Asianet Suvarna News Asianet Suvarna News

ಶಿವಮೊಗ್ಗ ಜಿಲ್ಲಾಧಿಕಾರಿಯಿಂದ ಸ್ಲಂ ಮಕ್ಕಳಿಗೆ 'ಜೀವನ ದರ್ಶನ', ಇಲ್ಲಿ ಡಿಸಿ ಅವ್ರೇ ಟೀಚರ್..!

ಸ್ಲಂ ಮಕ್ಕಳ ಅಭಿವೃದ್ಧಿ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕೆ. ಎ. ದಯಾನಂದ್‌ ಹೊಸದೊಂದು ಯೋಜನೆಯನ್ನು ತಂದಿದ್ದಾರೆ. ಸ್ಲಂ ಮಕ್ಕಳಿಗಾಗಿ ಜೀವನ ದರ್ಶನ ಅನ್ನೋ ಶಾಲೆಯನ್ನು ಆರಂಭಿಸಿದ್ದಾರೆ. ಇದು ಉಳಿದ ಶಾಲೆಯಂತಲ್ಲ. ಇಲ್ಲಿ ಕತೆಗಳ ಮೂಲಕ ಮಕ್ಕಳಿಗೆ ನೀತಿ ಪಾಢಠವನ್ನು ಹೇಳಿಕೊಡಲಾಗುತ್ತಿದೆ. ಜಿಲ್ಲಾಧಿಕಾರಿಗಳೇ ಸ್ಲಂ ಮಕ್ಕಳಿಗೆ ಟೀಚರ್ ಆಗಿ ಪಾಠ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ

Shivamogga DC started Jeevana Darshana School for Slum Children
Author
Bangalore, First Published Jul 27, 2019, 8:48 AM IST
  • Facebook
  • Twitter
  • Whatsapp

ಶಿವಮೊಗ್ಗ(ಜು.27): ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿರುವ ಜಿಲ್ಲಾಧಿಕಾರಿ ಕೆ. ಎ. ದಯಾನಂದ್‌ ಇದೀಗ ಸ್ಲಂ ಮಕ್ಕಳಿಗೆ ಬದುಕಿನ ಇನ್ನೊಂದು ಮುಖವನ್ನು ಪರಿಚಯಿಸುವ ಮೂಲಕ ಅವರಲ್ಲಿ ಉನ್ನತ ಜೀವನದತ್ತ ಸಾಗುವ ಆಸಕ್ತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇದೀಗ ಇನ್ನೊಂದು ಅಭಿವೃದ್ಧಿಪೂರಕ ಕೆಲಸ ಆರಂಭಿಸಿದ್ದು ಪ್ರತಿ ಭಾನುವಾರ ನಗರದ ಆಯ್ದ, ಆಸಕ್ತ ಸ್ಲಂ ಮಕ್ಕಳಿಗೆ ಕೌಶಲ್ಯಕಲಿಕಾ ಅಥವಾ ಜೀವನ ದರ್ಶನ ಶಾಲೆಯೊಂದನ್ನು ಆರಂಭಿಸಿದ್ದಾರೆ.

ಕತೆಗಳ ಮೂಲಕ ನೈತಿಕ ಬೋಧನೆ:

ಇದು ಮಾಮೂಲಿನಂತೆ ಶಿಷ್ಟ ಪಠ್ಯವನ್ನೊಳಗೊಂಡ ಸಾಂಪ್ರದಾಯಿಕ ಶಾಲೆಯಲ್ಲ. ಬದಲಾಗಿ ಕತೆಗಳ ಮೂಲಕ ನೈತಿಕ ಶಿಕ್ಷಣ ಬೋಧನೆ, ಆಟ ಪಾಠಗಳು, ಕೌಶಲ್ಯ ಚಟುವಟಿಕೆಗಳನ್ನು ಕಲಿಸುವ ಮೂಲಕ ಅವರಲ್ಲಿ ಸಾಮಾನ್ಯ ಬದುಕಿನ ಬಗ್ಗೆ, ಬದುಕಿನ ಹಾದಿಯಲ್ಲಿ ಉನ್ನತಿ ಸಾಧಿಸುವುದರ ಕುರಿತು ಆಸಕ್ತಿ ಮೂಡಿಸುವುದಾಗಿದೆ. ಇದರ ಜೊತೆಗೆ ವಿವಿಧ ಕಾರ್ಖಾನೆಗಳು, ಅಭಿವೃದ್ಧಿ ಚಟುವಟಿಕೆಗಳ ಸ್ಥಳಗಳು ಸೇರಿದಂತೆ ಮೇಲ್‌ಸ್ತರದಲ್ಲಿ ಕಾರ್ಯಾಚರಿಸುವ ವ್ಯವಸ್ಥೆಯನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತದೆ. ಈ ಮೂಲಕ ತಾವೂ ಈ ಸಾಧನೆ ಮಾಡುವಂತೆ ಅವರಲ್ಲಿ ಪ್ರೇರೇಪಣೆ ಮೂಡಿಸಲಾಗುತ್ತದೆ.

ಶಾಲೆ ಆರಂಭವಾಗಿ 2 ತಿಂಗಳು:

ಈಗಾಗಲೇ ಈ ರೀತಿಯ ಪ್ರಯೋಗ ಆರಂಭವಾಗಿ ಸುಮಾರು ಎರಡು ತಿಂಗಳಾಗಿದೆ. ಇದಕ್ಕೆ ಮಕ್ಕಳ ಮತ್ತು ಪೋಷಕರ ಸ್ಪಂದನೆ ಕಂಡು ಸ್ವತಃ ಜಿಲ್ಲಾಧಿಕಾರಿಗಳು ಮತ್ತವರ ತಂಡ ಬೆರಗಾಗಿದೆ. ಮಕ್ಕಳ ಆಸಕ್ತಿ ಕಂಡು ಖುಷಿ ಪಟ್ಟಿದ್ದಾರೆ.

ಜಿಲ್ಲಾಧಿಕಾರಿಗಳೇ ಪಾಠ ಮಾಡ್ತಾರೆ:

ಇದು ಪ್ರತಿ ದಿನ ನಡೆಯುವ ಶಾಲೆಯಲ್ಲ. ಪ್ರತಿ ಭಾನುವಾರ ಬೆಳಗ್ಗೆ 9 ರಿಂದ 12 ರವರೆಗೆ ನಡೆಯುತ್ತದೆ. ಇದುವರೆಗೆ ಸುಮಾರು 15-16 ತರಗತಿಗಳು ನಡೆದಿದ್ದು, ಸ್ವತಃ ಜಿಲ್ಲಾಧಿಕಾರಿಗಳೇ ಸುಮಾರು 10 ತರಗತಿಗಳನ್ನು ತೆಗೆದುಕೊಂಡಿದ್ದಾರೆ. ಕತೆ, ಹಾಡು, ಹೊಸ ವಿಷಯಗಳನ್ನು ತಿಳಿಸುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯನ್ನು ಉದ್ದೀಪನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಿರುವ ಜಿಲ್ಲಾಧಿಕಾರಿ ಕೆ. ಎ. ದಯಾನಂದ ಅವರಿಗೆ ಇದು ಖುಷಿಯ ಸಂಗತಿಯೂ ಹೌದು.

