ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪುತ್ರಿ ಶೈಲಜಾ ಹಾಸನಾಂಬೆಯ ದರ್ಶನ ಪಡೆದು ತಾಯಿ ಚೆನ್ನಮ್ಮನವರನ್ನು ನೆನಪಿಸಿಕೊಂಡು ಭಾವುಕರಾದರು. ಪ್ರತಿ ವರ್ಷ ತಾಯಿಯೊಂದಿಗೆ ಬರುತ್ತಿದ್ದ ಅವರು, ಈ ಬಾರಿ ಒಂಟಿಯಾಗಿ ಬಂದು ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.
ಹಾಸನ(ನ.7): ಇಂದಿಗೆ ಒಂಭತ್ತದಿನ ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತಸಾಗರ ಹರಿದುಬರುತ್ತಲೇ ಇದೆ. ಈ ನಡುವೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ದಿ.ಚನಮ್ಮ ಅವರ ಪುತ್ರಿ ಶೈಲಜಾ ಈ ಬಾರಿ ಹಾಸನಂಬ ದರ್ಶನಕ್ಕೆ ತಾಯಿಯಿಲ್ಲದೆ ಒಂಟಿಯಾಗಿ ದರ್ಶನ ಪಡೆದರು. ಈ ವೇಳೆ ತಾಯಿಯ ನೆನಪಾಗಿ ಭಾವುಕರಾದ ಘಟನೆ ನಡೆಯಿತು.
ಪ್ರತಿ ವರ್ಷ ನಮ್ಮ ತಾಯಿ ಜೊತೆಗೆ ಬರುತ್ತಿದ್ದೆ..
ಹಾಸನಾಂಬ ದರ್ಶನಕ್ಕೆ ಪ್ರತಿ ವರ್ಷ ನನ್ನ ತಾಯಿಯ ಜೊತೆಯಲ್ಲೇ ಹಸನಾಂಬ ದೇವಿ ದರ್ಶನಕ್ಕೆ ಬರುತ್ತಿದ್ದೆ. ಈ ವರ್ಷ ನನ್ನ ತಾಯಿ ನೆನಪಲ್ಲಿ ಬಂದು ದರ್ಶನ ಮಾಡುತ್ತಿದ್ದೇನೆ. ಈ ಬಾರಿ ನನ್ನ ತಂದೆಯವರು ಕೂಡ ಆರೋಗ್ಯ ಸಮಸ್ಯೆಯಿಂದಾಗಿ ದರ್ಶನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಭಾವುಕರಾದರು.
ಕನ್ನಡಿಗರೆಲ್ಲರಿಗೂ ಒಳ್ಳೆಯದಾಗಲಿ ಎಂದ ಚೆನ್ನಮ್ಮ ಪುತ್ರಿ
ಆ ತಾಯಿ ಹಾಸನಾಂಬ ದೇವಿ ನಾಡಿನ ಸಮಸ್ತ ಜನತೆ ಒಳ್ಳೆಯದು ಮಾಡಲಿ, ಆಯುರಾರೋಗ್ಯ, ನೆಮ್ಮದಿಯ ಬದುಕು ಕೊಟ್ಟು ಕಾಪಾಡಲಿ ಎಂದು ಬೇಡಿದ್ದೇನೆ ನಮ್ಮೆಲ್ಲ ಕನ್ನಡಿರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
30 ವರ್ಷಗಳಿಂದ ಹಾಸನಂಬಾ ದರ್ಶನ ಮಾಡುತ್ತಿದ್ದೇನೆ...
ಹಾಸನಾಂಬ ದೇವಿಯ ದರ್ಶನದ ವೇಳೆ ಬಾಲ್ಯದ ಬಗ್ಗೆ ನೆನಪಿಸಿಕೊಂಡ ಶೈಲಜಾ ಅವರು, 'ನಾನು ಚಿಕ್ಕವಳಿದ್ದಾಗ ಹಾಸನದಿಂದ ದೂರ ಇದ್ದೆ. ಬೆಂಗಳೂರಿನಲ್ಲಿ ನಾನು ಬೆಳೆದಿದ್ದು, ನನಗೆ ಹಾಸನದ ಒಡನಾಟ ಕಡಿಮೆ. ಆದರೂ ನನ್ನ ತಾಯಿ ಚನ್ನಮ್ಮ ನನ್ನನ್ನು ಪ್ರತಿವರ್ಷ ಹಾಸನಾಂಬ ದರ್ಶನಕ್ಕೆ ಕರೆದುಕೊಂಡು ಬರುತ್ತಿದ್ದರು. ಅಪಾರ ದೈವಭಕ್ತೆಯಾದ ನನ್ನ ತಾಯಿ ಕರೆದುಕೊಂಡು ಬಂದು ನನಗೆ ಹಾಸನಾಂಬೆಯ ದರ್ಶನ ಮಾಡಿಸುತ್ತಿದ್ದರು. ಅಂದಿನಿಂದ ಇಂದಿನವರೆಗೂ ಸುಮಾರು 30 ವರ್ಷಗಳಿಂದ ಹಾಸನಾಂಬ ದರ್ಶನ ಮಾಡುತ್ತಿದ್ದೇನೆ ಎಂದು ನೆನಪಿಸಿಕೊಂಡರು.
