ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ, ಚನ್ನಪಟ್ಟಣ-ರಾಮನಗರ ನಡುವೆ 8 ಎಕರೆ ಜಾಗದಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣವಾಗಲಿದೆ. ಎಕ್ಸ್‌ಪ್ರೆಸ್ ವೇಯಿಂದಾಗಿ ಕುಸಿದಿರುವ ಸ್ಥಳೀಯ ಬೊಂಬೆ ಉದ್ಯಮಕ್ಕೆ ಉತ್ತೇಜನ ನೀಡುವುದು, ಕಲೆಗಾರರಿಗೆ, ಪ್ರವಾಸಿಗರನ್ನು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ.
ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲಿ ಚನ್ನಪಟ್ಟಣ–ರಾಮನಗರ ನಡುವಿನ ಪ್ರದೇಶದಲ್ಲಿ ಟಾಯ್ಸ್ ಪಾರ್ಕ್ (ಬೊಂಬೆಗಳ ಪಾರ್ಕ್) ನಿರ್ಮಾಣಕ್ಕೆ ಜಿಲ್ಲಾಡಳಿತ 8 ಎಕರೆ ಜಮೀನನ್ನು ಮೀಸಲಿಟ್ಟಿದೆ. ಈ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹಸ್ತಾಂತರಿಸಿದ ಬಳಿಕ ಪಾರ್ಕ್ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ನಗರದ ಜಿಪಂ ಆವರಣದಲ್ಲಿ ಡಿಸ್ಕವರಿ ವಿಲೇಜ್ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ರಾಮನಗರ ಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾ ವಿಭಾಗ ಹಾಗೂ ಕೊಳ್ಳೇಗಾಲ ಕಾವೇರಿ ವನ್ಯಜೀವಿ ಉಪ ಸಂರಕ್ಷಣಾ ವಿಭಾಗಕ್ಕೆ ಬೊಲೇರೊ ವಾಹನಗಳನ್ನು ಹಸ್ತಾಂತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಉತ್ತೇಜನ
ಚನ್ನಪಟ್ಟಣ ಎಂದರೆ ಬೊಂಬೆಗಳ ನಾಡು ಎಂಬ ಖ್ಯಾತಿ ಹೊಂದಿದೆ. ಆದರೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣದ ನಂತರ ಚನ್ನಪಟ್ಟಣಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಬೊಂಬೆ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಬೊಂಬೆ ತಯಾರಕರಿಗೆ ಉತ್ತೇಜನ ನೀಡುವುದು, ಸ್ಥಳೀಯ ಕಲಾಕಾರರಿಗೆ ವೇದಿಕೆ ಕಲ್ಪಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಟಾಯ್ಸ್ ಪಾರ್ಕ್ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಟಾಯ್ಸ್ ಪಾರ್ಕ್‌ನಲ್ಲಿ ಬೊಂಬೆಗಳ ಪ್ರದರ್ಶನ ಮಾತ್ರವಲ್ಲದೆ, ಸಿಲ್ಕ್ ಮ್ಯೂಸಿಯಂ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವ ರೆಸ್ಟೋರೆಂಟ್‌ಗಳನ್ನೂ ನಿರ್ಮಿಸುವ ಯೋಜನೆ ಇದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವರು ಸಮ್ಮತಿ ಸೂಚಿಸಿದ್ದಾರೆ. ಭೂಮಿ ಹಸ್ತಾಂತರವಾದ ತಕ್ಷಣವೇ ಕಾಮಗಾರಿ ಆರಂಭವಾಗಲಿದೆ ಎಂದರು.
ಎಕ್ಸ್‌ಪ್ರೆಸ್ ವೇನಲ್ಲಿ ಸ್ಕೈವಾಕ್ ಮತ್ತು ಎಂಟ್ರಿ–ಎಕ್ಸಿಟ್ ಕಾಮಗಾರಿ
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪಾದಚಾರಿಗಳ ಸುರಕ್ಷತೆಗೆ ಅಗತ್ಯವಿರುವ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಜೊತೆಗೆ ಎಂಟ್ರಿ ಮತ್ತು ಎಕ್ಸಿಟ್ ಕಾಮಗಾರಿಗಳು ಮುಂದಿನ 15 ದಿನಗಳೊಳಗೆ ಆರಂಭವಾಗಲಿದ್ದು, ಈ ಯೋಜನೆಗಳಿಗೆ ₹730 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಡಾ. ಮಂಜುನಾಥ್ ಮಾಹಿತಿ ನೀಡಿದರು.
ಮೆಡಿಕಲ್ ಕಾಲೇಜಿಗೆ ಆಸ್ಪತ್ರೆ ಅಗತ್ಯ
ರಾಮನಗರದ ಅರ್ಚಕರಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ಭವನ ಹಾಗೂ ವೈದ್ಯಕೀಯ ಕಾಲೇಜಿನ ಕುರಿತು ಆತಂಕ ವ್ಯಕ್ತಪಡಿಸಿದ ಅವರು, “ಸಾಮಾನ್ಯವಾಗಿ ಮೆಡಿಕಲ್ ಕಾಲೇಜು ಆವರಣದಲ್ಲೇ 450ರಿಂದ 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇರಬೇಕು. ಆದರೆ ಇಲ್ಲಿ ಕಾಲೇಜು ಮತ್ತು ವಿವಿಯ ಕಟ್ಟಡ ಮಾತ್ರ ನಿರ್ಮಾಣವಾಗುತ್ತಿದ್ದು, ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿಲ್ಲ” ಎಂದು ಹೇಳಿದರು.
ಮೆಡಿಕಲ್ ಕಾಲೇಜಿಗೆ ರಾಮನಗರ ಜಿಲ್ಲಾಸ್ಪತ್ರೆಯನ್ನು ಹೊಂದಿಸಿಕೊಂಡು ಕಾರ್ಯನಿರ್ವಹಿಸುವ ಉದ್ದೇಶವಿದ್ದು, ಇದು ವಿದ್ಯಾರ್ಥಿಗಳು ಹಾಗೂ ರೋಗಿಗಳಿಗೆ ಅನಾನುಕೂಲ ಉಂಟುಮಾಡಲಿದೆ. ಅಲ್ಲದೆ, 200–250 ಹಾಸಿಗೆ ಸಾಮರ್ಥ್ಯವಿರುವ ಜಿಲ್ಲಾಸ್ಪತ್ರೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾನ್ಯತೆ ಸಿಗುವ ಸಾಧ್ಯತೆ ಕಡಿಮೆ ಎಂದು ತಿಳಿಸಿದರು.
ಅರ್ಚಕರಹಳ್ಳಿ ಮತ್ತು ರಾಮನಗರ ಜಿಲ್ಲಾಸ್ಪತ್ರೆಯ ನಡುವೆ ಸುಮಾರು 3 ಕಿಲೋಮೀಟರ್ ಅಂತರವಿದ್ದು, ಇದರಿಂದ ಶೈಕ್ಷಣಿಕ ಸಮನ್ವಯ, ತುರ್ತು ಸೇವೆಗಳು, ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಅಡಚಣೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
2008ರ ಮೂಲ ಪ್ರಸ್ತಾವನೆಯಲ್ಲಿ ವೈದ್ಯಕೀಯ ಕಾಲೇಜು, ವಿಶ್ವವಿದ್ಯಾಲಯದ ಜೊತೆಗೆ 1,000 ಹಾಸಿಗೆಗಳ ಮೇಲ್ದರ್ಜೆ ಆಸ್ಪತ್ರೆ, ನರ್ಸಿಂಗ್ ಹಾಗೂ ಫಿಜಿಯೋಥೆರಪಿ ಕಾಲೇಜುಗಳ ನಿರ್ಮಾಣವೂ ಸೇರಿತ್ತು. ಈ ಸಂಪೂರ್ಣ ವೆಚ್ಚವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವೇ ಭರಿಸಬೇಕಾಗಿತ್ತು ಎಂದು ಅವರು ಸ್ಮರಿಸಿದರು.
ವಿಶ್ವವಿದ್ಯಾಲಯಕ್ಕೆ ಉದ್ದೇಶಿಸಿರುವ ಸ್ಥಳದಲ್ಲಿ ಜಮೀನಿಗೆ ಯಾವುದೇ ಕೊರತೆ ಇಲ್ಲ. ಹಾಗಿದ್ದರೂ ಆಸ್ಪತ್ರೆ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿರುವ ಕಾರಣ ಸ್ಪಷ್ಟವಾಗಿಲ್ಲ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ವಿವಿಯ ಕುಲಪತಿ ಡಾ. ಬಿ.ಸಿ. ಭಗವಾನ್ ಅವರಿಗೆ ಪತ್ರ ಬರೆದಿದ್ದು, ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಅರಣ್ಯ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ
ಕಾಡು ಪ್ರದೇಶಗಳಲ್ಲಿ ಸಂಚರಿಸಲು ಜೀಪ್‌ಗಳ ಅಗತ್ಯವಿದೆ ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಡಿಸ್ಕವರಿ ವಿಲೇಜ್ ಸಂಸ್ಥೆ CSR ಅಡಿಯಲ್ಲಿ ಜೀಪ್‌ಗಳನ್ನು ಒದಗಿಸುತ್ತಿದೆ. ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟ ಮಾತ್ರವಲ್ಲದೆ ಪ್ರಾಣ ಹಾನಿಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆ ಕುರಿತು ಅರಣ್ಯ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾಡಂಚಿನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಸಂಸದರು ಮಾಹಿತಿ ನೀಡಿದರು.
ಮನರೇಗಾ ಕುರಿತು ಹೇಳಿಕೆ
ಮನರೇಗಾ ಯೋಜನೆಯ ಕುರಿತು ಮಾತನಾಡಿದ ಡಾ. ಮಂಜುನಾಥ್, “1960ರಿಂದಲೂ ಉದ್ಯೋಗ ಭರವಸೆ, ರೋಜ್ಗಾರ್ ಸೇರಿದಂತೆ ವಿಭಿನ್ನ ಹೆಸರುಗಳಿಂದ ಈ ಯೋಜನೆ ಮುಂದುವರಿದಿದೆ. ಆರಂಭದಲ್ಲಿ ಕೇಂದ್ರ ಸರ್ಕಾರ ಶೇ.90 ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ವೆಚ್ಚ ಭರಿಸುತ್ತಿದ್ದರೆ, ಈಗ ಶೇ.60–40 ಅನುಪಾತ ಜಾರಿಗೆ ಬಂದಿದೆ. ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಇರಬೇಕು ಎಂಬುದು ಇದರ ಉದ್ದೇಶ. ಮಾನವ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚಿಸಿದರೆ ಪರಿಹಾರ ಸಿಗಲಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಪಿಚ್ಚನಗೆರೆ ಜಗದೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಹೋಟೆಲ್ ಉಮೇಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.


