ಬೆಂಗಳೂರಿನ ಹೆಣ್ಣೂರಿನಲ್ಲಿ 27 ವರ್ಷದ ಸುಪ್ರಿತಾ ಸಾವು ಅನುಮಾನಾಸ್ಪದವಾಗಿದೆ. ಆತ್ಮ*ಹತ್ಯೆ ಎಂದು ಹೇಳಲಾಗುತ್ತಿದ್ದರೂ, ಇದು ವರದಕ್ಷಿಣೆಗಾಗಿ ನಡೆದ ವ್ಯವಸ್ಥಿತ ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ. ಪತಿ ಕಿರಣ್ ಕುಮಾರ್ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಮಾ.09): ಸಿಲಿಕಾನ್ ಸಿಟಿಯ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 27 ವರ್ಷದ ಸುಪ್ರಿತಾ ಸಾವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಇದನ್ನು ಆತ್ಮ*ಹತ್ಯೆ ಎಂದು ಕಂಡುಬಂದಿದ್ದರೂ, ಮೃತ ಸುಪ್ರಿತಾ ಅವರ ಪೋಷಕರು ಇದು ವ್ಯವಸ್ಥಿತ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಬೆನ್ನಲ್ಲೇ ಪತಿ ಕಿರಣ್ ಕುಮಾರ್ ತಲೆಮರೆಸಿಕೊಂಡಿರುವುದು ಅನುಮಾನಗಳನ್ನು ದಟ್ಟವಾಗಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಹಿನ್ನೆಲೆ:

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದವರಾದ ಸುಪ್ರಿತಾ, ಕಳೆದ 5 ವರ್ಷಗಳ ಹಿಂದೆ ಬೆಂಗಳೂರಿನ ಕಿರಣ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು. ಕಿರಣ್ ಖಾಸಗಿ ಸಂಸ್ಥೆಯೊಂದರಲ್ಲಿ ಸೇಲ್ಸ್ ಟೀಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ದಾಂಪತ್ಯ ಜೀವನದ ಆರಂಭದಲ್ಲಿ ಎಲ್ಲವೂ ಸುಗಮವಾಗಿದ್ದರೂ, ಕಳೆದ ಕೆಲವು ಸಮಯದಿಂದ ಸುಪ್ರಿತಾಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಪೋಷಕರ ಗಂಭೀರ ಆರೋಪ:

ಸುಪ್ರಿತಾ ಅವರ ಪೋಷಕರು ಮತ್ತು ಸಂಬಂಧಿಕರು ಇಂದು ಹೆಣ್ಣೂರಿನ ನಿವಾಸದ ಮುಂದೆ ಜಮಾಯಿಸಿ ಆಕ್ರಂದನ ನಡೆಸುತ್ತಿದ್ದಾರೆ. 'ನಮ್ಮ ಮಗಳನ್ನು ನೇಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಯತ್ನಿಸಿದ್ದಾರೆ. ಆದರೆ ನಾವು ಸ್ಥಳಕ್ಕೆ ಬಂದಾಗ ಸುಪ್ರಿತಾ ಶವ ಹಾಸಿಗೆಯ ಮೇಲಿತ್ತು. ಅವಳಿಗೆ ವಿಷ ಉಣಿಸಿರಬಹುದು ಅಥವಾ ಯಾವುದೋ ಭಾರವಾದ ವಸ್ತುವಿನಿಂದ ಹೊಡೆದು ಸಾಯಿಸಿರಬಹುದು' ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ.

ವರದಕ್ಷಿಣೆ ಕಿರುಕುಳ:

ಹೊಸ ಗಾಡಿ ಖರೀದಿಸಲು ನಮ್ಮಿಂದ ಹಣ ತರುವಂತೆ ಕಿರಣ್ ನಿರಂತರವಾಗಿ ಪೀಡಿಸುತ್ತಿದ್ದ. ಸುಪ್ರಿತಾ ಸ್ವಲ್ಪ ದಿನ ನಮ್ಮ ಮನೆಗೆ ಬಂದು ಉಳಿದುಕೊಂಡಿದ್ದರೂ, ಅಲ್ಲಿಗೂ ಬಂದು ಅವಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ. ವರದಕ್ಷಿಣೆ ಆಸೆಗಾಗಿ ನಮ್ಮ ಮಗಳನ್ನು ಅವರೇ ಕೊಲೆ ಮಾಡಿ ಈಗ ನಾಟಕವಾಡುತ್ತಿದ್ದಾರೆ ಎಂದು ಮೃತಳ ತಂದೆ-ತಾಯಿ ಆರೋಪಿಸಿದ್ದಾರೆ.

ತಲೆಮರೆಸಿಕೊಂಡ ಪತಿ ಕಿರಣ್:

ಇಂದು ಬೆಳಿಗ್ಗೆಯಿಂದಲೇ ಪತಿ ಕಿರಣ್ ಕುಮಾರ್ ಯಾರಿಗೂ ಸಿಗದೆ ನಾಪತ್ತೆಯಾಗಿದ್ದಾರೆ. ಪತ್ನಿ ಸಾವನ್ನಪ್ಪಿದ ಸಮಯದಲ್ಲಿ ಆತ ಮನೆಯಲ್ಲೇ ಇರಬೇಕಿತ್ತು, ಆದರೆ ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿರುವುದು ಆತನ ಮೇಲಿನ ಶಂಕೆಯನ್ನು ಹೆಚ್ಚಿಸಿದೆ. ಸದ್ಯ ಸುಪ್ರಿತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿ.ಆರ್. ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸ್ ತನಿಖೆ:

ಹೆಣ್ಣೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. 'ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಎಂಬ ಪೋಷಕರ ಆರೋಪದ ಹಿನ್ನೆಲೆಯಲ್ಲಿ ನಾವು ಪ್ರಕರಣವನ್ನು ದಾಖಲಿಸಿಕೊಳ್ಳುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ತಲೆಮರೆಸಿಕೊಂಡಿರುವ ಪತಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಐದು ವರ್ಷಗಳ ಸುಂದರ ಸಂಸಾರ ಈಗ ವಿಕೋಪಕ್ಕೆ ಹೋಗಿ ಯುವತಿಯೊಬ್ಬಳು ಬಲಿಯಾಗಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.