ಉತ್ತರ ಕನ್ನಡ ಜಿಲ್ಲೆಗೆ ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಿದ್ದು, ಸಚಿವ ಮಂಕಾಳು ವೈದ್ಯರ ಪುತ್ರಿ ಇದನ್ನು ತಮ್ಮ ತಂದೆಯ ಸಾಧನೆ ಎಂದಿದ್ದಾರೆ. ಆದರೆ, ಆಸ್ಪತ್ರೆಯ ಸ್ಥಳದ ಬಗ್ಗೆ ಜಿಲ್ಲೆಯ ದಕ್ಷಿಣ ಭಾಗದ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾರವಾರ/ಭಟ್ಕಳ (ಮಾ.9): ಉತ್ತರ ಕನ್ನಡ ಜಿಲ್ಲೆಗೆ ಕೊನೆಗೂ ರಾಜ್ಯ ಬಜೆಟ್‌ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳು ವೈದ್ಯ ಅವರ ಪುತ್ರಿ ಬೀನಾ ವೈದ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಒಂದು ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಾಧನೆಯನ್ನು ತಮ್ಮ ತಂದೆಯ "ಶಪಥದ ಫಲ" ಎಂದು ಬೀನಾ ಬಣ್ಣಿಸಿದ್ದರೆ, ಜಿಲ್ಲೆಯ ಜನರು ಮಾತ್ರ ಆಸ್ಪತ್ರೆಯ ಸ್ಥಳದ ಆಯ್ಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಂದೆಯ ಶಪಥದ ಕಥೆ ಹಂಚಿಕೊಂಡ ಪುತ್ರಿ

ಶಿರೂರು ಟೋಲ್ ಬಳಿ ನಡೆದ ಭೀಕರ ಅಪಘಾತದ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಜನರು ಮೃತಪಟ್ಟಿದ್ದನ್ನು ಕಂಡು ಮನನೊಂದ ಮಂಕಾಳು ವೈದ್ಯ ಅವರು, "ನಾನು ಗೆದ್ದರೆ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುತ್ತೇನೆ, ಇಲ್ಲದಿದ್ದರೆ ಸ್ವಂತ ಖರ್ಚಿನಲ್ಲಿ ಕಟ್ಟಿಸುತ್ತೇನೆ" ಎಂದು ಶಪಥ ಮಾಡಿದ್ದರು. ಅವರ ಆ ದೃಢ ನಿರ್ಧಾರ ಮತ್ತು ಪರಿಶ್ರಮದಿಂದಲೇ ಇಂದು ಜಿಲ್ಲೆಗೆ ಆಸ್ಪತ್ರೆ ಮಂಜೂರಾಗಿದೆ ಎಂದು ಬೀನಾ ವೈದ್ಯ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

ಬೀನಾ ವೈದ್ಯ ಅವರ ಪೋಸ್ಟ್‌

ಕೆಲವು ವರ್ಷಗಳ ಹಿಂದೆ ನಮ್ಮ ಶಿರೂರು ಟೋಲ್ ಬಳಿ ಒಂದು ಭೀಕರ ಅಪಘಾತವಾಗಿತ್ತು.ಅದರಲ್ಲಿ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗದೆ ಕೆಲವರು ಸಾವನ್ನಪ್ಪಿದರು . ಆಗ ನನ್ನ ತಂದೆಯವರು ಮಾನವೀಯತೆ ದೃಷ್ಟಿಯಿಂದ ಆ ಅಸುನೀಗಿದ ಕುಟುಂಬದ ಮನೆಗೆ ಭೇಟಿ ನೀಡಿ ತಮ್ಮ ಕೈಲಾದಷ್ಟು ಸಹಾಯ ಮಾಡಲು ಹೋದಾಗ, ಆ ಮನೆಯವರು ಕೇಳಿದ್ದು ನಮ್ಮ ಜಿಲ್ಲೆಗೆ ಬಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನೀಡಿ ಎಂದು.