ತರಗತಿ ನಡೆಯಲು ನಿರ್ದಿಷ್ಟ ಸ್ಥಳವಿಲ್ಲ:

ಈ ಶಾಲೆ ನಡೆಯಲು ನಿರ್ದಿಷ್ಟಸ್ಥಳಗಳು ಎಂದೇನಿಲ್ಲ. ಒಮ್ಮೊಮ್ಮೆ ಒಂದೊಂದು ಸ್ಥಳದಲ್ಲಿ ನಡೆಯುತ್ತದೆ. ಗಾಂಧಿ ಪಾರ್ಕ್, ಕೌಶಲ್ಯಾಭಿವೃದ್ಧಿ ಕೇಂದ್ರ, ಡಿಡಿಪಿಐ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಎಲ್ಲ ಕಡೆಗಳಲ್ಲಿಯೂ ನಡೆಸಲಾಗುತ್ತದೆ. ಇಲ್ಲಿ ಯೋಗ, ಸಂಗೀತ, ಕರಾಟೆ, ನೀತಿ ಕಥೆಗಳು, ಕ್ಲೇ ಮಾಡೆಲಿಂಗ್‌, ನೃತ್ಯ ಇತ್ಯಾದಿಗಳನ್ನು ಕಲಿಸಲಾಗುತ್ತಿದೆ. ಇದರ ಜತೆಗೆ ಮಕ್ಕಳಿಗೆ ಸಂಬಂಧಿಸಿದ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತಿದೆ. ಇತ್ತೀಚೆಗೆ ನಡೆದ ವಾಯು ಸೇನಾ ನೇಮಕಾತಿ ರಾರ‍ಯಲಿಗೂ ಇವರನ್ನು ಕರೆ ತಂದು ಪರಿಚಯಿಸಲಾಗಿದೆ. ಸೈನಿಕ ಪಾರ್ಕ್‌ನಲ್ಲಿ ಕಲಾವಿದರೊಂದಿಗೆ ಬೆರೆಯುವ ಅವಕಾಶವನ್ನೂ ಕಲ್ಪಿಸಲಾಗಿತ್ತು. ವಿವಿಧ ಕಾರ್ಖಾನೆಗಳಿಗೆ ಕರೆದುಕೊಂಡು ಹೋಗಲಾಗಿದೆ. ಸಾಧಕರ ಪರಿಚಯ ಮಾಡಿಸಲಾಗುತ್ತದೆ.

ವಾಟ್ಸಾಪ್‌ ಗ್ರೂಪ್‌:

ಇದಕ್ಕಾಗಿ ವಾಟ್ಸಾಪ್‌ ಗ್ರೂಪ್‌ ರಚಿಸಲಾಗಿದ್ದು, ಶನಿವಾರ ಎಲ್ಲಿ ಶಾಲೆ ನಡೆಯುತ್ತದೆ ಎಂದು ತಿಳಿಸಲಾಗುತ್ತದೆ. ತಿಳಿಸುವುದು ತಡವಾದರೆ ಪೋಷಕರೇ ಕರೆ ಮಾಡಿ ಎಲ್ಲಿ ಶಾಲೆ ಮಾಡುತ್ತಾರೆ ಎಂದು ಕೇಳುವಷ್ಟರ ಮಟ್ಟಿಗೆ ಇದು ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲ, ಆ ಕುಟುಂಬದ ಮೇಲೂ ಪ್ರಭಾವ ಬೀರಿದೆ.

ಕಲ್ಪನೆ ಮೂಡಿದ್ದು ಹೇಗೆ?:

ಈ ಬೇಸಿಗೆಯಲ್ಲಿ ಸ್ಲಂ ಮಕ್ಕಳಿಗಾಗಿಯೇ ಬೇಸಿಗೆ ಶಿಬಿರವೊಂದನ್ನು ಜಿಲ್ಲಾಡಳಿತ ಆಯೋಜಿಸಿತ್ತು. ಹತ್ತು ದಿನಗಳ ಬೇಸಿಗೆ ಶಿಬಿರ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆ ಸಹಜವಾಗಿ ಕಾಡಿತ್ತು. ಹೀಗಾಗಿ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿದ್ದ 100 ಸ್ಲಂ ಮಕ್ಕಳಲ್ಲಿ ಆಸಕ್ತಿ ಇರುವ, ಚುರುಕಾಗಿರುವ 60 ಮಕ್ಕಳನ್ನು ಆಯ್ದು ಇಂತಹ ಶಾಲೆಯೊಂದನ್ನು ಆರಂಭಿಸುವ ಕನಸು ಕಾಣಲಾಯಿತು.

