ಆರ್ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯಲು ಪೋಷಕರ ವಾರ್ಷಿಕ ಆದಾಯ ಮಿತಿಯನ್ನು 3.5 ಲಕ್ಷದಿಂದ 8 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚಿನ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ.
ಬೆಂಗಳೂರು(ನ.19): ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಉಚಿತ ಸೀಟು ಪಡೆಯಲು ಬಯಸುವ ಪೋಷಕರ ವಾರ್ಷಿಕ ಆದಾಯದ ಮಿತಿ 3.5 ಲಕ್ಷದಿಂದ 8 ಲಕ್ಷ ರು.ಗಳಿಗೆ ಹೆಚ್ಚಿಸಿ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಾರ್ಷಿಕ ಆದಾಯದ ಮಿತಿ 8 ಲಕ್ಷಕ್ಕೆ ಶಿಕ್ಷಣ ಇಲಾಖೆ ಮಹತ್ವದ ಆದೇಶ
2009ರಲ್ಲಿ ಅಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ, ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಆರ್ಥಿಕವಾಗಿ ದುರ್ಬಲ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಮೀಸಲಿಡುವುದು ಕಡ್ಡಾಯ. ಈ ಮಕ್ಕಳ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಆದರೆ, ಪೋಷಕರ ವಾರ್ಷಿಕ ಆದಾಯದ ಮಿತಿ 3.5 ಲಕ್ಷ ರು.ಗಳಿಗೆ ನಿಗದಿಯಾಗಿದ್ದರಿಂದ ಹೆಚ್ಚಿನ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನ ದೊರೆಯುತ್ತಿರಲಿಲ್ಲ. ಆದಾಯದ ಮಿತಿ ಹೆಚ್ಚಿಸುವಂತೆ ಪೋಷಕರು ಸುಮಾರು ಒಂದು ದಶಕದಿಂದ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ವಾರ್ಷಿಕ ಆದಾಯದ ಮಿತಿ 8 ಲಕ್ಷಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಅತ್ಯಧಿಕ ಆದಾಯ ಮಿತಿ ನಿಗದಿ:
ಈ ಮೂಲಕ ದೇಶದಲ್ಲೇ ಅತ್ಯಧಿಕ ಆದಾಯ ಮಿತಿ ನಿಗದಿಪಡಿಸಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ. ಗುಜರಾತ್ನಲ್ಲಿ 6 ಲಕ್ಷ ಹಾಗೂ ದೆಹಲಿಯಲ್ಲಿ 5 ಲಕ್ಷ ಆದಾಯ ಮಿತಿ ಇದ್ದು, ನೆರೆಯ ರಾಜ್ಯಗಳಲ್ಲಿ ಇದಕ್ಕಿಂತಲೂ ಕಡಿಮೆ ಮಿತಿ ಇದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.














