ತುಮಕೂರಿನ ಬೆಳ್ಳಾವಿ ಮಠದಲ್ಲಿ ಹುಟ್ಟುಹಬ್ಬದ ಪ್ಲೆಕ್ಸ್ ವಿಚಾರಕ್ಕೆ ಯುವಕರು ಗಲಾಟೆ ಮಾಡಿದ್ದರಿಂದ ಮನನೊಂದ ವೀರಬಸವ ಸ್ವಾಮೀಜಿ ಮಠವನ್ನೇ ತೊರೆದಿದ್ದಾರೆ. ಎರಡು ದಿನಗಳ ನಂತರ ನಾಪತ್ತೆಯಾಗಿದ್ದ ಶ್ರೀಗಳು ಸಿದ್ದಗಂಗಾ ಮಠದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಗಲಾಟೆ ಮಾಡಿದ ಯುವಕರು ಪೊಲೀಸರು ವಶಕ್ಕೆ

ತುಮಕೂರು(ಮಾ.4): ತುಮಕೂರಿನಲ್ಲಿ ಪ್ಲೆಕ್ಸ್ ವಿಚಾರಕ್ಕೆ ನಡೆದ ಕ್ಷುಲ್ಲಕ ಗಲಾಟೆ ಈಗ ದೊಡ್ಡ ತಿರುವು ಪಡೆದುಕೊಂಡಿದೆ. ಅಪಾರ ಭಕ್ತರನ್ನ ಹೊಂದಿರುವ ಬೆಳ್ಳಾವಿ ಮಠದ ಸ್ವಾಮೀಜಿಯವರ ಮೇಲೆ ಗ್ರಾಮದ ಯುವಕರೇ ಗಲಾಟೆ ಮಾಡಿದ್ದು, ಇದರಿಂದ ಮನನೊಂದ ಸ್ವಾಮೀಜಿ ಮಠವನ್ನೇ ತೊರೆದಿರುವ ಘಟನೆ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಟ್ಟುಹಬ್ಬದ ಪ್ಲೆಕ್ಸ್ ವಿಚಾರಕ್ಕೆ ಸ್ವಾಮೀಜಿಗಳ ಜೊತೆ ಯುವಕರ ಜಗಳ

ತುಮಕೂರು ತಾಲೂಕಿನ ಬೆಳ್ಳಾವಿ ಕಾರದ ಮಠದ ಆವರಣದಲ್ಲಿ ಎರಡು ದಿನಗಳ ಹಿಂದೆ ಗ್ರಾಮದ ವೀರಗಾಸೆ ವೀರೇಶ್ ಎಂಬ ಯುವಕನ ಹುಟ್ಟುಹಬ್ಬಕ್ಕೆ ಶುಭಕೋರಿ ಪ್ಲೆಕ್ಸ್ ಕಟ್ಟಲಾಗಿತ್ತು. ಆದರೆ, ಯಾರೋ ಕಿಡಿಗೇಡಿಗಳು ಈ ಪ್ಲೆಕ್ಸ್ ಅನ್ನು ಹರಿದು ಹಾಕಿದ್ದರು. ಇದರಿಂದ ರೊಚ್ಚಿಗೆದ್ದ ಯುವಕರ ಗುಂಪು ನೇರವಾಗಿ ಮಠಕ್ಕೆ ನುಗ್ಗಿ, ಪ್ಲೆಕ್ಸ್ ಹರಿದವರನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿ ತೋರಿಸುವಂತೆ ವೀರಬಸವ ಸ್ವಾಮೀಜಿಯವರ ಮೇಲೆ ತೀವ್ರ ಗಲಾಟೆ ನಡೆಸಿದ್ದಾರೆ.

ಮನನೊಂದು ರಾತ್ರೋರಾತ್ರಿ ಮಠ ತೊರೆದ ವೀರಬಸವ ಶ್ರೀಗಳು

ಯುವಕರ ಅತಿರೇಕದ ವರ್ತನೆಯಿಂದ ಮಠದ ಆವರಣದಲ್ಲೇ ನಡೆದ ಗಲಾಟೆಯಿಂದ ವೀರಬಸವ ಸ್ವಾಮೀಜಿಯವರು ತೀವ್ರವಾಗಿ ಮನನೊಂದು ಯಾರೂ ಇಲ್ಲದ ವೇಳೆ ಮೊಬೈಲ್ ಸ್ವಿಚ್ ಆಫ್ ಮಾಡಿ ರಾತ್ರೋರಾತ್ರಿ ಮಠ ತೊರೆದಿದ್ದಾರೆ. ಎರಡು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ಶ್ರೀಗಳು ಗುಟ್ಟಾಗಿ ಕ್ಯಾತಸಂದ್ರದ ಸಿದ್ದಗಂಗಾ ಮಠಕ್ಕೆ ತೆರಳಿ ಅಲ್ಲಿ ಆಶ್ರಯ ಪಡೆದಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ 'ಮಿಸ್ಸಿಂಗ್' ಕೇಸ್

ಇತ್ತ ಮಠದಲ್ಲಿ ಸ್ವಾಮೀಜಿ ಕಾಣಿಸದಿದ್ದಾಗ ಗಾಬರಿಗೊಂಡ ಆಡಳಿತ ಮಂಡಳಿಯು ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ ಶ್ರೀಗಳು ಸಿದ್ದಗಂಗಾ ಮಠದಲ್ಲಿ ಸುರಕ್ಷಿತವಾಗಿರುವುದು ಪತ್ತೆಯಾಗಿದೆ. ಸ್ವಾಮೀಜಿಯವರ ಈ ದಿಢೀರ್ ನಿರ್ಧಾರಕ್ಕೆ ಯುವಕರ ಅತಿರೇಕದ ವರ್ತನೆ, ಮಾನಸಿಕ ಕಿರುಕುಳವೇ ಕಾರಣ ಎನ್ನಲಾಗಿದೆ.

ಕಿಡಿಗೇಡಿ ಯುವಕರು ಈಗ ಪೊಲೀಸ್ ವಶಕ್ಕೆ

ಘಟನೆಯ ಬಗ್ಗೆ ಆಡಳಿತ ಮಂಡಳಿ ದೂರು ನೀಡಿದ ಬೆನ್ನಲ್ಲೇ ಬೆಳ್ಳಾವಿ ಪೊಲೀಸರು, ಮಠಕ್ಕೆ ನುಗ್ಗಿ ಸ್ವಾಮೀಜಿಯವರ ಮೇಲೆ ಗಲಾಟೆ ಮಾಡಿದ್ದ ಯುವಕರ ಗುಂಪನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಸಿದ್ದಗಂಗಾ ಮಠದಲ್ಲೇ ಉಳಿದುಕೊಂಡಿರುವ ಶ್ರೀಗಳನ್ನು ಮರಳಿ ಬೆಳ್ಳಾವಿ ಮಠಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ.