ರಾಸಣಗಿ ಬಲಭೀಮಸೇನ ದೇವರಿಗೆ ಅಕ್ಷಯ ತದಿಗೆಯಂದು ಪುರಾತನ ಪದ್ಧತಿಯಂತೆ ಪಾದರಕ್ಷೆ ಸಮರ್ಪಿಸಲಾಯಿತು. ಹರವಾಳ ಗ್ರಾಮದ ಹೇರೂರ ಮನೆತನದವರು 4 ಕಿ.ಮೀ. ಪಾದಯಾತ್ರೆ ಮೂಲಕ ಚಮ್ಮಾವುಗೆಗಳನ್ನು ತಂದು ದೇವರಿಗೆ ಅರ್ಪಿಸಿದರು. ಈ ವಿಶಿಷ್ಟ ಸಂಪ್ರದಾಯವು ಪ್ರತಿ 5 ವರ್ಷಕ್ಕೊಮ್ಮೆ ನಡೆಯುತ್ತದೆ.
ಕಲಬುರಗಿ: ಜೇವರ್ಗಿ ತಾಲೂಕಿನ ಭೀಮಾನದಿ ತೀರದ ಸುಕ್ಷೇತ್ರ ರಾಸಣಗಿಯ ಮಹಾಮಹಿಮ ಬಲಭೀಮಸೇನ ದೇವರಿಗೆ ಅಕ್ಷಯ ತದಿಗೆ ದಿನ ಪುರಾತನ ಪದ್ಧತಿಯಂತೆ ನೂತನ ಚಮ್ಮಾವುಗೆ (ಪಾದರಕ್ಷೆ) ಸಮರ್ಪಿಸಲಾಯಿತು. ಹರವಾಳ ಗ್ರಾಮದ ಹೆರೂರ ಮನೆತನದ ಗಂಗಮ್ಮಾ ದಿ. ಶ್ರೀ ಹುಲೆಪ್ಪ ಹೇರೂರ ಮು. ಹರವಾಳ ರವರ ಕುಟುಂಸ್ಥರು ನಡೆಸಿಕೊಡುತ್ತಾರೆ.
ಪಾದರಕ್ಷೆ ಸಮರ್ಪಣೆ ಪ್ರಕ್ರಿಯೆ ಹೇಗಿರುತ್ತೆ?
ಅಕ್ಷಯ ತೃತೀಯಗೆ ಬೆಳಗಿನ ಜಾವ ಈ ಬಾರಿಯ ಪಾದರಕ್ಷೆ ಸಮರ್ಪಣೆ ಪ್ರಕ್ರಿಯೆ ಆರಂಭವಾದವು. ಬೆಳಗ್ಗೆ 8 ಗಂಟೆಗೆ ಹರವಾಳ ಗ್ರಾಮದಿಂದ ಕಂಟೆಪ್ಪ ಹುಲೆಪ್ಪ ಹೇರೂರ ಹರವಾಳ ಅವರು ತಲೆಯ ಮೇಲೆ ಚಮ್ಮಾವುಗೆ ಇಟ್ಟುಕೊಂಡು ರಾಸಣಗಿವರೆಗೆ 4 ಕಿ.ಮೀ. ಗ್ರಾಮಸ್ಥರು ಮತ್ತು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಕಲ ವಾದ್ಯಗಳೊಂದಿಗೆ ನಡೆದುಕೊಂಡು ಬಂದರು.
ವಿಶೇಷವಾಗಿ ಡೊಳ್ಳು ಹಲಿಗೆ ಮತ್ತು ಬಾಜ, ಭಜಂತ್ರಿಗಳೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿದರು. ರಾಸಣಗಿ ಶ್ರೀ ಬಲಭೀಮ ದೇವಸ್ಥಾನ ಟ್ರಸ್ಟ್ ನವರು ಮತ್ತು ರಾಸಣಗಿ ಗ್ರಾಮಸ್ಥರು ಚಮ್ಮಾವೂಗೆಗಳನ್ನು ಪುರಪ್ರವೇಶ ಮಾಡಿಕೊಂಡು ದೇವಸ್ಥಾನಕ್ಕೆ ತಂದರು. ವಿಶೇಷ ವಿಧಿ ವಿಧಾನಗಳ ಮೂಲಕ ಚಮ್ಮಾವುಗೆ ದೇವರಿಗೆ ಅರ್ಪಿಸಲಾಯಿತು. ಬಲಭೀಮಸೇನ ದೇವರಿಗೆ ಪಂಚಾಮೃತ ಅಭಿಷೇಕ ಗಂಧಲೇಪನ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನಡೆಯಿತು.
ಇದನ್ನೂ ಓದಿ: Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ
5 ವರ್ಷಕ್ಕೊಮ್ಮೆ ನಡೆಯುವ ವಿಶೇಷ ಜಾತ್ರೆ
ಈ ಎಲ್ಲಾ ಕಾರ್ಯಕ್ರಮದ ಸೇವೆಯನ್ನು ಶರಣಮ್ಮ ಕಂಟೆಪ್ಪ ಹೇರೂರ ಮು. ಹರವಾಳ ಹಾಗೂ ಸಹೋದರರು ನಡೆಸಿಕೊಟ್ಟರು. 5 ವರ್ಷಕ್ಕೊಮ್ಮೆ ನಡೆಯುವ ಪುರಾತನ ಪದ್ಧತಿಯಂತೆ ನೂತನ ಚಮ್ಮಾವುಗೆಗಳನ್ನು ಭಕ್ತರು ಅರ್ಪಿಸಲಾಗುತ್ತದೆ.
ಇದನ್ನೂ ಓದಿ: ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ


