ಹಾಸನಾಂಬೆ ದರ್ಶನಕ್ಕೆ ಗಣ್ಯರಿಗೆ ಶಿಷ್ಟಾಚಾರದ ಸಮಯ ನಿಗದಿ ಮಾಡಿದ್ದರೂ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಲ್ಲಾಡಳಿತ ವಿಶೇಷ ಅವಕಾಶ ಕಲ್ಪಿಸಿದೆ. ಆದರೆ, ಪ್ರೋಟೋಕಾಲ್ ಬಿಟ್ಟು ನೇರವಾಗಿ ಬಂದ ಸಚಿವ ಪುಟ್ಟರಂಗಶೆಟ್ಟಿ ಅವರ ಕಾರನ್ನು ಭದ್ರತಾ ಸಿಬ್ಬಂದಿ ತಡೆದಿದ್ದರಿಂದ ನಡೆದುಕೊಂಡೇ ಹೋಗಿ ದರ್ಶನ ಪಡೆದರು.

ಹಾಸನ (ನ.7): ಗಣ್ಯರಿಗೆ ಹಾಸನಾಂಬೆ ದರ್ಶನಕ್ಕೆ ಶಿಷ್ಟಾಚಾರದ ಸಮಯ ನಿಗದಿ ಮಾಡಿದ್ದರೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಶಿಷ್ಟಾಚಾರದ ಹೆಸರಿನಲ್ಲಿ ಗಣ್ಯರ ದರ್ಶನಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಿರುವ ಜಿಲ್ಲಾಡಳಿತವೇ, ಅದೇ ನಿಯಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಪಾಲಿಸದೆ ವಿಶೇಷ ಅವಕಾಶ ಕಲ್ಪಿಸಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಶುಕ್ರವಾರ ಸಂಜೆ ಸುಮಾರು 6.30ರ ವೇಳೆಗೆ ಸಿದ್ದರಾಮಯ್ಯ ಅವರು ವಿಶೇಷ ವಾಹನದಲ್ಲಿ ಹಾಸನಾಂಬೆ ದೇವಸ್ಥಾನದ ಮುಖ್ಯ ದ್ವಾರದ ಮೂಲಕವೇ ಒಳಪ್ರವೇಶಿಸಿದರು. ₹1000 ವಿಶೇಷ ಟಿಕೆಟ್ ಪಡೆದು ದೇವಿಯ ದರ್ಶನಕ್ಕೆ ಆಗಮಿಸಿದ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಎಂ. ಪಟೇಲ್ ಸಾಥ್ ನೀಡಿದರು. ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಮಾಜಿ ಸಿಎಂರನ್ನು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು.

ಹಾಸನಾಂಬೆ ದರ್ಶನಕ್ಕೆ ಬಂದ ಸಚಿವರ ಕಾರು ತಡೆದ ಸಿಬ್ಬಂದಿ

ಇನ್ನೊಂದೆಡೆ ಹಾಸನಾಂಬ ದರ್ಶನಕ್ಕೆ ಬಂದ ಸಚಿವರ ಕಾರನ್ನೇ ಸಿಬ್ಬಂದಿ ತಡೆದಿದ್ದರಿಂದ ದರ್ಶನಕ್ಕೆ ನಡೆದುಕೊಂಡೇ ಹೋದ ಘಟನೆ ನಡೆಯಿತು.

ಹಾಸನಾಂಬೆ ದೇವಿಯ ದರ್ಶನಕ್ಕೆ ಗಣ್ಯರಿಗಾಗಿ ಮಾಡಲಾಗಿರುವ ಪ್ರೋಟೋಕಾಲ್‌ ವ್ಯವಸ್ಥೆಯನ್ನು ಬಿಟ್ಟು ತಮ್ಮದೇ ಸರ್ಕಾರಿ ಕಾರಿನಲ್ಲಿ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ಸಚಿವ ಪುಟ್ಟರಂಗಶೆಟ್ಟಿ ಅವರ ಕಾರನ್ನು ಭದ್ರತಾ ಸಿಬ್ಬಂದಿ ಒಳಗೆ ಬಿಡಲಿಲ್ಲ. ಕಾರಣ ಸಚಿವರು ಕಾರಿನಿಂದ ಇಳಿದು ನಡೆದುಕೊಂಡೇ ಹೋಗಿ ಹಾಸನಾಂಬೆ ದರ್ಶನ ಮಾಡಿದರು.

ಗಣ್ಯರಿಗೆ ಹಾಸನಾಂಬೆ ದರ್ಶನಕ್ಕೆಂದೇ ಜಿಲ್ಲಾಡಳಿತ ನಗರದಲ್ಲಿರುವ ಪ್ರವಾಸಿ ಮಂದಿರದಿಂದ ಪ್ರತ್ಯೇಕ ಪ್ರೋಟೋಕಾಲ್‌ ವ್ಯವಸ್ಥೆ ಮಾಡಿದೆ. ಆದರೆ, ಸಚಿವ ಪುಟ್ಟರಂಗಶೆಟ್ಟಿ ಅವರು ಪ್ರೋಟೋಕಾಲ್ ವ್ಯವಸ್ಥೆಯ ಮೂಲಕ ಆಗಮಿಸದೆ ನೇರವಾಗಿ ಸರ್ಕಾರಿ ವಾಹನದಲ್ಲಿ ದೇವಾಲಯದ ಮುಖ್ಯದ್ವಾರದ ಬಳಿಗೆ ಬಂದಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ವಾಹನವನ್ನು ಒಳಗೆ ಬಿಡಲು ನಿರಾಕರಿಸಿದರು. ನಂತರ ಸಚಿವರು ಕಾರಿನಿಂದ ಇಳಿದು ನಡೆದುಕೊಂಡು ದೇಗುಲಕ್ಕೆ ತೆರಳಿದರು.

ವಾಹನದಲ್ಲಿರೋರು ಸಚಿವರೆಂದು ತಿಳಿಸಿದರೂ ಡೋಂಟ್ ಕೇರ್!

ಸಚಿವರ ವೈಯಕ್ತಿಕ ಸಹಾಯಕರು (ಪಿಎ) ವಾಹನದಲ್ಲಿರುವವರು ಸಚಿವರು ಎಂದು ಸಿಬ್ಬಂದಿಗೆ ತಿಳಿಸಿದರೂ, ಕರ್ತವ್ಯದಲ್ಲಿದ್ದ ಸಿಬ್ಬಂದಿ ತಮ್ಮ ನಿಯಮಗಳಿಂದ ಹಿಂದೆ ಸರಿಯದೆ ವಾಹನ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಸಚಿವರು ವಾಹನದಿಂದ ಇಳಿದು ನಡೆದುಕೊಂಡೇ ದೇವಸ್ಥಾನದತ್ತ ತೆರಳಿದರು. ಬಳಿಕ ಹಾಸನಾಂಬೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಹಾಸನಾಂಬೆ ಜಾತ್ರೆಯ ಸಂದರ್ಭದಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಭಕ್ತರ ಸಂಚಾರಕ್ಕೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಿಬ್ಬಂದಿಯ ನಿಯಮ ಪಾಲನೆಗೆ ಇದು ಸ್ಪಷ್ಟ ಉದಾಹರಣೆಯಾಗಿದೆ.