ಮಳೆಯ ನಡುವೆಯೂ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ಬೆಳೆಹಾನಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಬುದ್ಧಿ ಕೊಡು ಎಂದು ರೈತರು ದೇವಿಗೆ ಬೆಳೆಗಳನ್ನು ನೈವೇದ್ಯವಾಗಿ ಅರ್ಪಿಸಿ ವಿನೂತನ ಪ್ರತಿಭಟನೆ ನಡೆಸಿದರು. ಸಚಿವ ಶಿವಲಿಂಗೇಗೌಡರ ಭರವಸೆ ಮೇರೆಗೆ ರೈತರು ಪ್ರತಿಭಟನೆ ಕೈಬಿಟ್ಟರು.

ಹಾಸನಾಂಬೆ(Hasanamba Devi) ದರ್ಶನಕ್ಕೆ ಎಂಟನೆಯ ದಿನವಾದ ಇಂದು ಮಳೆಯ ನಡುವೆಯೂ ದೇವಿಯ ದರ್ಶನಕ್ಕೆ ಭಕ್ತ ಮಹಾಸಾಗರವೇ ಹರಿದುಬಂದಿದೆ. ನಿನ್ನೆ(ನ.5, ಬುಧವಾರ) ಗುಡುಗು ಮಿಂಚು ಸಹಿತ ರಾತ್ರಿ ಸುರಿದ ಮಳೆಗೆ ತೊಂದರೆಯಾದರೂ ಮಳೆಯ ನಡುವೆಯೂ ದೇವಿಯ ದರ್ಶನ ಪಡೆದರು.

ಇಂದು ಹಾಸನಾಂಬೆ ಮುಖ್ಯದ್ವಾರದಲ್ಲಿ ನೂರಾರು ರೈತರು ವಿನೂತ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಬೆಳೆದ ಬೆಳೆಯನ್ನೇ ತಲೆಮೇಲೆ ಬುಟ್ಟಿಯಲ್ಲಿಟ್ಟುಕೊಂಡು ಹಾಸನಾಂಬ ದೇವಿಗೆ ನೈವೇದ್ಯ ತಂದ ರೈತರು ವಿಶೇಷ ಪತ್ರ ದೇವಿಯ ಮುಂದೆ ಇಟ್ಟು ಬೇಡಿದರು.

ಬೆಳೆಹಾನಿಗೆ ಪರಿಹಾರ ಕೊಡುವಂತಹ ಬುದ್ಧಿ ಕೊಡಮ್ಮ..!

ಕಳಸ, ಬುಟ್ಟಿಯಲ್ಲಿ ಬೆಳೆದ ಬೆಳೆ ಹೊತ್ತು ಬಂದ ನೂರಾರು ರೈತರು ದೇವಿಗೆ ವಿಶೇಷವಾಗಿ ಬರೆದು ತಂದಿದ್ದ ಪತ್ರ ಸಮರ್ಪಿಸಿದರು. ಕಾಲ ಕಾಲಕ್ಕೆ ಮಳೆ ಬೀಳುವಂತೆ ಮಾಡಮ್ಮ, ಉತ್ತಮ ಬೀಜ, ಗೊಬ್ಬರ ಸಿಗುವಂತೆ ಮಾಡಮ್ಮ, ಬಳಿಕ ಈ ಸರ್ಕಾರಕ್ಕೆ ಬೆಳೆಹಾನಿಗೆ ಸೂಕ್ತ ಪರಿಹಾರ ಕೊಡುವಂತಹ ಬುದ್ಧಿ ಕೊಡಮ್ಮ ಹಾಸನಾಂಬೆಯಲ್ಲಿ ಸಂಗ್ರಹವಾದ ಹಣವನ್ನು ರೈತರಿಗೆ ಪರಿಹಾರವಾಗಿ ಕೊಡುವಂತೆ ಮಾಡಮ್ಮ, ಹಾಸನ ಅಧಿಕಾರಿಗಳು ಪಡೆಯುವುದು ನಿಲ್ಲಿಸುವಂತೆ ಮಾಡಮ್ಮ ಎಂದು ಬೇಡಿದರು. ಈ ವೇಳೆ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹಾಸನಾಂಬೆಗೆ ನೈವೇದ್ಯ ಸಲ್ಲಿಸಲು ಬಿಡದ್ದಕ್ಕೆ ಆಕ್ರೋಶ

ಹಾಸನಾಂಬ ದೇವಿಗೆ ನೈವೇದ್ಯ ಸಲ್ಲಿಸಲು ತಲೆಮೇಲೆ ಹೊತ್ತುತಂದಿದ್ದ ಬೆಳೆಯನ್ನು ದೇವಿಗೆ ಸಲ್ಲಿಸಲು ನೂರಾರು ರೈತರಿಗೆ ಅವಕಾಶ ಕೊಡಲಿಲ್ಲ. ಈ ವೇಳೆ ಅವಕಾಶ ಕಲ್ಪಿಸುವಂತೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ರೈತರ ಮನವೊಲಿಸಲು ಪ್ರಯತ್ನಿಸಿದರು ಅಷ್ಟಕ್ಕೂ ಸುಮ್ಮನಾಗದಾದಾಗ ಸಚಿವ ಶಿವಲಿಂಗೇಗೌಡ ಆಗಮಿಸಿ ಉತ್ತಮ ರೀತಿ ದರ್ಶನ ನಡೆಯುತ್ತಿದೆ ಎಂದು ರೈತರಿಗೆ ತಿಳಿಸಿದರು. ಅದರಂತೆಯೇ ಮೊದಲಿಗೆ ಹತ್ತು ಜನ ಮಾತ್ರ ದರ್ಶನ ನೈವೇದ್ಯ ನೀಡಲು ಅವಕಾಶ ಕಲ್ಪಿಸುತ್ತೇನೆ, ಉಳಿದವರು ಪ್ರತ್ಯೇಕ ಸಾಲಿನಲ್ಲಿ ದರ್ಶನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.