ಮೈಸೂರಿನ ಹೆಬ್ಬಾಳು ಪ್ರದೇಶದಲ್ಲಿ ಡ್ರಗ್ಸ್ ತಯಾರಿಕಾ ಘಟಕದ ಶಂಕೆಯ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುಜರಾತ್ ಡ್ರಗ್ಸ್ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.  

ಮೈಸೂರು: ಇಲ್ಲಿನ ಹೆಬ್ಬಾಳು ಪ್ರದೇಶದಲ್ಲಿ ಡ್ರಗ್ಸ್ ತಯಾರಿಕಾ ಘಟಕವೊಂದು ಕಾರ್ಯನಿರ್ವಹಿಸುತ್ತಿದೆ ಎಂಬ ಶಂಕೆಯ ಮೇರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಬುಧವಾರ ಭರ್ಜರಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯ ವೇಳೆ ಜಾಗವನ್ನು ಬಾಡಿಗೆಗೆ ಪಡೆದಿದ್ದ ಗಣಪತ್ ಲಾಲ್ ಎಂಬಾತನನ್ನು ಎನ್‌ಸಿಬಿ ಬಂಧಿಸಿದೆ. ಬಂಧಿತ ಆರೋಪಿಯನ್ನು ಜಿಲ್ಲಾ ನ್ಯಾಯಾಲಯದ ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ನ್ಯಾಯಾಲಯ ಅನುಮತಿ ನೀಡಿದೆ. ಇದರಿಂದಾಗಿ ಆರೋಪಿಯನ್ನು ಕರೆದುಕೊಂಡು ಹೋಗಿ ಹೆಚ್ಚಿನ ತನಿಖೆ ನಡೆಸಲು ಎನ್‌ಸಿಬಿಗೆ ಅವಕಾಶ ದೊರೆತಿದೆ.

ಡ್ರಗ್ಸ್ ತಯಾರಕರಿಗೆ ‘ಸ್ವರ್ಗ’ವಾಗುತ್ತಿದೆಯೇ ಮೈಸೂರು?

ಸಾಂಸ್ಕೃತಿಕ ನಗರಿ ಮೈಸೂರು ಇದೀಗ ದಿನೇದಿನೇ ಡ್ರಗ್ಸ್ ತಯಾರಿಕಾ ಜಾಲಗಳ ಗುರಿಯಾಗುತ್ತಿದೆ ಎಂಬ ಆತಂಕಕಾರಿ ಪ್ರಶ್ನೆಗಳು ಉದ್ಭವಿಸಿವೆ. ಇತ್ತೀಚಿನ ವರ್ಷಗಳಲ್ಲಿ ಮೈಸೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ವಿಶೇಷವೆಂದರೆ, ಮೈಸೂರು ಪೊಲೀಸರಿಗೆ ಮುಂಚಿತ ಮಾಹಿತಿ ನೀಡದೇ ದೆಹಲಿ ಮೂಲದ ಎನ್‌ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿರುವುದು. ಗುಜರಾತ್‌ನಲ್ಲಿ ಡ್ರಗ್ಸ್ ಜಾಲ ಪತ್ತೆ ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿಯೊಬ್ಬ ನೀಡಿದ ಮಾಹಿತಿಯ ಆಧಾರದ ಮೇಲೆ ಎನ್‌ಸಿಬಿ ಅಧಿಕಾರಿಗಳು ಮೈಸೂರಿಗೆ ಬಂದು ಶೋಧ ಕಾರ್ಯ ಕೈಗೊಂಡಿದ್ದಾರೆ.

ಫಿನಾಯಿಲ್ ಕೇಮಿಕಲ್ ಘಟಕದಲ್ಲಿ ಶಂಕೆ

 ಹೆಬ್ಬಾಳುನಲ್ಲಿರುವ ಫಿನಾಯಿಲ್ ಕೇಮಿಕಲ್ ತಯಾರಿಕಾ ಘಟಕದಲ್ಲಿ ಮಾದಕ ವಸ್ತುಗಳನ್ನು ತಯಾರಿಸಲಾಗುತ್ತಿದೆ ಎಂಬ ಅನುಮಾನದ ಮೇರೆಗೆ ಶೋಧ ನಡೆಸಲಾಗಿದೆ. ಇಲ್ಲಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಟುಕ್‌ ಟುಕ್‌ ಹೌಸ್‌ ಹೋಲ್ಡ್‌ ಕೆಮಿಕಲ್ಸ್‌ ಪ್ರೊಡಕ್ಷನ್‌ ಸಲ್ಯೂಷನ್‌ ಮ್ಯಾನುಫ್ಯಾಕ್ಟರಿಂಗ್‌ ಕಂಪನಿ ಮೇಲೆ ಈ ದಾಳಿ ನಡೆದಿದೆ. ಎನ್‌ಸಿಬಿ ಅಧಿಕಾರಿಗಳು ಮೊದಲು ಗಣಪತ್ ಲಾಲ್ ಅವರ ನಿವಾಸದಲ್ಲಿ ಶೋಧ ನಡೆಸಿ, ನಂತರ ಫ್ಯಾಕ್ಟರಿಯಲ್ಲೂ ತಪಾಸಣೆ ನಡೆಸಿದ್ದಾರೆ. ಈ ವೇಳೆ ಲೇಬಲ್ ಇಲ್ಲದ ಕೇಮಿಕಲ್ ಖಾಲಿ ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಗುಜರಾತ್‌ನಲ್ಲಿ ಬಂಧಿತನಾದ ಡ್ರಗ್ ಪೆಡ್ಲರ್ ಗಣಪತ್ ಲಾಲ್‌ನ ಸಂಬಂಧಿಯಾಗಿದ್ದು, ಆತನ ಮಾಹಿತಿಯ ಆಧಾರದಲ್ಲೇ ಮೈಸೂರಿನ ಈ ಘಟಕದ ಮೇಲೆ ದಾಳಿ ನಡೆದಿದೆ.

ಕಟ್ಟಡ ಮಾಲೀಕರ ಸ್ಪಷ್ಟನೆ

ಈ ಘಟಕ ಇರುವ ಕಟ್ಟಡವು ಬೋರೇಗೌಡ ಎಂಬುವವರಿಗೆ ಸೇರಿದ್ದು, ಸುಮಾರು ಒಂದು ವರ್ಷದ ಹಿಂದೆ ಬ್ರೋಕರ್ ಮೂಲಕ ಗಣಪತ್ ಲಾಲ್‌ಗೆ ಬಾಡಿಗೆಗೆ ನೀಡಲಾಗಿತ್ತು. ಕಟ್ಟಡದಲ್ಲಿ ಇನ್ನೂ ಸಂಪೂರ್ಣವಾಗಿ ಕೆಲಸ ಆರಂಭವಾಗಿರಲಿಲ್ಲ, ಕೆಲ ಮಷಿನ್ ಯುನಿಟ್‌ಗಳನ್ನು ಮಾತ್ರ ಅಳವಡಿಸಲಾಗಿತ್ತು ಎಂಬ ಮಾಹಿತಿ ಇದೆ ಎಂದು ಕಟ್ಟಡ ಮಾಲೀಕರ ಪರ ವಕೀಲ ಭರತ್ ತಿಳಿಸಿದ್ದಾರೆ. ಸದ್ಯ ಕಟ್ಟಡದಲ್ಲಿ ಡ್ರಗ್ಸ್ ತಯಾರಿಕೆ ನಡೆದಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ: ಪೊಲೀಸ್ ಕಮಿಷನರ್

ಈ ಕುರಿತು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸ್ಪಷ್ಟನೆ ನೀಡಿದ್ದು, “ಇದು ಫಾಲೋ-ಅಪ್ ಪ್ರಕರಣ. ಗುಜರಾತ್‌ನಲ್ಲಿ ಒಬ್ಬ ಆರೋಪಿ ಸಿಕ್ಕಿದ್ದು, ಆತನ ಸಂಬಂಧಿ ಗಣಪತ್ ಲಾಲ್. ಈತ ಇಲ್ಲಿ ಫಿನಾಯಿಲ್ ಫ್ಯಾಕ್ಟರಿ ನಡೆಸುತ್ತಿದ್ದಾನೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಎನ್‌ಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ ಈವರೆಗೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ” ಎಂದು ತಿಳಿಸಿದ್ದಾರೆ. ಮೈಸೂರು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಎನ್‌ಸಿಬಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದ್ದು, ಸತ್ಯಾಂಶಗಳು ಹೊರಬರುವ ನಿರೀಕ್ಷೆಯಿದೆ.