ಯುಗಾದಿ ಮತ್ತು ಹೊಸ ತೊಡಕು ಹಬ್ಬಗಳ ರಜೆಯಿಂದಾಗಿ ಬೆಂಗಳೂರಿನ ಬಹುತೇಕ ಹೋಟೆಲ್‌ಗಳಿಗೆ ಸಿಲಿಂಡರ್ ಕೊರತೆಯ ಬಿಸಿ ತಟ್ಟದಿದ್ದರೂ, ಹಬ್ಬದ ವಿಶೇಷ ಊಟ ತಯಾರಿಸುವ ಕೆಲ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಹೋಳಿಗೆಯಂತಹ ಖಾದ್ಯಗಳಿಗೆ ಬೇಡಿಕೆ ಹೆಚ್ಚಿದ್ದು, ವಾಣಿಜ್ಯ ಸಿಲಿಂಡರ್ ಅಭಾವದಿಂದ ಒಲೆ ಮೇಲೆ ತಯಾರಿ
-ಬೆಂಗಳೂರು (ಮಾ.19) ಯುಗಾದಿ ಹಬ್ಬವಾಗಿರುವುದರಿಂದ ಗುರುವಾರ ಮನೆಗಳಲ್ಲಿ ಸಿಹಿ ಊಟ ತಯಾರಿಸಲಿದ್ದು ಸಸ್ಯಾಹಾರಿ ಹೋಟೆಲ್‌ಗಳು ಬಹುತೇಕ ಬಂದ್ ಆಗಲಿವೆ. ಮತ್ತೊಂದೆಡೆ, ಶುಕ್ರವಾರ ಹೊಸ ತೊಡಕು ಇರುವುದರಿಂದ ಮಾಂಸಾಹಾರಿ ಹೋಟೆಲ್‌ಗಳು ರಜೆ ಮಾಡಲಿದ್ದು, ಹೋಟೆಲ್ ಉದ್ಯಮಕ್ಕೆ ಅನಿಲ ಸಿಲಿಂಡರ್ ಬಿಸಿ ಈ ಎರಡು ದಿನದಲ್ಲಿ ಅಷ್ಟೇನೂ ತಟ್ಟುವುದಿಲ್ಲ.
ಹೋಟೆಲ್ ಉದ್ಯಮಕ್ಕೆ ದಿನಕ್ಕೆ 1000 ಸಿಲಿಂಡರ್ ಸರಬರಾಜು ಮಾಡುವುದಾಗಿ ಸ್ಪಷ್ಟಪಡಿಸಿದ್ದರೂ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೋಟೆಲ್ ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ನಡುವೆ ಯುಗಾದಿ ಮತ್ತು ಹೊಸ ತೊಡಕು ಹೋಟೆಲ್‌ಗಳಿಗೆ ಒಂದಷ್ಟು ನಿಶ್ಚಿಂತೆ ತಂದಿರುವುದು ಕಂಡುಬಂದಿದೆ.
ಮಲ್ಲೇಶ್ವರದ ಹಳ್ಳಿಮನೆ, ಶ್ರೀನಗರದ ಅನ್ನಪೂರ್ಣೇಶ್ವರಿ ಹೋಳಿಗೆ ಮನೆ ಸೇರಿದಂತೆ ಕೆಲ ಹೋಟೆಲ್‌ಗಳು ಮಾತ್ರ ಹಬ್ಬದ ದಿನವೇ ಹೋಳಿಗೆ ಊಟ ತಯಾರಿಸಿ ಉಣಬಡಿಸುವ ಸಂಪ್ರದಾಯ ಇಟ್ಟುಕೊಂಡಿವೆ. ಇಂತಹ ಹೋಟೆಲ್‌ಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗದೇ ಸೌದೆ ಒಲೆ ಸೇರಿದಂತೆ ಪರ್ಯಾಯ ಮಾರ್ಗಗಳತ್ತ ಮುಖ ಮಾಡಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಗರದ ಅನ್ನಪೂರ್ಣೇಶ್ವರಿ ಹೋಳಿಗೆ ಮನೆ ಹೋಟೆಲ್ ಮಾಲೀಕ ಚಂದ್ರಶೇಖರ್, ‘ಯುಗಾದಿ ಹಬ್ಬಕ್ಕೆ ಹೋಳಿಗೆಗೆ ಬೇಡಿಕೆ ಇದೆ. ದುಬಾರಿ ಬೆಲೆ ನೀಡಿ ಗ್ಯಾಸ್ ಸಿಲಿಂಡರ್ ಖರೀದಿಸಿ ತರಲು ಆಗುತ್ತಿಲ್ಲ. ಆದ್ದರಿಂದ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತೇವೆ. ಹೋಳಿಗೆ ಬೆಲೆ ಹೆಚ್ಚಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸಗಟು ಸರಬರಾಜಿಲ್ಲ
ಮಲ್ಲೇಶ್ವರದ ಹಳ್ಳಿ ಮನೆ ಹೋಟೆಲ್ ಮಾಲೀಕ ರಾಘವೇಂದ್ರ ಮಾತನಾಡಿ, ‘20 ವರ್ಷದಿಂದ ಯುಗಾದಿ ಹಬ್ಬದಲ್ಲಿ ಹೋಳಿಗೆ ಊಟ ತಯಾರು ಮಾಡುತ್ತಿದ್ದೇವೆ. ಹೋಳಿಗೆಗೆ ಭಾರೀ ಬೇಡಿಕೆ ಇದೆ. ಅನಿಲ ಸಿಲಿಂಡರ್ ಅಭಾವ ಇರುವುದರಿಂದ ಈ ಬಾರಿ ಸೌದೆ ಒಲೆ ಮತ್ತು ಇಂಡಕ್ಷನ್ ಮೂಲಕ ಹೋಳಿಗೆ ತಯಾರಿಸಲಾಗುವುದು. ಸಂಕಷ್ಟ ಪರಿಸ್ಥಿತಿಯಿಂದಾಗಿ ಸಗಟು ಸರಬರಾಜು ಮಾಡುವುದಿಲ್ಲ’ ಎಂದರು.


