ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅಧಿಕಾರ ಹಸ್ತಾಂತರ  ಪ್ರಹಸನದಿಂದ ಇಡೀ ಆಡಳಿತವೇ ಸ್ತಬ್ದಗೊಂಡಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಮಂಗಳೂರು (ಜೂ.03): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅಧಿಕಾರ ಹಸ್ತಾಂತರ ಪ್ರಹಸನದಿಂದ ಇಡೀ ಆಡಳಿತವೇ ಸ್ತಬ್ದಗೊಂಡಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ಅಂಗವಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಸಂಘನಿಕೇತನದಲ್ಲಿ ಎರಡು ದಿನಗಳ ದ.ಕ. ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೆಂದಿಗೂ ಇಂತಹ ಸರ್ಕಾರ ಬೇಡ ಎಂದು ಕಾಂಗ್ರೆಸ್‌ ಸರ್ಕಾರದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ನಿಂತು ಹೋಗಿರುವ ಆಡಳಿತದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡುವುದು ಬಿಜೆಪಿ ಕಾರ್ಯಕರ್ತರ ಕರ್ತವ್ಯ. ಹಿಂದುಳಿದ ವರ್ಗ, ದಲಿತರ ಬಗ್ಗೆ ಕಾಂಗ್ರೆಸ್‌ ಸದಾ ಮಾತನಾಡುತ್ತಿದೆ. ಆದರೆ, ರಾಜ್ಯದಲ್ಲಿ 1.5 ಲಕ್ಷ ದಲಿತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಸ್ಟೆಲ್‌ ಇಲ್ಲದೆ ಪರದಾಡುತ್ತಿದ್ದಾರೆ ಎಂದರು.

ಕೆಲವರು ಶಾಲೆ ಬಿಟ್ಟು ಹೋಗಿದ್ದಾರೆ. ಪರಿಶಿಷ್ಟಜಾತಿ, ಪಂಗಡದ ಬಗ್ಗೆ ಮಾತನಾಡುವ ಸಿದ್ದರಾಮಯ್ಯರ ಸರ್ಕಾರ ಎಸ್‌ಸಿ, ಎಸ್‌ಟಿಗಳ ಆರೋಗ್ಯ, ಶಿಕ್ಷಣಕ್ಕಾಗಿ ಮೀಸಲಿಟ್ಟ 60 ಸಾವಿರ ಕೋಟಿ ರು. ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದೆ. ಕರಾವಳಿಯ ಕಡಲತಡಿಯ ಮೀನುಗಾರಿಕೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರ 22 ಸಾವಿರ ಕೋಟಿ ರು. ಬಿಡುಗಡೆ ಮಾಡಿತ್ತು. ಆದರೆ, ಈ ಯೋಜನೆಗಳು ರಾಜ್ಯ ಸರ್ಕಾರಕ್ಕೆ ಹಣ ಮಾಡುವ ದಂಧೆಯಾಗಿದೆ. ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರ ತನ್ನ ಹಣವೆಂದು ಬಿಂಬಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ವಿಚಾರಗಳ ಬಗ್ಗೆ ಜನಪರ ಹೋರಾಟಗಳ ಮೂಲಕ ಬಿಜೆಪಿ ಕಾರ್ಯಕರ್ತರು ಜನತೆಗೆ ಸತ್ಯ ತಿಳಿಸಬೇಕು ಎಂದರು.

ದೇಶದಲ್ಲಿನ 23 ಸಾವಿರ ನೋಂದಾಯಿತ ರಾಜಕೀಯ ಪಕ್ಷಗಳ ಪೈಕಿ ದೇಶ ಮೊದಲು ಎಂಬ ನೆಲೆಯಲ್ಲಿ ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗ ನಡೆಸುವುದು ಬಿಜೆಪಿ ಮಾತ್ರ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಪ್ರತಿ ಮಂಡಲ, ಜಿಲ್ಲೆಯಲ್ಲಿ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದೆ ಎಂದರು.

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮಾತನಾಡಿ, 2014ರ ಬಳಿಕ ಭಾರತ ಬದಲಾಗಿದೆ. ಜನರ ಸಮಸ್ಯೆಗಳಿಗೆ ಉತ್ತರವಾಗಿ ಬಿಜೆಪಿ ದೇಶದಲ್ಲಿದೆ. ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬಂತಿದ್ದ ಪಶ್ಚಿಮ ಬಂಗಾಳದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಮೇಲಿನ ಜನರ ಆಕ್ರೋಶಕ್ಕೆ ವೇದಿಕೆಯಾಗಿ ಬಿಜೆಪಿ ಕಾರ್ಯನಿರ್ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕೆ ಪೂರಕವಾಗಿ ವಿಕಸಿತ ಕರ್ನಾಟಕ ನಿರ್ಮಾಣಕ್ಕೆ 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೊಳ್ಳಬೇಕು ಎಂದರು.

ಹೆದರುವ ಕಾಲ ಇದಲ್ಲ

ಕಾಕ್ರೋಚ್ ಪಾರ್ಟಿ ಹೆಸರಿನಲ್ಲಿ ಪ್ರಸ್ತುತ ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಜಿರಳೆಗಳಿಗೆ ಹೆದರುವ ಕಾಲ ಇದಲ್ಲ. ದೇಶದ ಚಿನ್ನವನ್ನು ವಿದೇಶಕ್ಕೆ ಅಡವಿಟ್ಟ ಕಾಲವೊಂದಿತ್ತು. ಇಂದು ಭಾರತ 60 ರಾಷ್ಟ್ರಗಳಿಗೆ ಸಾಲ ನೀಡುತ್ತಿದೆ. ಜಿರಳೆ, ಹೆಗ್ಗಣ, ಸೊಳ್ಳೆಗಳಿಗೆ ಹೆದರುವ ಕಾಲ ಇದಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.