ಆರ್‌ಎಸ್‌ಎಸ್ ನೋಂದಣಿಯಾಗುವುದಿಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರು ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್ ಅನ್ನು 'ಭಂಡರು' ಎಂದು ಕರೆದ ಅವರು, ಕಳ್ಳ ದುಡ್ಡನ್ನು ರಕ್ಷಿಸಿಕೊಳ್ಳಲು ನೋಂದಣಿ ಮಾಡಿಸುತ್ತಿಲ್ಲ ಎಂದು ಆರೋಪಿಸಿದರು.
ಬಾಗಲಕೋಟೆ (ಆ.15): 'ಇದಕ್ಕೆಲ್ಲ ಭಂಡರು ಅಂತಾರೆ, ಭಂಡರು ಅಂತಾ ಕರೀತಾರೆ..' ಆರ್‌ಎಸ್‌ಎಸ್ ಮುಂಚೆ ನೋಂದಣಿಯಾಗಿಲ್ಲ, ಮುಂದೆಯೂ ಆಗೊಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರು ತಿರುಗೇಟು ನೀಡಿದರು.
ಆರ್‌ಎಸ್‌ಎಸ್‌ಗೆ ಕಳ್ಳ ದುಡ್ಡು ಬರುತ್ತೆ
ಇಂದು ಬಾಗಲಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆರೆಸ್ಸೆಸ್‌ಗೆ ಕಳ್ಳ ದುಡ್ಡು ಬರ್ತಿದೆ. ನೋಂದಣಿ ಮಾಡಿಸಿದರೆ ಇವರಿಗೆ ಕಳ್ಳ ದುಡ್ಡು ಹೇಗೆ ಬರುತ್ತೆ ಅಂತಾ ಸರ್ಕಾರಕ್ಕೆ ಗೊತ್ತಾಗುತ್ತೆ. ಕಳ್ಳ ದುಡ್ಡನ್ನು ರಕ್ಷಣೆ ಮಾಡಿಕೊಳ್ಳೋದಕ್ಕೆ ನೋಂದಣಿ ಮಾಡಲ್ಲ ಅಂತಿದ್ದಾರೆ ಎಂದು ಕಿಡಿಕಾರಿದರು.
ಆರೆಸ್ಸೆಸ್‌ನವರಿಗೆ ಸಂವಿಧಾನದ ಅರಿವು ಇದೆಯಾ?
ದೇಶದ ಸಂವಿಧಾನದ ಅಡಿಯಲ್ಲಿ ಇರುವ ಪ್ರಜೆಗಳು ನಾವು ಅಂತಾ ಹೇಳ್ತಾರೆ. ಆದರೆ ಸಂವಿಧಾನ ಏನು ಹೇಳುತ್ತೆ? ಇವರಿಗೆ ಸಂವಿಧಾನದ ಅರಿವು ಏನಾದ್ರೂ ಇದೆಯಾ? ಸಂವಿಧಾನಕ್ಕೆ ಇವರು ಗೌರವ ಕೊಡ್ತಾರಾ? ಏನೂ ಇಲ್ಲ. ಅದಕ್ಕೆ ಇವರನ್ನು ಭಂಡರು ಅನ್ನೋದು ಇವರಿಗೆ ಸಂವಿಧಾನ ಬೇಕಿಲ್ಲ. ಕಾನೂನು ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಗೃಹಸಚಿವರು ಕಡ್ಡಾಯವಾಗಿ ನೋಂದಣಿ ಮಾಡ್ಕೊಳ್ಳಬೇಕೆಂಬ ಕಾನೂನು ಜಾರಿಗೆ ತರಲು ಮುಂದಾಗಿದ್ದಾರೆ. ಯಾವುದೇ ಸಂಘಟನೆ ಇರಲಿ. ಆ ಸಂಘಟನೆಗೆ ಒಂದು ಹೆಸರಿರಬೇಕು, ಒಂದು ನೋಂದಣಿ ಇರಬೇಕು. ಅಂದಾಗ ಮಾತ್ರ ಅದು ಅಧಿಕೃತ ಆಗೋಕೆ ಸಾಧ್ಯ. ಕೆಲವೊಂದಿಷ್ಟು ಸಂಘಟನೆಗಳಿಗೆ ವಿದೇಶದಿಂದ ದೇಣಿಗೆ ಬರ್ತಾ ಇತ್ತು. ಅದನ್ನ ಬಂದ್ದ ಮಾಡಲಿಕ್ಕೆ ಕೇಂದ್ರದಲ್ಲಿ ಕೆಲವೊಂದು ಬಿಲ್ ಪಾಸ್ ಮಾಡಿದರು. ಮತ್ತೆ ಇವರಿಗೆ ಆರ್‌ಎಸ್‌ಎಸ್ ನವರಿಗೆ ಎಲ್ಲಿಂದ ದುಡ್ಡು ಬರುತ್ತೆ? ಅದನ್ನ ತೋರಿಸಲಿ, ಲೆಕ್ಕ ಕೊಡಲಿ ಎಂದು ಸವಾಲೆಸೆದರು.