ಆಗಲೇ ಮನಸ್ಸಿನಲ್ಲಿ ದುಃಖವನ್ನು ತುಂಬಿಟ್ಟುಕೊಂಡು ಬಂದು ನನ್ನ ಹಾಗೂ ನನ್ನ ತಾಯಿಯ ಮುಂದೆ ಒಂದು ಶಪಥ ಮಾಡುತ್ತಾರೆ ಈ ಬಾರಿ ನಾನು ಚುನಾವಣೆ ಗೆದ್ದ ಬಳಿಕ ನಾನು ಸರ್ಕಾರದಿಂದ ಆಸ್ಪತ್ರೆಯನ್ನ ಕಟ್ಟಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಇಲ್ಲದಿದ್ದರೆ ನನ್ನ ಸ್ವಂತ ಖರ್ಚಿನಲ್ಲಿ ಆಸ್ಪತ್ರೆಯನ್ನು ಕಟ್ಟೆ ಕಟ್ಟುತ್ತೇನೆ ಎಂದು ನಮ್ಮ ಮುಂದೆ ನನ್ನ ತಂದೆ ಹೇಳಿದ ಮಾತು ನನ್ನ ಕಣ್ಣಿಗೆ ಕಟ್ಟಂತಿದೆ.

ಆ ಮಾತಿನಂತೆ ಗೆದ್ದ ಎರಡು ವರ್ಷದ ಒಳಗೆ ಅವರ ಪರಿಶ್ರಮ ಎಷ್ಟಿತ್ತು ಎನ್ನುವುದು ನಮಗಷ್ಟೇ ಗೊತ್ತು. ಕೆಲವರ ಟೀಕೆಗಳು ಹತಾಶ ಭಾವನೆಗಳು ಇವೆಲ್ಲದರ ನಡುವೆ ನನ್ನ ತಂದೆ ಸ್ವಂತ ದುಡ್ಡಿನಲ್ಲಿ ಆಸ್ಪತ್ರೆ ಕಟ್ಟಿಲು ಶುರು ಮಾಡಿದರು ದೇವರ ಆಶೀರ್ವಾದದಂತೆ ಸರ್ಕಾರದಿಂದಲೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿಸಲು ಸಹ ಯಶಸ್ವಿಯಾದರು. ಅವರ ದೃಢ ನಿರ್ಧಾರ ಅವರ ಪರಿಶ್ರಮ ಇದೆಲ್ಲವೂ ನನಗೆ ಸ್ಪೂರ್ತಿದಾಯಕ. ಇಂದು ಅವರ ಕನಸಿನ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಗೆ ಅವರ ಉಸ್ತುವಾರಿಯಲ್ಲಿ ಸಿಕ್ಕಿದ್ದು ನೋಡಿ ಮಗಳಾಗಿ ನನಗೆ ಅತ್ಯಂತ ಸಂತೋಷಕರ ವಿಷಯ. ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅವರು ಕಂಡಂತಹ ಇನ್ನಷ್ಟು ಕನಸುಗಳು ಆದಷ್ಟು ಬೇಗ ನನಸಾಗಲಿ ಎಂದು ಮಹಾ ಮುರುಡೇಶ್ವರನಲ್ಲಿ ಪ್ರಾರ್ಥಿಸುತ್ತೇನೆ.

View post on Instagram

ಕಾಮೆಂಟ್‌ ಬಾಕ್ಸ್‌ನಲ್ಲಿ ಆಕ್ರೋಶದ ಅಲೆ: ಜನರ ಅಸಮಾಧಾನವೇಕೆ?

ಬೀನಾ ವೈದ್ಯ ಅವರ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಬಂದಿದ್ದು, ಬಹುತೇಕ ಜನರು ಆಸ್ಪತ್ರೆಯ ಸ್ಥಳದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಜಿಲ್ಲೆಯ ಮಧ್ಯಭಾಗದಲ್ಲಿರುವ ಕುಮಟಾ ಅಥವಾ ಹೊನ್ನಾವರದಲ್ಲಿ ಆಸ್ಪತ್ರೆಯಾದರೆ ಇಡೀ ಜಿಲ್ಲೆಯ ಜನರಿಗೆ ಸಮಾನವಾಗಿ ಹತ್ತಿರವಾಗುತ್ತಿತ್ತು. ಆದರೆ ಕಾರವಾರದಲ್ಲಿ ಆಸ್ಪತ್ರೆ ಮಾಡುವುದರಿಂದ ಕೇವಲ ಕಾರವಾರ ಮತ್ತು ಗೋವಾ ಜನರಿಗೆ ಮಾತ್ರ ಲಾಭವಾಗುತ್ತದೆ ಎಂಬುದು ಜನರ ಅಭಿಪ್ರಾಯ.

