Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
ಉತ್ತರಕನ್ನಡದ ಭಟ್ಕಳದಲ್ಲಿ ಪ್ರಸಿದ್ಧ ಶೇಡಬರಿ ಜಟಕ ಮಹಾಸತಿ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಮಕ್ಕಳಾಗದವರು ಸೇರಿದಂತೆ ಹರಕೆ ಹೊತ್ತ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಯಾದ ಬಳಿಕ ಇಲ್ಲಿನ 'ಶೇಡಬರಿ ಮರ' ಏರಿ ಹರಕೆ ಒಪ್ಪಿಸುವುದು ಈ ಜಾತ್ರೆಯ ಪ್ರಮುಖ ವಿಶೇಷತೆಯಾಗಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಹೆಬಳೆ ಗ್ರಾಮ ಪಂಚಯತಿ ವ್ಯಾಪ್ತಿಯ ಸುಪ್ರಸಿದ್ಧ ಶೇಡಬರಿ ಜಟಕ ಮಹಾಸತಿ ದೇವಿ ಜಾತ್ರೆಗೆ ದೇವಸ್ಥಾನದ ಸುತ್ತಮುತ್ತಲಿನ ಗಡಿ ದೇವರಿಗೆ ಪೂಜೆ ಸಲ್ಲಿಸಿ ಇಂದು ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
‘ಶೇಡಿ’ ಎಂದರೆ ಮಣ್ಣಿನಿಂದ ಕೂಡಿರುವುದು, ‘ಬರಿ’ ಎಂದರೆ ಇಳಿಜಾರು ಪ್ರದೇಶ. ಈ ಭೌಗೋಳಿಕ ಹಿನ್ನೆಲೆಯಲ್ಲೇ ಪ್ರತಿಷ್ಠಾಪಿತ ದೇವಿಯನ್ನು ಶೇಡಬರಿ ಮಹಾಸತಿ ದೇವಿ ಎಂದು ಕರೆಯಲಾಗುತ್ತದೆ. ಜಾತ್ರೆಯ ಆರಂಭದ ಅಂಗವಾಗಿ ಸಾವಿರಾರು ಭಕ್ತಾಧಿಗಳು ಜಟಕ ಮಹಾಸತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಕ್ಕಳಾಗದವರು ಹಾಗೂ ಸಂಕಷ್ಟ ನಿವಾರಣೆಗೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ನಂತರ ಶೇಡಬರಿ ಮರ ಏರಿ ಒಂದು ಸುತ್ತು ತಿರುಗಿಸಿ ಹರಕೆಯನ್ನು ಒಪ್ಪಿಸುವುದು ಇಲ್ಲಿನ ವಿಶಿಷ್ಟ ಆಚರಣೆ. ಈ ಹಿನ್ನೆಲೆ ಇಡೀ ದಿನ ಭಕ್ತರು ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ಸಮರ್ಪಿಸಿದರು. ಸುಮಾರು 100 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಈ ದೇವಸ್ಥಾನದ ಜಾತ್ರೆಗೆ ಅನೇಕ ವೈಶಿಷ್ಟ್ಯಗಳಿವೆ.
ಜಾತ್ರೆಗೆ ಏಳು ದಿನಗಳ ಮುನ್ನವೇ ದೇವಸ್ಥಾನದ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಗಡಿ ದೇವರಿಗೆ ‘ಚರು’ ಹಾಕಿ ಎಲ್ಲ ದೇವರನ್ನು ಸಂತುಷ್ಟಗೊಳಿಸಿ ಜಾತ್ರೆಯನ್ನು ಆರಂಭಿಸುವುದು ಪರಂಪರೆ.
ಭಟ್ಕಳ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರ ಮಹಾಪೂರವೇ ಆಗಮಿಸಿ ಸರತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶುಕ್ರವಾರವೂ ಜಾತ್ರೆ ಮುಂದುವರಿಯಲಿದ್ದು, ಈ ಸಂದರ್ಭ ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

