ಈ ವರ್ಷ ಎಲ್ನಿನೋ ಪರಿಣಾಮದಿಂದಾಗಿ ಮಳೆಯ ಪ್ರಮಾಣ ಶೇ 50 ರಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಮೂರ್ನಾಲ್ಕು ತಿಂಗಳ ಕಾಲ ಸುರಿಯುವ ಮಳೆ ಕೇವಲ ಒಂದೇ ವಾರದಲ್ಲಿ..

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗು (ಜೂ.02): ಈ ವರ್ಷ ಎಲ್ನಿನೋ ಪರಿಣಾಮದಿಂದಾಗಿ ಮಳೆಯ ಪ್ರಮಾಣ ಶೇ 50 ರಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಮೂರ್ನಾಲ್ಕು ತಿಂಗಳ ಕಾಲ ಸುರಿಯುವ ಮಳೆ ಕೇವಲ ಒಂದೇ ವಾರದಲ್ಲಿ ಸುರಿದರೆ ಆಗ ಅನಾಹುತಗಳು ಆಗುವುದು ತಪ್ಪಿದ್ದಲ್ಲ. ಇದೇ ವಿಷಯ ಈಗ ಕೊಡಗು ಜಿಲ್ಲಾಡಳಿತ ಆತಂಕಗೊಳ್ಳುವಂತೆ ಮಾಡಿದ್ದು ಜಿಲ್ಲಾಡಳಿತ ಅಲರ್ಟ್ ಆಗಿದೆ. ಹೌದು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ಕನಿಷ್ಠ ನಾಲ್ಕೈ ತಿಂಗಳು ನಿರಂತರ ಮಳೆ ಇದ್ದೇ ಇರುತ್ತದೆ. ಈ ನಾಲ್ಕು ತಿಂಗಳು ಕೂಡ ಸಾಧಾರಣ ಮಳೆ ಬರುತ್ತಿದ್ದರೆ ಯಾವುದೇ ಸಮಸ್ಯೆ ಸಂಭವಿಸುವುದಿಲ್ಲ.

ಆದರೆ ಅದೇ ಮಳೆ ಒಂದೇ ವಾರದಲ್ಲಿ ಸುರಿದರೆ ಪ್ರವಾಹ, ಭೂಕುಸಿತ ಆಗುವುದು ಖಚಿತ. 2018 ರಿಂದ 2020 ರವರೆಗೆ ಕೊಡಗು ಜಿಲ್ಲೆಯಲ್ಲಿ ಆಗಿದ್ದು ಕೂಡ ಇದೇ. ಅಂದಿನಿಂದ ಇದುವರೆಗೆ ಪ್ರತೀ ವರ್ಷ ಮಳೆಗಾಲ ಬಂತೆಂದರೆ ಕೊಡಗು ಜಿಲ್ಲೆಯಲ್ಲಿ ಆತಂಕದ ವಾತಾವರಣ ಇದ್ದೇ ಇರುತ್ತದೆ. ಹೀಗಾಗಿಯೇ ಕೊಡಗು ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈಗಾಗಲೇ ಯಾವೆಲ್ಲಾ ಪ್ರದೇಶಗಳಿಗೆ ಅಪಾಯವಿದೆ ಎನ್ನುವುದನ್ನು ಗುರುತ್ತಿಸಿದೆ. ಅಲ್ಲದೆ ಒಂದು ವೇಳೆ ತೀವ್ರತರವಾಗಿ ಮಳೆ ಸುರಿದಲ್ಲಿ ಯಾವ ಪ್ರದೇಶಗಳಲ್ಲಿ ಪ್ರವಾಹ ಎದುರಾಗಬಹುದು ಎಂದು ಕೂಡ ಗುರುತ್ತಿಸಲಾಗಿದೆ.

