ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಮತ್ತು ಸಂವಿಧಾನದ ಮೇಲಿನ ಪ್ರೀತಿ ಕೇವಲ ದಲಿತರ ಮತ ಗಳಿಸಲು ಮಾತ್ರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ದಲಿತರ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ ಸಿದ್ದರಾಮಯ್ಯ ನಿಜವಾದ ದಲಿತ ವಿರೋಧಿ ಎಂದು ಅವರು ವಾಗ್ದಾಳಿ ನಡೆಸಿದರು.
ಮೈಸೂರು (ನ.27): ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್, ಸಂವಿಧಾನದ ಮೇಲಿನ ಪ್ರೀತಿ ಕೇವಲ ದಲಿತರನ್ನು ಓಲೈಸಿ ಮತ ಗಳಿಸಲು ಮಾತ್ರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದರು.
ಮೈಸೂರಿನಲ್ಲಿ ಸಂವಿಧಾನ ದಿನ ಆಚರಣೆ ಬಗ್ಗೆ ಪ್ರತಾಪ್ ಸಿಂಹ ಏನಂದ್ರು?
ಇನ್ನು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ಇಷ್ಟು ವರ್ಷ ಸಂವಿಧಾನ ದಿನಾಚರಣೆ ಮಾಡದ ಕಾಂಗ್ರೆಸ್ ಈಗ ಯಾಕೆ ಮಾಡುತ್ತಿದೆ? ಇಷ್ಟು ದಿನ ಏಕೆ ಸಂವಿಧಾನ ದಿನದ ಬಗ್ಗೆ ಒಲವು ತೋರಿಸಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರೇ ನಿಜವಾದ ದಲಿತ ವಿರೋಧಿ
ಪ್ರಧಾನಿ ಮೋದಿ ಅವರು ಸಂವಿಧಾನದ ಬಗ್ಗೆ ಗೌರವಿಸುವ ಕಾರ್ಯಕ್ರಮ ಮಾಡಿದ ಬಳಿಕ ಈ ಕಾಂಗ್ರೆಸ್ಗೆ ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಪ್ರೀತಿ ಬಂದಿದೆ. ದಲಿತರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದ್ದ ಹಣವನ್ನು ಸಿದ್ದರಾಮಯ್ಯ ಅವರು ಯಾಕೆ ಗ್ಯಾರಂಟಿ ಯೋಜನೆಗೆ ಹಾಕಿದರು? ಇಲ್ಲಿ ಸಿದ್ದರಾಮಯ್ಯ ಅವರೇ ನಿಜವಾದ ದಲಿತ ವಿರೋಧಿ. ಇವರ ತೋರ್ಪಡಿಕೆಗೆ ಮರುಳಾಗದೆ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ದಲಿತ ನಾಯಕ ಶ್ರೀನಿವಾಸಪ್ರಸಾದ ಅವರನ್ನು ರಾಜಕೀಯವಾಗಿ ತುಳಿದುಹಾಕಿದ್ದು ಯಾರು? ತಮ್ಮ ಮಗನ ಮೇಲೆ ಮಾತ್ರ ಕಿರೀಟ ಉಳಿಸಲು ಮಹದೇವಪ್ಪ ಅವರನ್ನ ತುಳಿದುಹಾಕಿದರು. ಕಾಂಗ್ರೆಸ್ಗೆ ಅಂಬೇಡ್ಕರ್, ಸಂವಿಧಾನದ ಮೇಲಿನ ಪ್ರೀತಿ ಕೇವಲ ದಲಿತರನ್ನು ಒಲೈಸಿ ಮತಗಳಿಸಲು ಮಾತ್ರ ಎಂದು ಟೀಕಿಸಿದರು.
ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ನಾವು ಓದುತ್ತಿರುವ ಸಂವಿಧಾನ ಪೀಠಿಕೆ ಯಾರು ಬರೆದಿದ್ದು?
ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ನೀವೇ ಹೇಳಿ, ನಾವಿಂದು ಓದುತ್ತಿರುವುದು ಅಂಬೇಡ್ಕರ್ ಬರೆದ ಸಂವಿಧಾನದ ಪೀಠಿಕೆನಾ? ಇಂದಿರಾಗಾಂಧಿ ತಿದ್ದುಪಡಿ ಮಾಡಿಸಿದ ಸಂವಿಧಾನದ ಪೀಠಿಕೆನಾ? ಈಗ ಓದುತ್ತಿರುವ ಪೀಠಿಕೆ ಇಂದಿರಾಗಾಂಧಿ ಬರೆಸಿದ್ದು. ಅಂಬೇಡ್ಕರ್ ಬರೆದ ಸಂವಿಧಾನದ ಪೀಠಿಕೆ ಬದಲಾಯಿಸಿದ್ದೇ ಕಾಂಗ್ರೆಸ್. ಸಂವಿಧಾನವನ್ನು ಹಳ್ಳ ಹಿಡಿಸಲು ಯತ್ನಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ತಾವು ದಲಿತರು, ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಇಲ್ಲಿವರೆಗೆ ಯಾಕೆ ದಲಿತರನ್ನ ಏಕೆ ಮುಖ್ಯಮಂತ್ರಿ ಮಾಡಲಿಲ್ಲ? ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಏಕೆ ದಲಿತರಿಗೆ ಬಿಟ್ಟುಕೊಡಲಿಲ್ಲ? ಈ ಕಾಂಗ್ರೆಸ್ಗರು ಯಾರನ್ನ ಸಂವಿಧಾನ ವಿರೋಧಿ, ದಲಿತ ವಿರೋಧಿ ಎಂದು ಕರೆಯುತ್ತಿದ್ದಾೋ ಅದೇ ಬಿಜೆಪಿ ಪಕ್ಷ ಮಾಯಾವತಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದು. ನಿಜವಾದ ದಲಿತ ವಿರೋಧಿಗಳೆಂದರೆ ಕಾಂಗ್ರೆಸ್, ಸಿದ್ದರಾಮಯ್ಯ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.