ಆರೆಸ್ಸೆಸ್, ಬಿಜೆಪಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತೆ?
ಆರೆಸ್ಸೆಸ್‌ಗೆ, ಬಿಜೆಪಿಯವರಿಗೆ ದುಡ್ಡು ಎಲ್ಲಿ ಬರುತ್ತೆ? ಅದು ಕೇವಲ 12 ವರ್ಷದಲ್ಲಿ. ನಾವು 70 ವರ್ಷದಿಂದ ಆಡಳಿತ ಮಾಡುತ್ತಿದ್ದೇವೆ. ನಮ್ಮದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತ ಪಕ್ಷ. ನಮ್ಮ ಪರಿಸ್ಥಿತಿ ನೋಡಿ ಭಾರತೀಯ ಜನತಾ ಪಕ್ಷದ ಪರಿಸ್ಥಿತಿ ನೋಡಿ ಹೇಗಿದ್ದಾರೆ. ಬಿಜೆಪಿ ಅವರ ಹತ್ರ ಎಷ್ಟು ದುಡ್ಡಿದೆ ಅಷ್ಟೊಂದು ಹಣ ಎಲ್ಲಿಂದ ಬಂತು. ಇದೆಲ್ಲವನ್ನು ಮುಚ್ಚಿ ಹಾಕುವಂತ ಕೆಲಸ ಮಾಡ್ತಿದ್ದಾರೆ. ಆರೆಸ್ಸೆಸ್‌ನವರದ್ದು ಇದೇ ಹಣೆಬರಹ. ಅದಕ್ಕೆ ನೋಂದಣಿ ಮಾಡಿಸೋಲ್ಲ ಅಂತಾರೆ. ಕೈಯಲ್ಲಿ ಬಡಿಗೆ ಹಿಡ್ಕೊಂಡು ಬಂದು ಟ್ರೈನಿಂಗ್ ಕೊಡ್ತಾರೆ. ಇದು ಏನು ದೇಶದ ರಕ್ಷಣೆಗಾ? ದೇಶದಲ್ಲೇನು ಸ್ವಾತಂತ್ರ್ಯ ಚಳವಳಿ ನಡೆದಿದೆಯಾ? ದೇಶದಲ್ಲೇ ಇವರು ಸ್ವಾತಂತ್ರ್ಯ ತರುವಂತ ಕೆಲಸ ಮಾಡೋಕೆ ಹೊರಟಿದ್ದಾರಾ? ದೇಶದ ಸ್ವಾತಂತ್ರ್ಯದ ವೇಳೆ ದೇಶದ ವಿರುದ್ಧ ಇವರು ನಡೆವಳಿಕೆಗಳು ನಡೆದಿದ್ದವು. ಇವತ್ತಿಗೂ ಏನು ಮಾಡುತ್ತಿದ್ದಾರೆ? ಸಂವಿಧಾನಕ್ಕೆ ಗೌರವ ಕೊಡಲ್ಲ, ಪ್ರಜಾಪ್ರಭುತ್ವಕ್ಕೆ ಗೌರವ ಕೊಡಲ್ಲ.
ಆರೆಸ್ಸೆಸ್ ವಿರುದ್ಧ ಕ್ರಮಕ್ಕೆ ಒಂದು ಕಾಲ ಬರುತ್ತೆ:
ಧೈರ್ಯವಿದ್ರೆ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸಚಿವರು, ಕಾಲ ಬರುತ್ತೆ. ಅದಕ್ಕೂ ಒಂದು ಕಾಲ ಬರುತ್ತೆ. ಆಕ್ಷನ್ ತಗೊಳ್ಳೋಕೂ, ಕಾನೂನು ಜಾರಿ ಮಾಡೋಕೂ ಒಂದು ಕಾಲ ಬರುತ್ತೆ ಅದು ತಕ್ಷಣ ಆಗೋಲ್ಲ. ಮೊದಲು ಕಾನೂನು ಆಗಬೇಕು ಆಮೇಲೆ ಆಕ್ಷನ್ ಆಗುತ್ತೆ ಎಂದರು.
ಸರಕಾರ ವರ್ಸಸ್ ಆರ್ ಎಸ್ ಎಸ್ ಆಗ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಶಪ್ಪನವರ್, ಸರಕಾರ ವರ್ಸಸ್ ಆರ್ ಎಸ್ ಎಸ್ ಯಾಕೆ ಹೋಲಿಸುತ್ತೀರಿ. ನಮ್ಮ ಸರಕಾರ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳುತ್ತದೆ.
ಎಲ್ಲರನ್ನು ಅಪ್ಪಿಕೊಳ್ಳುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಆದರೆ ಇವರು ಏನು ಮಾಡುತ್ತಿದ್ದಾರೆ? ಎಂದು ಸಚಿವರು ಮಾಧ್ಯಮದವರನ್ನೇ ಪ್ರಶ್ನಿಸಿದರು.