ಇಂದು ನನ್ನ ತಾಯಿಯನ್ನೇ ಕಂಡಷ್ಟು ನೆಮ್ಮದಿ
ಇವತ್ತು ನಾನು ದೇವಸ್ಥಾನಕ್ಕೆ ಬಂದ ತಕ್ಷಣವೇ ನನ್ನ ಅಮ್ಮನ ನೆನಪು ತುಂಬಾ ಕಾಡಿತು. ನಮ್ಮಮ್ಮನಿಗೆ ದೈವದ ಮೇಲೆ ಅಪಾರವಾದ ನಂಬಿಕೆ ಇತ್ತು. ಈಗಲೂ ನಮ್ಮ ತಾಯಿ ಹಾಸನಂಬೆಯ ತಾಯಿಯ ಸನ್ನಿಧಿಯಲ್ಲಿ ಇದ್ದಾರೆ ಎಂದು ನಾನು ನಂಬಿದ್ದೇನೆ. ಹೀಗಾಗಿ ನಾನು ಇಲ್ಲಿಗೆ ಬಂದಾಗ ತಕ್ಷಣ ನನ್ನ ತಾಯಿಯ ನೋಡಿದಷ್ಟು ನೆಮ್ಮದಿಯಾಗಿದೆ. ನನ್ನ ತಾಯಿಯ ಆತ್ಮ ಆ ಹಾಸನಾಂಬ ದೇವಿಯಲ್ಲಿ ಸೇರಿಕೊಂಡಿದೆ ಎಂದು ನಂಬಿದ್ದೇನೆ
ಇವತ್ತು ನಾನು ದೇವಸ್ಥಾನಕ್ಕೆ ಬಂದ ತಕ್ಷಣವೇ ನನ್ನ ಅಮ್ಮನ ನೆನಪು ಕಾಡಿತು
ಹಾಸನಾಂಬ ದರ್ಶನಕ್ಕೆ ಬಂದು ತಾಯಿಯ ದರ್ಶನ ಮಾಡಿದ್ದೇನೆ, ಅಶೀರ್ವಾದ ಪಡೆದಿದ್ದೇನೆ. ನಮ್ಮ ತಂದೆಯವರು ಕೂಡ ಮಂಗಳವಾರ ಹಾಸನಾಂಬ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದರು. ಆದರೆ ಸಾರ್ವಜನಿಕರಿಗೆ ನನ್ನಿಂದ ತೊಂದರೆಯಾಗುತ್ತದೆ ನಾನು ಬರುವುದಿಲ್ಲ, ನೀನು ಹೋಗಿ ದರ್ಶನ ಮಾಡಿಕೊಂಡು ಬಾ ಎಂದರು. ಹೀಗಾಗಿ ನಾನು ಬಂದಿದ್ದೇನೆ. ನಮ್ಮ ತಂದೆ ಪ್ರತಿವರ್ಷನೂ ಬರ್ತಿದ್ರು. ಈ ಬಾರಿ ಅವರ ಆರೋಗ್ಯವೂ ಸರಿಯಿಲ್ಲದ ಕಾರಣ, ಹಾಸನಾಂಬ ದರ್ಶನಕ್ಕೆ ಬರುವ ಭಕ್ತರಿಗೂ ತೊಂದರೆ ಆಗುವ ಕಾರಣ ಈ ಬಾರಿ ಬರಲಾಗಲಿಲ್ಲ ಎಂದರು.
ಅಪ್ಪನಿಗೆ ಪ್ರಸಾದ ತೆಗೆದುಕೊಂಡು ಹೋಗುತ್ತೇನೆ..
ನಾನು ಇಂದು ಹಾಸನಾಂಬ ದರ್ಶನ ಮಾಡಿಕೊಂಡು ಅಪ್ಪನಿಗೆ ತಾಯಿಯ ಪ್ರಸಾದ ತೆಗೆದುಕೊಂಡು ಹೋಗುತ್ತಿದ್ದೇನೆ. ನಮ್ಮ ತಾಯಿಯ ತವರೂರು ಮುತ್ತಿಗೆ ಹಿರೇಹಳ್ಳಿಯಲ್ಲಿ ಮುತ್ತಿಗೆ ಅಮ್ಮ ದೇವಸ್ಥಾನ ಇದೆ. ಅಲ್ಲಿಯೂ ವರ್ಷಕ್ಕೆ ಎರಡು ದಿನ ಮಾತ್ರ ಬಾಗಿಲು ತೆರೆಯುತ್ತದೆ. ಅಲ್ಲಿ ಪ್ರಥಮ ಪೂಜೆ ಸಲ್ಲಿಸುತ್ತಿದ್ದುದ್ದು ನಮ್ಮ ತಾಯಿಯವರೇ. ಆದರೆ ಈ ವರ್ಷದಿಂದ ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇವೆ. ಆದರಿಂದ ನಮ್ಮ ಕುಟುಂಬವೇ ಆ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತದೆ ಎಂದು ಶೈಲಜಾ ತಿಳಿಸಿದರು.














