ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಾಗಿ ಗ್ರಾಹಕರು ನಗರದ ಶೋರೂಂ ಮುಂದೆ ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಅಧಿಕೃತ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಮೈಸೂರು : ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಾಗಿ ಗ್ರಾಹಕರು ನಗರದ ಶೋರೂಂ ಮುಂದೆ ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಕೆಎಸ್‌ಐಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ) ತಯಾರಿಸುವ ಈ ಸೀರೆಗಳನ್ನು ಮೈಸೂರಿನಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆ ಆವರಣದ ಮಳಿಗೆ, ಶ್ರೀ ಚಾಮರಾಜೇಂದ್ರ ಮೃಗಾಲಯ ಬಳಿ ಎರಡು, ಕಾಳಿದಾಸ ರಸ್ತೆ, ಯಾತ್ರಿ ನಿವಾಸ್‌, ಕೆ.ಆರ್‌.ವೃತ್ತದ ಬಳಿ ಇರುವ ಅಧಿಕೃತ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಡಿಮ್ಯಾಂಡ್‌ ಯಾಕೆ?:

ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಸ್‌ಐಸಿಯಲ್ಲಿ ಮಾತ್ರ ಓರಿಜಿನಲ್‌ ರೇಷ್ಮೆ ಸೀರೆಗಳನ್ನು ಉತ್ಪಾದಿಸಲಾಗುತ್ತದೆ. ಕಾರ್ಖಾನೆ, ಬೆಂಗಳೂರು, ಮೈಸೂರು ಹಾಗೂ ಹೈದ್ರಾಬಾದ್‌ನಲ್ಲಿರುವ ಅಧಿಕೃತ ಶೋರೂಂನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಆದರೆ, ಕಾರ್ಖಾನೆಯಲ್ಲಿ ಬೇಡಿಕೆ ಇರುವಷ್ಟು ಸೀರೆಗಳನ್ನು ಉತ್ಪಾದಿಸಲಾಗುತ್ತಿಲ್ಲ ಹಾಗೂ ಪೂರೈಸಲಾಗುತ್ತಿಲ್ಲ. ಇದನ್ನು ತಿಳಿದಿರುವ ಖಾಸಗಿಯವರು ಕೆಎಸ್ಐಸಿ ಹೋಲುವಂತಹ ಹೆಸರಿನಲ್ಲಿ ಮಳಿಗೆಗಳನ್ನು ತೆರೆದು, ಗ್ರಾಹಕರಿಗೆ ಚೀನಾ ರೇಷ್ಮೆ ಮತ್ತಿತರ ಸೀರೆಗಳನ್ನು ನೀಡಿ, ಮೋಸ ಮಾಡುತ್ತಿದ್ದಾರೆ. ಹೀಗಾಗಿ, ಇಲ್ಲಿನ ಅಪ್ಪಟ ಮೈಸೂರು ರೇಷ್ಮೆ ಸೀರೆಗಳಿಗೆ ಭಾರಿ ಡಿಮ್ಯಾಂಡ್‌ ಕಂಡು ಬಂದಿದೆ.

ವಿಪರೀತ ಬೇಡಿಕೆ ಮತ್ತು ಸೀರೆಗಳ ಕೊರತೆಯಿಂದಾಗಿ ಕೆಎಸ್‌ಐಸಿ ಆಡಳಿತ ಮಂಡಳಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಜನಸಂದಣಿಯನ್ನು ನಿರ್ವಹಿಸಲು ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಕ್ಯೂ ನಿಲ್ಲುವವರಿಗೆ ಟೋಕನ್‌ ನೀಡಲಾಗುತ್ತಿದ್ದು, ಟೋಕನ್ ಹೊಂದಿರುವ ಗ್ರಾಹಕರಿಗೆ ಮಾತ್ರ ಶೋರೂಮ್ ಒಳಗೆ ಅವಕಾಶವಿದೆ. ಟೋಕನ್‌ ಪಡೆದವರು ಒಂದೇ ಸೀರೆಯನ್ನು ಖರೀದಿಸಬೇಕು. ಸೀರೆಗಳ ಬೆಲೆ ಸುಮಾರು 25,000 ರುಪಾಯಿಂದ ಆರಂಭವಾಗಿ 2.5 ಲಕ್ಷ ರುಪಾಯಿವರೆಗೆ ಇದೆ. ಜರಿ ಇಲ್ಲದ ಸೀರೆಗೆ ಮಾತ್ರ 10 ಸಾವಿರ ರು.ಇರುತ್ತದೆ.