ಇಂತಹ ಪ್ರದೇಶಗಳಿಂದ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಸ್ಥಳಾಂತರ ಮಾಡಲು ನಿರ್ಧರಿಸಿದೆ. ಎಲ್ಲೆಲ್ಲಿ ಭೂಕುಸಿತ ಅಥವಾ ಪ್ರವಾಹವಾಗುವ ಸಾಧ್ಯತೆ ಇದೆಯೋ ಆ ಪ್ರದೇಶಗಳ ಸಮೀಪದಲ್ಲೇ ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಳಿತ ಮುಂದಾಗಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆಯಿಂದ ತಲಾ ಒಂಭತ್ತು ಜನರಿರುವ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಈ ತಂಡಗಳಿಗೆ ಪ್ರವಾಹ ಮತ್ತು ಭೂಕುಸಿತ ಎದುರಾದಲ್ಲಿ ಜನರನ್ನು ರಕ್ಷಣೆ ಮಾಡುವುದು ಹೇಗೆ ಎಂದೆಲ್ಲಾ ತರಬೇತಿಯನ್ನು ನಡೆಸಲಾಗಿದೆ.

ಮಳೆಗಾಲವನ್ನು ಎದುರಿಸಲು ಸಿದ್ಧತೆ

ಹಾರಂಗಿ ಹಿನ್ನೀರಿನಲ್ಲಿ ತರಬೇತಿ ನಡೆಸಲಾಗಿದ್ದು, ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆ ಮಾಡುವುದು ಹೇಗೆ ಎನ್ನುವ ಅಣುಕು ಕಾರ್ಯಾಚರಣೆಯನ್ನು ಕೂಡ ನಡೆಸಲಾಗಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಗೆ ಇನ್ನೇನು ಕೆಲವೇ ದಿನಗಳಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶಿಸಲಿದೆ. ಈ ಬಾರಿಯ ಮಳೆಗಾಲದಲ್ಲಿ ಮಳೆಯ ತೀವ್ರ ಕೊರತೆ ಇದೆ ಎನ್ನುವುದನ್ನು ಹೇಳಲಾಗಿದ್ದರೂ ಕೆಲವು ದಿನಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದಲ್ಲಿ ಊಹಿಸಲು ಅಸಾಧ್ಯವಾದ ಅನಾಹುತಗಳ ಸಂಭವಿಸಲಿವೆ. ಇವೆಲ್ಲವನ್ನು ಮನಗಂಡಿರುವ ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಿದ್ಧತೆ ನಡೆಸಿದೆ.

ತೀವ್ರ ಪ್ರಮಾಣದಲ್ಲಿ ಗಾಳಿ ಮಳೆ ಸುರಿದಲ್ಲಿ ಅಪಾರ ಪ್ರಮಾಣದ ವಿದ್ಯುತ್ ಕಂಬಗಳು ಧರೆಗೆ ಉರುಳಬಹುದು. ಹೀಗಾಗಿ ಜಿಲ್ಲೆ ಕತ್ತಲಿನಲ್ಲಿ ಮುಳುಗಬಾರದು ಎನ್ನುವ ದೃಷ್ಟಿಯಿಂದ ಕೆಇಬಿ ಇಲಾಖೆ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಶೇಕರಣೆ ಮಾಡಿಟ್ಟುಕೊಂಡಿದೆ. ಒಟ್ಟಿನಲ್ಲಿ ಮುಂಗಾರು ಸಮಯದ ನಾಲ್ಕು ತಿಂಗಳು ಸುರಿಯಬೇಕಾದ ಮಳೆ ಹವಾಮಾನ ವೈಪರೀತ್ಯದಿಂದಾಗಿ ಒಂದು ತಿಂಗಳು, ಹದಿನೈದು ದಿನ ಅಥವಾ ನಾಲ್ಕು ದಿನಗಳಲ್ಲಿಯೇ ಸುರಿದು ಬಿಡುವ ಸಾಧ್ಯತೆಯೇ ಹೆಚ್ಚಿದೆ. ಇದು ಅಪಾಯವಾಗಲಿದ್ದು, ಇದರಿಂದಲೇ ಜಿಲ್ಲಾಡಳಿತ ಈ ಬಾರಿ ಮಳೆ ಕೊರತೆ ಎಂಬ ಮಾಹಿತಿ ಇರುವಾಗಲೇ ಸಂಪೂರ್ಣ ಮುನ್ನೆಚ್ಚರಿಕೆ ವಹಿಸಿದೆ.