ಬೀದರ್ ಜಿಲ್ಲೆಯ ಸೋಲದಾಬಕಾ ಗ್ರಾಮದಲ್ಲಿ, ನೀರಿನ ಟ್ಯಾಂಕ್ ಬಳಿ ಕೆಲಸ ಮಾಡುತ್ತಿದ್ದ ವಾಟರ್‌ಮ್ಯಾನ್ ಭೀಮ ಜಾಧವ್ (48) ಮೃತಪಟ್ಟಿದ್ದಾರೆ. ಹಾಗೆಯೇ, ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಸತ್ಯವ್ವ ಶಿಂಗೆ (43) ಎಂಬ ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.
ಬೀದರ್: ನಾಗರ ಪಂಚಮಿ ಹಬ್ಬದ ದಿನವೇ ಹಾವು ಕಡಿದು ವಾಟರ್‌ಮ್ಯಾನ್ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸೋಲದಾಬಕಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು 48 ವರ್ಷದ ಭೀಮ ಜಾಧವ್ ಎಂದು ಗುರುತಿಸಲಾಗಿದೆ. ನೀರಿನ ಟ್ಯಾಂಕ್ ಬಳಿ ನೀರು ಬಂದ್ ಮಾಡಲು ತೆರಳಿದ ಸಂದರ್ಭದಲ್ಲಿ ಹಾವು ಕಡಿದು ಭೀಮ ಸಾವನ್ನಪ್ಪಿದ್ದಾರೆ.
ಕುಟುಂಬಸ್ಥರ ಆಕ್ರಂದನ
ಹಾವು ಕಡಿದ ಪರಿಣಾಮ ಸ್ಥಳದಲ್ಲೇ ಭೀಮ ಜಾಧವ್ ಸಾವನ್ನಪ್ಪಿದ್ದು, ನೀರಿನ ಟ್ಯಾಂಕ್ ಸುತ್ತಮುತ್ತ ಹುಲ್ಲು-ಕಡ್ಡಿ ಬೆಳೆದಿದ್ದೇ ಅವಘಡಕ್ಕೆ ಕಾರಣ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಹುಲ್ಲು ಕಟಾವು ಮಾಡುವಂತೆ ಗ್ರಾಮ ಪಂಚಾಯಿತಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಸೋಲದಾಬಕಾ ಹೊರವಲಯದ ಹಾಲಹಳ್ಳಿ ರಸ್ತೆ ಬಳಿಯ ಮಹದೇವ ಮಂದಿರದ ಸಮೀಪ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಹುಲಸೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹಾವು ಕಚ್ಚಿದಂತೆ ಕನಸು, ಮರುದಿನವೇ ಸಾವು!
ಇತ್ತ ಚಿಕ್ಕೋಡಿಯಲ್ಲಿ ನಾಗರ ಪಂಚಮಿಯ ದಿನವೇ ಹಾವು ಕಡಿತದು ಮಹಿಳೆ ಇಹಲೋಕ ತ್ಯಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 43 ವರ್ಷದ ಸತ್ಯವ್ವ ಶಿವಾನಂದ ಶಿಂಗೆ ಎಂದು ಗುರುತಿಸಲಾಗಿದೆ.
ಸತ್ಯವ್ವ ಅವರಿಗೆ ನಾಗರ ಪಂಚಮಿಯ ಇಂದಿನ ದಿನವೇ ಹಾವು ಕಚ್ಚಿದಂತೆ ಕನಸು ಬಂದಿತ್ತಂತೆ. ಇದನ್ನು ಕೂಲಿ ಕೆಲಸಕ್ಕೆ ಹೋದಾಗ ತಮ್ಮ ಸಹಪಾಠಿಗಳೊಂದಿಗೆ ಮಹಿಳೆ ಹಂಚಿಕೊಂಡಿದ್ದರಂತೆ. ಆದರೆ ಇದಾದ ಮರುದಿನವೇ ಹಾವು ಕಚ್ಚಿಯೇ ಮಹಿಳೆ ಸತ್ಯವ್ವ ಸಾವನ್ನಪ್ಪಿದ್ದಾರೆ. ಕಾಕತಾಳೀಯ ಎಂಬಂತೆ ಪಂಚಮಿಯ ದಿನವೇ ಹಾವು ಹಚ್ಚಿ ಮಹಿಳೆ ಸಾವನ್ನಪ್ಪಿದ್ದು, ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


