾಗ ರೈತರ ಮಾರುಕಟ್ಟೆಗಾಗಿ ಸಿಕ್ಕಂತಾಗಿದೆ.
₹15 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್:
ರೈತರು ತಾವು ಬೆಳೆದ ತರಕಾರಿ, ಹಣ್ಣು-ಹಂಪಲುಗಳು ಹಾಳಾಗದಂತೆ ಸಂರಕ್ಷಿಸಿಡಲು ಎಪಿಎಂಸಿ (APMC) ಮಾರುಕಟ್ಟೆ ಆವರಣದಲ್ಲಿ ₹15 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕೋಲ್ಡ್ ಸ್ಟೋರೇಜ್ (ಶೀತಲಗೃಹ) ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಜೊತೆಗೆ ಶಿಕಾರಿಪುರ ತಾಲೂಕಿನ ಸುಮಾರು 30 ಕೃಷಿ ಪ್ರಾಥಮಿಕ ಸಹಕಾರ ಸಂಘಗಳಿಗೆ ತಲಾ ₹5 ಲಕ್ಷದಿಂದ ₹50 ಲಕ್ಷದವರೆಗೆ ಅನುದಾನ ನೀಡಿ ಗೋದಾಮುಗಳನ್ನು (Godown) ನಿರ್ಮಿಸಲಾಗಿದೆ.
ರಾಜ್ಯಕ್ಕೇ ಮಾದರಿ ಯಡಿಯೂರಪ್ಪನವರ ಕನಸು:
‘ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಶಾಶ್ವತ ಪರಿಹಾರ ಸಿಗಬೇಕೆಂಬ ದೂರದೃಷ್ಟಿಯಿಂದ ಈ ಯೋಜನೆ ರೂಪಿಸಿದ್ದರು. ನೀರಾವರಿ, ಸುಸಜ್ಜಿತ ಸಂತೆ ಮೈದಾನ, ಗೋದಾಮು ಮತ್ತು ಕೋಲ್ಡ್ ಸ್ಟೋರೇಜ್ ಸೇರಿದಂತೆ ಕೃಷಿಗೆ ಪೂರಕವಾದ ಎಲ್ಲ ಸೌಲಭ್ಯಗಳನ್ನು ಒಂದೇ ಸೂರಿನಡಿ ತರಲಾಗಿದೆ. ತಾಲೂಕು ಮಟ್ಟದಲ್ಲಿ ಇಂತಹ ಸುಸಜ್ಜಿತ ಮೈದಾನ ಇಡೀ ರಾಜ್ಯದಲ್ಲಿ ಎಲ್ಲೂ ಇಲ್ಲ, ಇದು ನಮ್ಮ ಹೆಮ್ಮೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.






