ಚಾಮುಂಡಿಬೆಟ್ಟದ ಗರ್ಭಗುಡಿ ಬಳಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತದ ಆತಂಕ ಎದುರಾಗಿದ್ದು, ಇದನ್ನು ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.  ಪ್ರಸಾದ್ ಯೋಜನೆಯಡಿ ಬೆಟ್ಟದ ಪಾರಂಪರಿಕತೆಗೆ ಧಕ್ಕೆಯಾಗದಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಮೈಸೂರು ನಗರದ ಹಲವು ನಾಯಕರು, ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಚಾಮುಂಡಿಬೆಟ್ಟದವರೆಗೆ ಚಲೋ ನಡೆಸಿ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ದೇವಾಲಯದ ಗರ್ಭಗುಡಿ ಸಮೀಪ ಹಾಗೂ ಬೆಟ್ಟದ ತುದಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ.

ಈ ಪ್ರದೇಶವು ಪರಿಸರದ ದೃಷ್ಟಿಯಿಂದ ಅತೀ ಸೂಕ್ಷ್ಮ ವಲಯವಾಗಿದ್ದು, ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದರೆ, ಜಿಲ್ಲಾಡಳಿತವು ಯಾವುದೇ ವೈಜ್ಞಾನಿಕ ಅನುಮೋದನೆ, ಪರಿಸರ ಅನುಮತಿ ಹಾಗೂ ಆಗಮ ಶಾಸ್ತ್ರ ಪ್ರಕಾರ ಆಧ್ಯಾತ್ಮಿಕ ಅನುಮತಿ ಪಡೆಯದೆ ಕಾಮಗಾರಿ ಮುಂದುವರಿಸುತ್ತಿರುವುದು ಅತ್ಯಂತ ಅಪಾಯಕಾರಿ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪ್ರತಿಭಟನಾಕಾರರ ಆತಂಕ ಏನು?

ಇದರಿಂದ ಬೆಟ್ಟದ ಪಾರಂಪರಿಕ ಮೌಲ್ಯಕ್ಕೆ ಧಕ್ಕೆ ಉಂಟಾಗುವುದಲ್ಲದೆ, ಈಗಾಗಲೇ ನಾಜೂಕಾಗಿರುವ ಪರಿಸರಕ್ಕೆ ಹಾನಿ ಸಂಭವಿಸಬಹುದು. ಭೂಕುಸಿತಗಳ ಅಪಾಯ ಹೆಚ್ಚಬಹುದು ಮತ್ತು ದೇವಾಲಯದ ರಚನೆಗೂ ಗಂಭೀರ ಹಾನಿ ಆಗುವ ಸಾಧ್ಯತೆ ಇದೆ ಎಂದು ದೂರಿದ್ದಾರೆ.

ಬೆಟ್ಟಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ: ಮಹದೇವಪ್ಪ

ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಪಾರಂಪರಿಕತೆಗೆ ಯಾವುದೇ ಧಕ್ಕೆ ಆಗದಂತೆ ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವ ಡಾ। ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ನಗರದ ಜಿಪಂ ಸಭಾಂಗಣದಲ್ಲಿ ನಡೆದ ಪ್ರಸಾದ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾತನಾಡಿ, ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಯಾವುದೇ ತೊಂದರೆ ಆಗದಂತೆ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಚಾಮುಂಡಿಬೆಟ್ಟದಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಆದ್ದರಿಂದಲೇ ಚಾಮುಂಡಿಬೆಟ್ಟದ ನಿವಾಸಿಗಳ ಅಹವಾಲನ್ನು ಹಾಗೂ ಅನಿಸಿಕೆಗಳನ್ನು ಸ್ವೀಕರಿಸಲಾಗುತ್ತಿದೆ. ಅಲ್ಲಿನ ನಿವಾಸಿಗಳ ಸಲಹೆ ಪಡೆದು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ರೀಲ್ಸ್‌ ಹುಚ್ಚಿಗೆ ತನ್ನದೇ ಟ್ರ್ಯಾಕ್ಟರ್‌ ಗಾಲಿಗೆ ಸಿಲುಕಿ ಕಲಬುರಗಿಯ 23 ವರ್ಷದ ರೈತ ಸಾವು