ಪೂರೈಕೆಗೆ ಕ್ರಮ; ಸಚಿವ ವೆಂಕಟೇಶ್‌:

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇಷ್ಮೆ ಸಚಿವ ಕೆ.ವೆಂಕಟೇಶ್‌, ಮೈಸೂರು ರೇಷ್ಮೆ ಸೀರೆಗಳಿಗೆ ತುಂಬಾ ಬೇಡಿಕೆ ಇದ್ದು, ಅದರಂತೆ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆಯಲ್ಲಿ ಮಾತ್ರ ಈ ಸೀರೆಗಳನ್ನು ತಯಾರಿಸಲಾಗುತ್ತದೆ. ಅತ್ಯುತ್ತಮ ಗುಣಮಟ್ಟ ಹಾಗೂ ಆಕರ್ಷಕವಾದ ಬಣ್ಣ ಮತ್ತು ವಿನ್ಯಾಸವಿರುವ ಈ ಸೀರೆಗಳಿಗೆ ತುಂಬಾ ಬೇಡಿಕೆ ಇದೆ. ಹೀಗಾಗಿ ಪೂರೈಸಲು ಕಷ್ಟವಾಗುತ್ತಿದೆ. ಮೊದಲು ಹಗಲು ಪಾಳಿಯಲ್ಲಿ ಮಾತ್ರ ರೇಷ್ಮೆ ಸೀರೆಗಳನ್ನು ಉತ್ಪಾದಿಸಲಾಗುತ್ತಿತ್ತು.

ಈಗ ರಾತ್ರಿ ಪಾಳಿಯನ್ನು ಕೂಡ ಆರಂಭಿಸಿದ್ದೇವೆ ಎಂದು ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಪ್ರತಿನಿತ್ಯ 370-400 ಸೀರೆಗಳ ಉತ್ಪಾದನೆ:ಪ್ರಸ್ತುತ ವಾರ್ಷಿಕ 1.10 ಲಕ್ಷ ಸೀರೆಗಳನ್ನು ಉತ್ಪಾದಿಸಿ, ಮಾರಾಟ ಮಾಡಲಾಗುತ್ತಿದೆ. ಆದರೂ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿನಿತ್ಯ 370 ಸೀರೆ ಉತ್ಪಾದನೆಯನ್ನು ಈಗ 400ಕ್ಕೆ ಹೆಚ್ಚಿಸಲಾಗಿದೆ. ಬುಧವಾರ ಹಾಗೂ ಶುಕ್ರವಾರ ತಲಾ ಒಂದು ಸಾವಿರ ಸೀರೆಗಳನ್ನು ಬೆಂಗಳೂರಿನ ಕೆಎಸ್‌ಐಸಿಯ ಆರು ಶೋ ರೂಂಗೆ ಕಳುಹಿಸಲಾಗುತ್ತದೆ. ಪ್ರತಿ ಶನಿವಾರ ಒಂದು ಸಾವಿರ ಸೀರೆಗಳನ್ನು ಮೈಸೂರಿನ ನಾಲ್ಕರಿಂದ ಆರು ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತದೆ ಎಂದು ಕೆಎಸ್ಐಸಿ ಪ್ರಧಾನ ವ್ಯವಸ್ಥಾಪಕ ಸಿದ್ದಲಿಂಗಪ್ರಸಾದ್‌ ತಿಳಿಸಿದರು.

ರಾಮನಗರ, ಶಿಡ್ಲಘಟ್ಟದಿಂದ ರೇಷ್ಮೆಗೂಡುಗಳನ್ನು ತಂದು ಟಿ.ನರಸೀಪುರದಲ್ಲಿ ದಾರ ತಯಾರಿಸಿ, ಮೈಸೂರಿನಲ್ಲಿರುವ ಎರಡು ಘಟಕಗಳಲ್ಲಿ ಸೀರೆಯನ್ನು ನೇಯ್ಗೆ ಮಾಡಲಾಗುತ್ತದೆ. ನೂರಾರು ಬಣ್ಣಗಳು, ವಿನ್ಯಾಸಗಳು ಹಾಗೂ ಗುಣಮಟ್ಟದ ಸೀರೆಗಳನ್ನು ಉತ್ಪಾದಿಸಿ ನೇರವಾಗಿ ನಮ್ಮ ಮಳಿಗೆಗಳ ಮೂಲಕ ಗ್ರಾಹಕರಿಗೆ ಪೂರೈಸಲಾಗುತ್ತಿದೆ ಎಂದು ಅವರು ಹೇಳಿದರು.