ಉತ್ತಮ ಪರಿಕಲ್ಪನೆಯೊಂದಿಗೆ ಜಾರಿಗೊಳಿಸುತ್ತಿರುವ ಎನ್‌ಇಪಿಯನ್ನು (ರಾಷ್ಟ್ರೀಯ ಶಿಕ್ಷಣ ನೀತಿ) ಅಳವಡಿಸಿಕೊಳ್ಳುವಲ್ಲಿ ಉಂಟಾಗುತ್ತಿರುವ ತೊಡಕು ನಿವಾರಿಸಲು ಕೇಂದ್ರ ಸರ್ಕಾರಕ್ಕೆ ಕೆಲವು ಶಿಫಾರಸು ಮಾಡಲಾಗುವುದು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಹೇಳಿದರು.

 ಮೈಸೂರು (ಅ. 17) : ಉತ್ತಮ ಪರಿಕಲ್ಪನೆಯೊಂದಿಗೆ ಜಾರಿಗೊಳಿಸುತ್ತಿರುವ ಎನ್‌ ಇ ಪಿಯನ್ನು (ರಾಷ್ಟ್ರೀಯ ಶಿಕ್ಷಣ ನೀತಿ) ಅಳವಡಿಸಿಕೊಳ್ಳುವಲ್ಲಿ ಉಂಟಾಗುತ್ತಿರುವ ತೊಡಕು ನಿವಾರಿಸಲು ಕೇಂದ್ರ ಸರ್ಕಾರಕ್ಕೆ ಕೆಲವು ಶಿಫಾರಸು ಮಾಡಲಾಗುವುದು ಎಂದು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್‌. ರಂಗಪ್ಪ ಹೇಳಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕರ್ನಾಟಕದ (Karnataka ) ನಿವೃತ್ತ ಕುಲಪತಿಗಳ ವೇದಿಕೆ (ಎಫ್‌ವಿಸಿಕೆ) ಹಾಗೂ ಮೈಸೂರು (Mysuru) ವಿಶ್ವವಿದ್ಯಾಲಯದ ಅಲ್ಯುಮ್ನಿ ಅಸೋಸಿಯೇಷನ್‌ (ಯುಎಂಎಎ) ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಬಹುಶಿಸ್ತೀಯ ಕೋರ್ಸ್‌ಗಳ ಆಯ್ಕೆ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎನ್‌ಇಪಿಯನ್ನು ತರಾತುರಿಯಲ್ಲಿ ಮಾಡಲಾಗಿದೆ. ಈ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿವೆ. ಕೆಲವೆಡೆ ಉಪನ್ಯಾಸಕರಿಲ್ಲ, ಸೌಲಭ್ಯಗಳಿಲ್ಲ, ಉತ್ತರ ಪತ್ರಿಕೆ ಬಂದಿಲ್ಲ ಎಂಬುದು ಸೇರಿದಂತೆ ಸೌಲಭ್ಯದ ಕೊರತೆಗಳಿವೆ. ಇದನ್ನು ಸರಿಪಡಿಸುವ ಕುರಿತು ಆರು ತಿಂಗಳಿನಿಂದ ಚರ್ಚೆ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಎನ್‌ಇಪಿ ಒಳ್ಳೆಯ ಪರಿಕಲ್ಪನೆಯನ್ನು ಹೊಂದಿದೆ. ಆದರೆ ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತರದಿದ್ದರೆ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಉಪನ್ಯಾಸಕರ ಅಭಿಪ್ರಾಯ ಕೇಳಲಾಗುತ್ತಿದೆ. ಆ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಕಳಿಹಿಸಿ ಅನುಮೋದನೆ ಪಡೆದ ಬಳಕ ಎನ್‌ಇಪಿ ಅನುಷ್ಠಾನಗೊಳಿಸುವುದಾಗಿ ಅವರು ಹೇಳಿದರು.

ಈ ಸಂಬಂಧ ಸಾಕಷ್ಟುತಾಪತ್ರಯವಿದೆ. ಒಂದು ವರ್ಷವಾದರೂ ಅಂಕಪಟ್ಟಿಕೊಟ್ಟಿಲ್ಲ ಎಂದಾದರೆ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪೊ›.ಜಿ. ಹೇಮಂತಕುಮಾರ್‌ ಮಾತನಾಡಿ, ಎನ್‌ಇಪಿ ವಿಜ್ಞಾನದ ಪಠ್ಯಕ್ರಮ ಸಮಿತಿ ಅಧ್ಯಕ್ಷನಾದೆ. ವಿಶ್ವದ ಮೊದಲ 100 ವಿವಿಗಳ ರಾರ‍ಯಂಕ್‌ಪಟ್ಟಿಯಲ್ಲಿ ಭಾರತದ ವಿವಿಗಳು ಬರಬೇಕು ಎನ್ನುವುದು ಕೇಂದ್ರದ ಉದ್ದೇಶ. ಇದಕ್ಕಾಗಿ ಗುಣಮಟ್ಟದ ಶಿಕ್ಷಣ ಅಗತ್ಯ. ಇದಕ್ಕೆ ಪೂರಕವಾಗಿ ಬೋಧಕರು ಮನೋಭಾವ ಬದಲಿಸಿಕೊಳ್ಳಬೇಕು ಎಂದರು.

ಕೋರ್ಸ್‌ಗಳ ಆಯ್ಕೆಯ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಬದಲಾವಣೆಯಾದಾಗ ಆರಂಭದಲ್ಲಿ ವಿರೋಧವಿರುತ್ತದೆ. ನಂತರ ಸರಿ ಹೋಗುತ್ತದೆ. ಸರ್ಕಾರವು ಹೆಚ್ಚಿನ ಅನುದಾನ, ಮೂಲಸೌಲಭ್ಯ ಮತ್ತು ಮಾನವ ಸಂಪನ್ಮೂಲ ಒದಗಿಸಿದರೆ ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂದು ಅವರು ಹೇಳಿದರು.

ವಿಶ್ರಾಂತ ಕುಲಪತಿ ಎಸ್‌.ಎನ್‌. ಹೆಗ್ಡೆ ಮಾತನಾಡಿ, ಇದು ಎರಡು ವರ್ಷಸ ಹಿಂದಿನ ಪಾಲಿಸಿ ಅಲ್ಲ. 15 ವರ್ಷದ ಪಾಲಿಸಿ. ಇದನ್ನು ಎಲ್ಲಾ ಕಾಲೇಜುಗಳಲ್ಲಿ ಅನುಷ್ಠಾನಕ್ಕೆ ತರಬೇಕು. ಇದು ಒಳ್ಳೆಯ ಯೋಜನೆ. ಆದರೆ ಅದಕ್ಕೆ ತಯಾರಿ ಆಗಿದೆಯಾ? ರಾಜಕೀಯ ಧೋರಣೆ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡಬಾರದು. ಈ ಯೋಜನೆ ಅನುಷ್ಠಾನಕ್ಕೆ ಬೇಕಾದ ಶಿಕ್ಷಕರು ಎಲ್ಲಿದ್ದಾರೆ? ಸೌಕರ್ಯ ಎಲ್ಲಿದೆ? ಇದನ್ನೆಲ್ಲ ಸರ್ಕಾರ ಗಮನಿಸಬೇಕು. ಇಂತಹ ಕಾರ್ಯಾಗಾರ ಹೆಚ್ಚು ನಡೆಯಬೇಕು. ಕಲಾ, ವಿಜ್ಞಾನ, ವಾಣಿಜ್ಯ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಕೊಡಬೇಕು ಎಂದರು.

ವಿಶ್ರಾಂತ ಕುಲಪತಿ ಎನ್‌.ಎಸ್‌. ರಾಮೇಗೌಡ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಇಲ್ಲಿ ಬಂದಿದ್ದಾರೆ. ಇವರು ತಮ್ಮ ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ವಿಷಯ ತಿಳಿಸುತ್ತಾರೆ. ಮೂರು ವಿಭಾಗದ ಗುಂಪು ಮಾಡಲಾಗಿದೆ. ಕ್ರೆಡಿಟ್‌ ಕೊಡಲಾಗಿದೆ. ಮೌಲ್ಯಮಾಪನ ಮಾಡಬೇಕು. ನಂತರ ಈ ವರದಿಯನ್ನು ಸರ್ಕಾರಕ್ಕೆ ನೀಡಲಾಗುತ್ತದೆ ಎಂದರು.

ವಿಶ್ರಾಂತ ಕುಲಪತಿ ಪೊ›. ನಿರಂಜನ, ಪೊ›.ಕೆ.ಎಸ್‌. ಅಮೃತೇಶ್‌ ಇದ್ದರು. ಪೊ›.ಸಿ.ನಾಗಣ್ಣ ನಿರೂಪಿಸಿದರು. ಎಚ್‌.ಆರ್‌. ಕಲ್ಯಾಣಿ ಪ್ರಾರ್ಥಿಸಿದರು. ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯಕರ್ಶಿ ಪ್ರೊ.ಎಸ್‌. ಶ್ರೀಕಂಠಸ್ವಾಮಿ ಇದ್ದರು.