ಡಿಸಿಗೆ ರಸ್ತೆಯಲ್ಲೇ ಸನ್ಮಾನ

ಹೀಗೆ ಶಾಲೆ ಆರಂಭಿಸಿದಾಗ ಮಕ್ಕಳು ಒಂದೆರಡು ತರಗತಿಗಳ ನಂತರ ಕೈಕೊಡುತ್ತಾರೆ ಎಂದು ಅನಿಸುತ್ತಿತ್ತು. ಆದರೆ ಆಶ್ಚರ್ಯವೆಂದರೆ ಒಬ್ಬನೇ ಒಬ್ಬ ವಿದ್ಯಾರ್ಥಿ ಕೂಡ ಶಾಲೆಯನ್ನು ತಪ್ಪಿಸಿಕೊಳ್ಳಲಿಲ್ಲ. ಅತ್ಯಂತ ಆಸಕ್ತಿಯಿಂದ ಬರತೊಡಗಿದರು. ಈಗಲೂ ಅಷ್ಟೇ ವಿದ್ಯಾರ್ಥಿಗಳು ಬರುತ್ತಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ. ಎ. ದಯಾನಂದ ಅವರು.

ಸ್ವಯಂ ಸೇವಕರೇ ಇಲ್ಲಿ ಶಿಕ್ಷಕರು:

ಈ ಶಾಲೆಗೆ ಯಾರೇ ನಿರ್ದಿಷ್ಟಶಿಕ್ಷಕರು ಎಂದೇನಿಲ್ಲ. ಆ ರೀತಿಯ ನೇಮಕಾತಿಯೂ ಆಗಿಲ್ಲ. ಆಸಕ್ತ ಸ್ವಯಂ ಸೇವಕರು ಇಲ್ಲಿ ಬಂದು ಎಲ್ಲವನ್ನೂ ಕಲಿಸುತ್ತಾರೆ. ಸದ್ಯ ನಿತ್ಯಾನಂದ, ನಯನ, ವಿಜಯಕುಮಾರ್‌, ರಂಜನ್‌, ಪ್ರಿಯಾನ್‌ ಹಾಗೂ ಅಕ್ಷಯ್‌ ಮಕ್ಕಳಿಗೆ ಉಚಿತವಾಗಿ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಲಂ ಮಕ್ಕಳು ಆರಂಭದಲ್ಲಿ ಶಾಲೆ ಸೇರಿದರೂ ವಿದ್ಯಾಭ್ಯಾಸ ಪೂರ್ಣಗೊಳಿಸುವವರು ಕಡಿಮೆ. ಅವರು ವಾಸಿಸುವ ಪರಿಸರದ ಪ್ರಭಾವವೂ ಇರಬಹುದು. ಅನೇಕರು ಜೀವನದಲ್ಲಿ ಹಾದಿ ತಪ್ಪುತ್ತಿದ್ದರು. ಇದನ್ನೆಲ್ಲಾ ಗಮನಿಸಿ ಅವರಲ್ಲಿ ನೈತಿಕತೆ, ಜೀವನ ಮೌಲ್ಯ, ಜೀವನ ದರ್ಶನ, ಜೀವನದಲ್ಲಿ ಸಾಧಿಸುವ ಛಲ ಇವೆಲ್ಲವನ್ನೂ ಮೂಡಿಸುವ ಉದ್ದೇಶವನ್ನು ಮನಗಂಡೇ ಇಂತಹ ಶಾಲೆ ಅಸ್ತಿತ್ವಕ್ಕೆ ತರಲಾಗಿದೆ.. ಇದು ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂಬ ನಂಬಿಕೆ ನನಗೆ ಬರುತ್ತಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ. ಎ. ದಯಾನಂದ್‌.

-ಗೋಪಾಲ್‌ ಯಡಗೆರೆ

Follow Us:
Download App:
  • android
  • ios