ಅಪ್ರಾಪ್ತ ಬಾಲಕಿಯೊಂದಿಗಿನ ಅನುಚಿತ ವರ್ತನೆ ಹಾಗೂ ಪೋಕ್ಸೋ ಪ್ರಕರಣದ ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಸಾಕ್ಷ್ಯನಾಶ ಮಾಡುವ ಸಾಧ್ಯತೆಯಿದೆ ಎಂಬ ಸರ್ಕಾರಿ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಯಾದಗಿರಿ (ಮಾ.09): ಕಲ್ಯಾಣ ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಹಾಗೂ ಪೋಕ್ಸೋ (POCSO) ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯದಿಂದ ಭಾರಿ ಹಿನ್ನಡೆಯಾಗಿದೆ. ಜಾಮೀನು ಸಿಗುವ ಭರವಸೆಯಲ್ಲಿದ್ದ ಮುತ್ಯಾ ಮತ್ತು ಆತನ ಭಕ್ತರಿಗೆ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ನಿರಾಕರಿಸುವ ಮೂಲಕ ಶಾಕ್ ನೀಡಿದೆ.
ಜಾಮೀನು ಅರ್ಜಿ ತಿರಸ್ಕಾರ:
ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ, ಪರಾರಿ ಆಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಮುತ್ಯಾಗೆ ಶಾಕ್ ಆಗಿದೆ.
ಸರ್ಕಾರಿ ವಕೀಲರ ಪ್ರಬಲ ವಾದ:
ವಿಚಾರಣೆ ವೇಳೆ ಸರ್ಕಾರಿ ವಕೀಲರು ಮುತ್ಯಾನಿಗೆ ಜಾಮೀನು ನೀಡದಂತೆ ಅತ್ಯಂತ ಪ್ರಬಲವಾದ ವಾದ ಮಂಡಿಸಿದರು. 'ಅಪ್ರಾಪ್ತ ಬಾಲಕಿಯೊಂದಿಗೆ ನಡೆಸಿರುವ ಅನುಚಿತ ವರ್ತನೆಯು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರೋಪಿಯು ಪ್ರಭಾವಿಯಾಗಿದ್ದು, ಸಾಕ್ಷ್ಯನಾಶ ಮಾಡುವ ಅಥವಾ ಸಂತ್ರಸ್ತೆಯ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ' ಎಂದು ಸರ್ಕಾರಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದರು.
ಏನಿದು ಪ್ರಕರಣ?:
ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ರಾಜ್ಯಾದ್ಯಂತ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಈ ಮುತ್ಯಾನಿಂದ ಹಲವು ಬಾಲಕಿಯರ ಮೇಲೆ ದೈಹಿಕ ಕಿರುಕುಳ ನಡೆಯುವ ಸಾಧ್ಯತೆಯಿದ್ದು, ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು. ರಾಜ್ಯ ಮಹಿಳಾ ಆಯೋಗವು ಕೂಡ ಬಾಲಕಿಗೆ ಕಿರುಕುಳ ನೀಡಿದ ಮುತ್ಯಾನ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿತ್ತು. ಇದರ ಬೆನ್ನಲ್ಲಿಯೇ ಜಿಲ್ಲಾ ಪೊಲೀಸರು ಮುತ್ಯಾನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಭಕ್ತವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯ ಮೇಲೆ ಇಂತಹ ಗಂಭೀರ ಆರೋಪ ಬಂದಿರುವುದು ಜಿಲ್ಲಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.
ಸದ್ಯ ಜಾಮೀನು ಅರ್ಜಿ ವಜಾಗೊಂಡಿರುವುದು ಮುತ್ಯಾನ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ.


