ಮೈಸೂರು ದಸರಾ 2026ರ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ನೈಋತ್ಯ ರೈಲ್ವೆ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭದ್ರತೆಗಾಗಿ ಸಿಸಿಟಿವಿ, ಹೆಚ್ಚುವರಿ ಸಿಬ್ಬಂದಿ, ಸಹಾಯ ಕೇಂದ್ರಗಳು, ಸುಲಭ ಟಿಕೆಟ್ ವಿತರಣೆಗೆ ವಿಶೇಷ ವ್ಯವಸ್ಥೆ.. ಸುಗಮ ಸಂಚಾರಕ್ಕಾಗಿ ಅಕ್ಟೋಬರ್ 21ರಂದು ಪಾರ್ಸೆಲ್ ಲೋಡಿಂಗ್ ಸ್ಥಗಿತ

ಮೈಸೂರು ದಸರಾ 2026: ದಸರಾ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಹಾಗೂ ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಸಮಗ್ರ ವ್ಯವಸ್ಥೆ ಕೈಗೊಂಡಿದೆ.

ದಸರಾ ಹಬ್ಬದ ಮೊದಲ 5 ದಿನದಲ್ಲಿ ರೈಲ್ವೆ ಪ್ರಯಾಣಿಕರ ಸಂಖ್ಯೆ

ದಸರಾ ಮೊದಲ ಐದು ದಿನಗಳಲ್ಲಿ ಮೈಸೂರು ವಿಭಾಗದಲ್ಲಿ ಒಟ್ಟು 3.10 ಲಕ್ಷ ಪ್ರಯಾಣಿಕರ ಸಂಚಾರ ದಾಖಲಾಗಿದ್ದು, ಟಿಕೆಟ್ ಮಾರಾಟದಿಂದ 3.11 ಕೋಟಿ ರೂ. ಆದಾಯ ಗಳಿಸಲಾಗಿದೆ.

ಟಿಕೆಟ್ ಮಾರಾಟದಿಂದ ಗಳಿಸಿದ ಆದಾಯ ಎಷ್ಟು?

ಕಳೆದ ವರ್ಷದ ದಸರಾ ಆಚರಣೆಯ ಸಂದರ್ಭದಲ್ಲಿ ಮೈಸೂರು ವಿಭಾಗದಲ್ಲಿ ಒಟ್ಟು 6.95 ಲಕ್ಷ ಪ್ರಯಾಣಿಕರ ಸಂಚಾರ ದಾಖಲಾಗಿತ್ತು. ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 69,523 ಪ್ರಯಾಣಿಕರು ಸಂಚರಿಸಿದ್ದು, ಟಿಕೆಟ್ ಮಾರಾಟದಿಂದ 5.43 ಕೋಟಿ ಆದಾಯ ಗಳಿಸಲಾಗಿತ್ತು.

ಜನದಟ್ಟಣೆ ನಿಯಂತ್ರಿಸಲು 70 ರೈಲ್ವೆ ಸಿಬ್ಬಂದಿ ನಿಯೋಜನೆ

ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 70 ರೈಲ್ವೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರೈಲ್ವೆ ರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸ್ ವಿಭಾಗಗಳ 150 ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಚಲನವಲನದ ಮೇಲ್ವಿಚಾರಣೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಸುಮಾರು 39 ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

ಮೇ ಐ ಹೆಲ್ಪ್ ಯು ಸಹಾಯ ಕೇಂದ್ರ

ಪ್ರಯಾಣಿಕರಿಗೆ ನೆರವು ನೀಡಲು ಮೂರು ಮೇ ಐ ಹೆಲ್ಪ್ ಯು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಎರಡು ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ಪ್ರದೇಶದಲ್ಲಿ ಹಾಗೂ ಒಂದು 6ನೇ ಪ್ಲಾಟ್‌ ಫಾರ್ಮ್‌ ನಲ್ಲಿ ಕಾರ್ಯ ನಿರ್ವಹಿಸಲಿವೆ. ಟಿಕೆಟ್ ಕೌಂಟರ್‌ ಗಳ ನಿರ್ವಹಣೆ ಮತ್ತು ಟಿಕೆಟ್ ತಪಾಸಣೆಗೆ ನೆರವಾಗಲು ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗಗಳಿಂದ ಹೆಚ್ಚುವರಿಯಾಗಿ 15 ಸಿಬ್ಬಂದಿಯನ್ನು ಒದಗಿಸುವಂತೆ ಕೋರಲಾಗಿದೆ.

ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಹಾಗೂ ಜನಸಂದಣಿಯನ್ನು ನಿಯಂತ್ರಿಸಲು ಸ್ಕೌಟ್ಸ್ ಮತ್ತು ಗೈಡ್ಸ್‌ ಗಳ ಸಹಕಾರವನ್ನೂ ಪಡೆಯಲಾಗುತ್ತದೆ.

ಟಿಕೆಟ್ ತಪಾಸಣೆ ಮತ್ತು ಜನಸಂದಣಿ ನಿಯಂತ್ರಣಕ್ಕಾಗಿ ಒಟ್ಟು 27 ಪ್ರಯಾಣ ಟಿಕೆಟ್ ಪರೀಕ್ಷಕರನ್ನು ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಇತರ ಇಲಾಖೆಗಳೊಂದಿಗೆ ಪರಿಣಾಮಕಾರಿ ಸಮನ್ವಯ ಸಾಧಿಸಲು ಸಿಬ್ಬಂದಿಗೆ ವಾಕಿ-ಟಾಕಿಗಳನ್ನು ಒದಗಿಸಲಾಗಿದೆ.

ಎಸ್ಕಲೇಟರ್‌ ಗಳು ಸುಗಮವಾಗಿ ಮತ್ತು ನಿರಂತರವಾಗಿ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ವಿಭಾಗದ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸಹಕಾರದೊಂದಿಗೆ ಮೇಲ್ವಿಚಾರಣೆ ನಡೆಸಲಿದ್ದಾರೆ. ತುರ್ತು ಸಂದರ್ಭಗಳಲ್ಲಿ ತ್ವರಿತ ನೆರವು ಒದಗಿಸಲು ಆಂಬ್ಯುಲೆನ್ಸ್, ಅಗ್ನಿಶಾಮಕ ಮತ್ತು ಪೊಲೀಸ್ ಸೇವೆಗಳು ಸೇರಿದಂತೆ ರಾಜ್ಯ ಸರ್ಕಾರದ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ.

ಟಿಕೆಟ್ ಕೌಂಟರ್‌ ಗಳಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡಿ, ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಬುಕಿಂಗ್ ಪ್ರದೇಶದಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಅಸ್ತಿತ್ವದಲ್ಲಿರುವ ರಿಫ್ರೆಶ್‌ ಮೆಂಟ್ ಕೊಠಡಿಯನ್ನು ಬಳಸಿಕೊಳ್ಳಲಾಗಿದೆ. ಮುಖ್ಯ ಪ್ರವೇಶ ಪ್ರದೇಶದಲ್ಲಿ 8 ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು ಹಾಗೂ ನಾಲ್ಕು ಮೊಬೈಲ್ ಕಾಯ್ದಿರಿಸದ ಟಿಕೆಟಿಂಗ್ ವ್ಯವಸ್ಥೆಗೊಳಿಸಲಾಗಿದೆ.

ರೈಲು ಸೇವೆಗಳು ಮತ್ತು ಪ್ರಯಾಣಿಕರ ಸೌಲಭ್ಯಗಳ ಕುರಿತು ಸ್ಪಷ್ಟ ಮಾಹಿತಿ ಒದಗಿಸಲು ಅಗತ್ಯ ಪ್ರದರ್ಶನ ಫಲಕಗಳು ಮತ್ತು ಬ್ಯಾನರ್‌ ಗಳನ್ನು ಅಳವಡಿಸಲಾಗುತ್ತಿದೆ.

ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ಕಡಿಮೆ ಮಾಡಿ ನಿಲ್ದಾಣದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಅ.21 ರಂದು ಮಧ್ಯಾಹ್ನ 1 ಗಂಟೆಯಿಂದ ಅಂದು ಕೊನೆಯ ರೈಲು ಹೋಗುವವರೆಗೆ ಪಾರ್ಸೆಲ್ ಲೋಡಿಂಗ್ ಚಟುವಟಿಕೆಗಳನ್ನು ಮತ್ತು ಬಗ್ಗಿ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ದಸರಾ ಸಂದರ್ಭದಲ್ಲಿ ಸುರಕ್ಷಿತ, ಆರಾಮದಾಯಕ ಹಾಗೂ ತೊಂದರೆರಹಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ, ನಿಲ್ದಾಣಗಳಲ್ಲಿ ಪ್ರಕಟಿಸಲಾದ ಪ್ರಕಟಣೆಗಳು ಮತ್ತು ಸೂಚನೆಗಳನ್ನು ಪಾಲಿಸುವಂತೆ ಹಾಗೂ ಸುರಕ್ಷತಾ ನಿಯಮಗಳನ್ನು ಅನುಸರಿಸುವಂತೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎಲ್ಲಾ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸೂಕ್ತವಾಗಿ ಯೋಜಿಸಿಕೊಂಡು ರೈಲ್ವೆ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.