ಭಟ್ಕಳದವರಿಗೆ ಏನು ಪ್ರಯೋಜನ?: "ಕಾರವಾರದಲ್ಲಿ ಆಸ್ಪತ್ರೆಯಾದರೆ ಭಟ್ಕಳದಲ್ಲಿ ಅಪಘಾತವಾದವರು ಕಾರವಾರಕ್ಕೆ ಹೋಗುವಷ್ಟರಲ್ಲಿ ಜೀವವೇ ಹೋಗಿರುತ್ತದೆ. ನಮಗೆ ಕಾರವಾರಕ್ಕೆ ಹೋಗುವ ಬದಲು ಕುಂದಾಪುರ, ಉಡುಪಿ ಅಥವಾ ಮಂಗಳೂರಿಗೆ ಹೋಗುವುದೇ ಸುಲಭ ಮತ್ತು ಹತ್ತಿರ," ಎಂದು ಜನರು ಕಟುವಾಗಿ ಟೀಕಿಸಿದ್ದಾರೆ.

ರಾಜಕೀಯ ಲಾಭದ ಆರೋಪ: "ಇದು ಬಜೆಟ್‌ನಲ್ಲಿ ಘೋಷಣೆಯಾದ ಸರ್ಕಾರಿ ಆಸ್ಪತ್ರೆ. ಇದನ್ನು ನಿಮ್ಮ ತಂದೆಯ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ಕಾರವಾರ ಶಾಸಕ ಸತೀಶ್ ಸೈಲ್ ಅವರ ಪ್ರಯತ್ನವೂ ಇದರಲ್ಲಿದೆ," ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಪರಿಣಾಮಕಾರಿ ಬಳಕೆ ಬಗ್ಗೆ ಸಂಶಯ: ಈಗಾಗಲೇ ಕಾರವಾರದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (KIMS) ಸುಧಾರಿಸದ ಸರ್ಕಾರ, ಹೆಸರಿಗಷ್ಟೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿದರೆ ಏನು ಲಾಭ? ಎಂಬುದು ಜಿಲ್ಲೆಯ ಜನರ ಪ್ರಶ್ನೆ.

ತಾರತಮ್ಯದ ಆರೋಪ

"ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ" ಎಂಬಂತೆ ಜಿಲ್ಲೆಯ ದಕ್ಷಿಣ ಭಾಗದ ತಾಲೂಕುಗಳನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ವ್ಯಾಪಕವಾಗಿದೆ. ಭಟ್ಕಳ, ಹೊನ್ನಾವರ ಮತ್ತು ಕುಮಟಾ ಭಾಗದ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಈಗಲೂ ಮಂಗಳೂರು ಅಥವಾ ಮಣಿಪಾಲವೇ ಅಂತಿಮ ಆಶ್ರಯತಾಣವಾಗಿದೆ. ಒಟ್ಟಾರೆಯಾಗಿ, ಆಸ್ಪತ್ರೆ ಮಂಜೂರಾಗಿರುವ ಸಂಭ್ರಮದ ನಡುವೆಯೇ, ಅದು ಜಿಲ್ಲೆಯ ಎಲ್ಲಾ ಜನರಿಗೆ ತಲುಪುವಂತಾಗಲು ಭೌಗೋಳಿಕವಾಗಿ ಮಧ್ಯಭಾಗದಲ್ಲಿ ಇರಬೇಕಿತ್ತು ಎಂಬ ಕೂಗು ಉತ್ತರ ಕನ್ನಡದಲ್ಲಿ ಜೋರಾಗಿದೆ.