ಕಲಬುರಗಿಯಲ್ಲಿ ರೀಲ್ಸ್ ಮಾಡುವಾಗ ಯುವ ರೈತ ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟರೆ, ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. 

ಕಲಬುರಗಿ: ಟ್ರ್ಯಾಕ್ಟರ್‌ ಚಲಿಸುತ್ತಲೇ ರೀಲ್ಸ್‌ ಮಾಡುತ್ತಿದ್ದ ಯುವ ರೈತನೊಬ್ಬ ಅದೇ ಟ್ರ್ಯಾಕ್ಟರ್‌ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರದಲ್ಲಿ ಬುಧವಾರ ನಡೆದಿದೆ. ಕಮಲಾಪುರ ನಿವಾಸಿ ಲೋಕೇಶ್ ಪೂಜಾರಿ (23) ಮೃತ. ಈತ ಟ್ರ್ಯಾಕ್ಟರ್‌ ಡ್ರೈವರ್‌ ಆಗಿದ್ದ. ಟ್ರ್ಯಾಕ್ಟರ್‌ ಚಲಿಸುವಾಗಲೇ ಒಂದು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ಸ್‌ ಮಾಡುತ್ತಾ ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದುಕೊಂಡಿರುತ್ತಿದ್ದ. 

ಬುಧವಾರ ಇದೇ ರೀತಿ ರೀಲ್ಸ್‌ ಮಾಡುವ ಸಮಯದಲ್ಲಿ ಕಾಲು ಜಾರಿ ಟ್ರ್ಯಾಕ್ಟರ್‌ ಗಾಲಿ ಕೆಳಗೆ ಬಿದ್ದಿದ್ದು, ದೇಹದ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪಕ್ಕದ ಹೊಲದಲ್ಲಿದ್ದ ರೈತರು ಚಾಲಕನಿಲ್ಲದೇ ಬರೀ ಟ್ರ್ಯಾಕ್ಟರ್‌ ಚಲಿಸುತ್ತಿರುವುದನ್ನು ಕಂಡು ಹತ್ತಿರ ಬಂದು ಪರಿಶೀಲಿಸಿದಾಗ ಡ್ರೈವರ್ ಕೆಳಗೆ ಮೃತಪಟ್ಟಿರುವ ಘಟನೆ ಗೊತ್ತಾಗಿದೆ. ತಕ್ಷಣ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಮಲಾಪುರ ಠಾನೆ ಪೊಲೀಸರು ಪರಿಶೀಲಿಸಿದ್ದಾರೆ. ಮಹಾಗಾಂವ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಕ್ರೋ ಫೈನಾನ್ಸ್‌ ಕಿರುಕುಳ: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಬೆಳಗಾವಿ: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದಲ್ಲಿ ನಡೆದಿದೆ. ಆನಿಗೋಳ ನಿವಾಸಿ ಗೌರವ್ವ ನೀಲಪ್ಪ ಕೆಂಗಾನೂರ (36) ಮೃತ ಮಹಿಳೆ. ಆತ್ಮಹತ್ಯೆಗೂ ಮುನ್ನ ಅವರು ಮನೆಯ ಗೋಡೆ ಮೇಲೆ ಡೆತ್‌ನೋಟ್‌ ಬರೆದಿಟ್ಟು ಬಳಿಕ ಸಮೀಪದ ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ.

‘ನನ್ನ ಸಾವಿಗೆ ಸಂಘದ ಸುಮವ್ವ, ಮಂಜವ್ವ ಹಾಗೂ ಕಸ್ತೂರಿ ಕಾರಣ’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಮೃತ ಮಹಿಳೆ ಗೌರವ್ವ ಅವರು, ತಮ್ಮ ಸಹೋದರ ಸಿದ್ದಪ್ಪಗೆ ಆರೂಢ ಮತ್ತು ತಂಗಿಯನ್ನು ಚನ್ನಾಗಿ ನೋಡಿಕೋ. ಮಕ್ಕಳು ನಿಮ್ಮ ಜವಾಬ್ದಾರಿ. ಆರೂಢನನ್ನು 10ನೇ ತರಗತಿ ಪಾಸ್ ಮಾಡಿಸು. ಇದೇ ನನ್ನ ಕೊನೆ ಆಸೆ ಎಂದು ಮನವಿ ಮಾಡಿಕೊಂಡಿದ್ದಾಳೆ. ಮೃತ ಗೌರವ್ವ ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸುಮಾರು ₹7 ಲಕ್ಷ ಸಾಲ ಪಡೆದಿದ್ದು, ಸಾಲ ಮರುಪಾವತಿಯ ಒತ್ತಡ ಮತ್ತು ನಿರಂತರ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಈ ಕುರಿತು ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುಮಾನಾಸ್ಪದ ರೀತಿ ವಿದ್ಯಾರ್ಥಿನಿಯ ಶವ ಪತ್ತೆ

ಧಾರವಾಡ: ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿನಿಯ ಮೃತ ದೇಹ ಪತ್ತೆಯಾಗಿರುವ ಘಟನೆ ಧಾರವಾಡ ನಗರದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯ ಹಿಂಬದಿಯ ವಿನಯ ಕುಲಕರ್ಣಿ ಹಾಲಿನ ಡೈರಿ ರಸ್ತೆಯಲ್ಲಿ ನಡೆದಿದೆ.

ನಗರದ ಮದೀನಾ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದ ಗಾಂಧಿಚೌಕ ಬಡಾವಣೆಯ ನಿವಾಸಿ ಜಕೀಯಾ ಯೂನಸ್ ಅಲಿ ಮುಲ್ಲಾ (19) ಮೃತ ವಿದ್ಯಾರ್ಥಿನಿ. ಅಪರಿಚಿತ ದುಷ್ಕರ್ಮಿಗಳು ಯುವತಿಯನ್ನು ಹತ್ಯೆ ಮಾಡಿ ನಂತರ ಈ ಪ್ರದೇಶದಲ್ಲಿ ದೇಹವನ್ನು ಸೋಮವಾರ ತಡರಾತ್ರಿ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ. ವಿದ್ಯಾರ್ಥಿನಿಯ ಮುಖ ಜಜ್ಜಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಮಾಲಿ ಆತ್ಮಹ*ತ್ಯೆ

ಚಳ್ಳಕೆರೆ: ತಾಲೂಕಿನ ಕುರುಡಿಹಳ್ಳಿ ಗ್ರಾಮದಲ್ಲಿ ಹಮಾಲಿ ಕಾರ್ಮಿಕ ಎಂ.ಟಿ. ಸ್ವಾಮಿ (೩೩) ಎಂಬಾತ ಮದ್ಯ ಸೇವಿಸಿ, ನೇಣು ಹಾಕಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ಸರಸ್ವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿನಿತ್ಯ ಚಳ್ಳಕೆರೆಗೆ ಹಮಾಲಿ ಕೆಲಸಕ್ಕೆ ಹೋಗುತ್ತಿದ್ದ ಸ್ವಾಮಿ ಮಂಗಳವಾರ ಮನೆಗೆ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ ಗ್ರಾಮದ ಜಮೀನೊಂದರಲ್ಲಿ ಸೀರೆಯಿಂದ ನೇಣುಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿದೆ.