ಜೈಲು ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಹೀಗಾಗಿ ಜೈಲಿನಿಂದ ಹೊರಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಟ ದರ್ಶನ್ ಮನವಿ ಮಾಡಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಸೂಚನೆ ನೀಡಿದೆ.

ಬೆಂಗಳೂರು (ನ.23) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಇದೀಗ ಚಿಕಿತ್ಸೆ ಸಂಬಂಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬೆನ್ನು ನೋವಿಗೆ ಜೈಲಿನ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ತನಗೆ ಬೆನ್ನು ನೋವು ಕಡಿಮೆಯಾಗಿಲ್ಲ.ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ನಟ ದರ್ಶನ್ ಖುದ್ದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಅರ್ಜಿ ಕುರಿತು ವಿಚಾರಣೆ ನಡೆಸಿದ 59ನೇ ಸಿಸಿಹೆಚ್ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಹಿರಿಯ ವೈದ್ಯಾಧಿಕಾರಿಗಳು ಪರಿಶೀಲನೆ ಮಾಡಲು ನ್ಯಾಯಾಧೀಶರು ಸೂಚಿಸಿದ್ದಾರೆ.

ಜೈಲಿನಲ್ಲಿ ಮೂರು ಫಿಸಿಯೋಥೆರಪಿ ಬಳಿಕ ಸುಳಿವಿಲ್ಲ

ತನಗೆ ತೀವ್ರವಾಗಿ ಬೆನ್ನು ನೋವಿನ ಸಮಸ್ಯೆ ಇದೆ. ಇತ್ತೀಚೆಗೆ ಬೆನ್ನು ನೋವು ಹೆಚ್ಚಾಗಿದೆ. ಜೈಲಿನಲ್ಲಿ ಫಿಸಿಯೋಥೆರಪಿ ಸೇರಿದಂತೆ ಚಿಕಿತ್ಸೆಗೆ ಕೋರ್ಟ್ ಸೂಚನೆ ನೀಡಿದರೂ ತನಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಕೇವಲ ಮೂರು ಬಾರಿ ಫಿಸಿಯೋಥೆರಪಿ ನೀಡಲಾಗಿದೆ. ಇದರಿಂದ ಬೆನ್ನು ನೋವು ಕಡಿಮೆಯಾಗಿಲ್ಲ. ಹೀಗಾಗಿ ಹೊರಗಿನಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ನಟ ದರ್ಶನ್ ಕೋರ್ಟ್‌ಗೆ ಮನವಿ ಮಾಡಿದ್ದರು.

ಖುದ್ದು ಕೋರ್ಟ್‌ಗೆ ಮನವಿ ಮಾಡಿದ ದರ್ಶನ್

ಫಿಸಿಯೋಥೆರಪಿ ಮುಂದುವರಿಸಲು ಕೋರ್ಟ್ ಸೂಚಿಸಿದ ಬೆನ್ನಲ್ಲೇ ಖುದ್ದು ದರ್ಶನ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ದರ್ಶನ್ ಮನವಿಗೆ ಸ್ಪಂದಿಸಿದ ಕೋರ್ಟ್, ಜೈಲಿನ ಅಧಿಕಾರಿಗಳಿಂದ ವರದಿ ತರಿಸಲು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಗಿರಿಯ ವೈದ್ಯಾಧಿಕಾರಿಗಳು ದರ್ಶನ್ ಬೆನ್ನು ನೋವು ಹಾಗೂ ಆರೋಗ್ಯ ಕುರಿತು ತಪಾಸಣೆಗೆ ಸೂಚಿಸಿದ್ದಾರೆ.

ಅಕ್ಷೇಪಣೆಗೆ ಕಾಲಾವಕಾಶ ಕೋರಿದ ಎಸ್‌ಪಿಪಿ

ಜೈಲಿನಿಂದ ಹೊರಬಂದು ಹೊರಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಟ ದರ್ಶನ್ ಮಾಡಿರುವ ಮನವಿಗೆ ಅಕ್ಷೇಪಣೆ ಸಲ್ಲಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ಕಾಲಾವಕಾಶ ಕೋರಿದ್ದಾರೆ. ಜೈಲಿನಲ್ಲಿ ಚಿಕಿತ್ಸೆ, ಹೊರಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಟ್ಟು ಹಿಡಿಯುತ್ತಿರುವ ಕುರಿತು ಅಕ್ಷೇಪಣೆ ಸಲ್ಲಿಸಲು ಸಮಯ ಬೇಕು ಎಂದು ಎಸ್‌ಪಿಪಿ ಕೋರ್ಟ್‌ಗೆ ತಿಳಿಸಿದ್ದಾರೆ.

ದರ್ಶನ್ ಬಿಡುಗಡೆಯಾಗಿ ಪತ್ನಿ ವಿಜಯಲಕ್ಷ್ಮಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ವಿವಿದ ದೇವಸ್ಥಾಗಳಲ್ಲಿ ಪೂಜೆ ಸಲ್ಲಿಸಿದ್ದರು. ಒಂದೆದೆ ಕಾನೂನು ಹೋರಾಟ ನಡೆಸುತ್ತಿರುವ ವಿಜಯಲಕ್ಷ್ಮಿ ಮತ್ತೊಂದೆಡೆ ದೇವಸ್ಥಾನಗಳಲ್ಲಿ ದೇವರ ಮೊರೆ ಹೋಗಿದ್ದಾರೆ. ನಟ ದರ್ಶನ್ ಪ್ರಕರಣದಲ್ಲಿ ಆಪ್ತರೇ ಮಾಫಿ ಸಾಕ್ಷಿಯಾಗಿ ಸಾಕ್ಷಿ ನುಡಿದಿದ್ದಾರೆ. ಇತ್ತ ಪ್ರಕರಣದಲ್ಲಿನ ಕೆಲ ಸಾಕ್ಷ್ಯಗಳು ದರ್ಶನ್‌ ಸಂಕಷ್ಟ ಹೆಚ್ಚಿಸಿದೆ.