ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಇದರೊಂದಿಗೆ, ಶರಾವತಿ ಸಂತ್ರಸ್ತರಿಗೆ ಶೀಘ್ರ ಪರಿಹಾರದ ಭರವಸೆ ನೀಡಿದ್ದು, ಶಾಲಾ ಶಿಕ್ಷಣದಲ್ಲಿ ಎಐ ತಂತ್ರಜ್ಞಾನ ಅಳವಡಿಸುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ (ಆ.15): ನೀಟ್ ಪರೀಕ್ಷೆಯನ್ನು ರದ್ದುಪಡಿಸಿದರೆ ಒಳ್ಳೆಯದು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌರವದಿಂದ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹೇಳಿದರು. ನೀಟ್ ಪರೀಕ್ಷೆ ಬ್ಯಾನ್ ಮಾಡಬೇಕಾಗುತ್ತೆ. ನಮ್ಮ ಸರ್ಕಾರ ನೀಟ್ ಪರೀಕ್ಷೆಯನ್ನು ಒಪ್ಪುವುದಿಲ್ಲ ಎಂದರು.

ನೀಟ್: ಮಕ್ಕಳ ಭವಿಷ್ಯ ಹಾಳು ಮಾಡುತ್ತಿದೆ:

ಮಕ್ಕಳ ಭವಿಷ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌರವದಿಂದ ಮಾತನಾಡಿಕೊಂಡು ಮಾಡಿದರೆ ಒಳ್ಳೆಯದು. ಮುಖ್ಯಮಂತ್ರಿಗಳ ಜೊತೆ ಮಾತನಾಡಿಕೊಳ್ಳುತ್ತೇನೆ ಈ ಬಗ್ಗೆ ಚರ್ಚೆ ಮಾಡಬೇಕಿದೆ. ನೀಟ್ ವಿಚಾರದಲ್ಲಿ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ ಅವರಿಗೆ(ಕೇಂದ್ರ ಸರ್ಕಾರ) ಮಾನ ಮರ್ಯಾದೆ ಏನೂ ಇಲ್ಲ. ನಮ್ಮ ವ್ಯವಸ್ಥೆಯಲ್ಲಿ ಇಂತಹ ತಪ್ಪುಗಳಿದ್ದರೆ ಇದರಂತಹ ದುರಂತ ಮತ್ತೆ ಯಾವುದು ಇಲ್ಲ. ಒಂದು ವರ್ಷದಲ್ಲಿ ಮೂರು ಪರೀಕ್ಷೆ ಮಾಡಿದ್ದೇನೆ. 25 ದಿನಕ್ಕೆ ಒಂದು 22 ದಿನಕ್ಕೆ ಮತ್ತೊಂದು ಮಾಡಿದ್ದೇನೆ. ಆದರೆ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಿ ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ನಾನು ಮತ್ತೆ ಶಿಕ್ಷಣ ಸಚಿವನಾಗಿದ್ದಕ್ಕೆ ಸಂತೋಷವಿದೆ:

ನಾನು ಮತ್ತೆ ಸಚಿವನಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಿಕ್ಕಿರುವುದಕ್ಕೆ ಸಂತೋಷವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ಹೇಗೆ ಚಲಾಯಿಸಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ. ಅವರಿಂದ ಒಮ್ಮೆ ಮಾತ್ರ ಬೈಸಿಕೊಂಡಿದ್ದೆ. ಡಿ.ಕೆ. ಶಿವಕುಮಾರ್ ಅವರು ಬಂಗಾರಪ್ಪನವರ ಅಡಿಯಲ್ಲಿ ನಾನು ಕೆಲಸ ಮಾಡಿದ್ದೆ, ಅವರ ಮಗನನ್ನು ನನ್ನ ಅಡಿಯಲ್ಲಿ ಕೆಲಸ ಮಾಡಿಸಿಕೊಳ್ಳುವುದು ನನ್ನ ಭಾಗ್ಯ ಎಂದಿದ್ದಾರೆ ಎಂಬುದನ್ನೂ ತಿಳಿಸಿದರು.

ಶರಾವತಿ ಸಂತ್ರಸ್ತರಿಗೆ ಪರಿಹಾರದ ಭರವಸೆ

ಶರಾವತಿ ನದಿ ಸಂತ್ರಸ್ತರ ಸಮಸ್ಯೆ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ರಾಜ್ಯದ ಪರವಾಗಿ ಅಡ್ವೋಕೇಟ್ ಜನರಲ್ ಸಂತ್ರಸ್ತರ ಪಟ್ಟಿಗೆ ಸಂಬಂಧಿಸಿದಂತೆ ಕೆಲವು ಮಾನದಂಡಗಳನ್ನು ಪ್ರಸ್ತಾಪಿಸಲಿದ್ದಾರೆ. ಪ್ರಕರಣ ಅಂತಿಮ ಹಂತದಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ. ಸುಮಾರು 9 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಮಾನದಂಡಗಳ ಆಧಾರದ ಮೇಲೆ ಭೂಮಿ ಹಕ್ಕು ಸಿಗಲಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ AI ಬಳಕೆ:

ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಶೂ ನೀಡುವ ಕೆಲಸ ನಡೆಯುತ್ತಿದೆ. ಶೂಗಳ ಸೈಜ್‌ನಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಬೇರೆ ಬೇರೆ ಸೈಜ್‌ಗಳಿರುವಾಗ ಗುಣಮಟ್ಟದಲ್ಲೂ ಬದಲಾವಣೆ ಆಗುತ್ತದೆ. ಶಾಲಾ ಮಕ್ಕಳಿಗೆ ಎಐ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಶಿಕ್ಷಕರ ಕೌನ್ಸೆಲಿಂಗ್ ಮತ್ತು ವರ್ಗಾವಣೆ ಕುರಿತು ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಸ್ತೂರಿರಂಗನ್ ವರದಿಗೆ ವಿರೋಧ

ಯಾವುದೇ ಕಾರಣಕ್ಕೂ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ವರದಿಯನ್ನು ಬೇರೆ ರೀತಿಯಲ್ಲಿ ಬದಲಾವಣೆ ಮಾಡಬೇಕು ಎಂದರು. ಇನ್ನು ಜಮೀರ್ ಅಹ್ಮದ್ ಅವರು ವಿಜಯನಗರ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣದಿಂದ ವಿನಾಯಿತಿ ಕೇಳಿದ್ದಾರೆ ಎಂಬ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಅವರು ಧ್ವಜಾರೋಹಣ ಮಾಡುವುದಿಲ್ಲ ಎಂದು ಹೇಳಿಲ್ಲ, ವಿಚಾರವನ್ನು ತಿರುಚಲಾಗಿದೆ ಎಂದರು.