ಮೈಸೂರು ದಸರಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ರೇಸ್‌ನಿಂದ ಮಹೇಂದ್ರ ಆನೆ ಹೊರಬಿದ್ದಿದ್ದು, ಹೊಸ ಕ್ಯಾಪ್ಟನ್ ಆಯ್ಕೆಯ ಕುತೂಹಲ ಮೂಡಿದೆ. ಗಜಪಡೆಯ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ನಡೆದಿದೆ. ಮತ್ತೊಂದೆಡೆ, ಮಹಿಷಾ ದಸರಾ ಆಚರಣೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಜಂಬೂ ಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಅಂಬಾರಿ ಹೊರುವ ನಿರೀಕ್ಷೆಯಲ್ಲಿದ್ದ ಮಹೇಂದ್ರ ಆನೆ ರೇಸ್‌ನಿಂದ ಹೊರಬಿದ್ದಿದ್ದು, ಉಳಿದವರ ನಡುವೆ ನಡುವೆ ಪೈಪೋಟಿ ಶುರುವಾಗಿದೆ. ಮತ್ತೊಂದೆಡೆ ಮಹಿಷಾ ದಸರಾ ಆಚರಣೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಅಂಬಾರಿ ರೇಸ್‌ನಿಂದ ಮಹೇಂದ್ರ ಔಟ್
ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊರಲಿದ್ದಾನೆ ಎಂದು ನಿರೀಕ್ಷಿಸಲಾಗಿದ್ದ ಮಹೇಂದ್ರ ಆನೆ ಕ್ಯಾಪ್ಟನ್ ರೇಸ್‌ನಿಂದ ಹಿಂದೆ ಸರಿದಿದೆ. ಮಹೇಂದ್ರ ದೈಹಿಕವಾಗಿ ಸಂಪೂರ್ಣ ಫಿಟ್ ಆಗಿದ್ದರೂ, ಮಾನಸಿಕವಾಗಿ ಭಾರ ಹೊರಲು ಸಿದ್ಧವಿಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಆನೆಯ ಕಾಲುಗಳ ತಪಾಸಣೆ ಹಾಗೂ ಲದ್ದಿಯ ಪ್ರಯೋಗಾಲಯ ಪರೀಕ್ಷೆಗಳ ವರದಿ ಸಾಮಾನ್ಯವಾಗಿವೆ. ಆದರೆ ಭಾರ ಹೊರುವ ತಾಲೀಮಿನ ವೇಳೆ ಮಹೇಂದ್ರ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸಿಲ್ಲ.
ಹೀಗಾಗಿ ಅಂಬಾರಿ ಹೊರುವ ಜವಾಬ್ದಾರಿಗೆ ಈಗ ಧನಂಜಯ, ಪ್ರಶಾಂತ, ಸುಗ್ರೀವ ಮತ್ತು ಏಕಲವ್ಯ ಮುಂಚೂಣಿಯಲ್ಲಿದ್ದಾರೆ. ಈ ನಾಲ್ಕು ಆನೆಗಳು ಸುಮಾರು ಒಂದು ಸಾವಿರ ಕೆಜಿ ತೂಕ ಹೊತ್ತು ತಾಲೀಮು ನಡೆಸಿದ್ದು, ಇವುಗಳಲ್ಲಿ ಒಬ್ಬನಿಗೆ ಕ್ಯಾಪ್ಟನ್ ಪಟ್ಟ ಸಿಗಲಿದೆ. ನಾಲ್ಕು ಬಾರಿ ಶ್ರೀರಂಗಪಟ್ಟಣ ದಸರಾವನ್ನು ಮುನ್ನಡೆಸಿರುವ ಮಹೇಂದ್ರನಿಗೆ ಈ ಬಾರಿ ಅಲ್ಲಿನ ಜವಾಬ್ದಾರಿ ನೀಡುವ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಈ ಬಾರಿ ಶ್ರೀರಂಗಪಟ್ಟಣ ದಸರಾಗೆ ಇನ್ನೆರಡು ದಿನದಲ್ಲಿ ಆನೆ ಫೈನಲ್ ಮಾಡುತ್ತೇವೆ. ಇದನ್ನ ಹೊರತುಪಡಿಸಿ ಧನಂಜಯ, ಪ್ರಶಾಂತ, ಸುಗ್ರೀವಾ, ಏಕಲವ್ಯ ಆನೆಗಳು ಸಮರ್ಥವಾಗಿ ಮರದ ತಾಲೀಮು ಮಾಡುತ್ತಿವೆ. ಗರಿಷ್ಠ 1 ಸಾವಿರ ಕೆ.ಜಿಯನ್ನ ಹೊತ್ತು ಸಾಗಿದೆ. ನಾಲ್ಕು ಆನೆಗಳಲ್ಲಿ ಅಂತಿಮವಾಗಿ ಕ್ಯಾಪ್ಟನ್ ಆಯ್ಕೆ ಮಾಡಲಾಗುತ್ತದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವನ್ಯಜೀವಿ ವಿಭಾಗ ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
ಸಿಡಿಮದ್ದು ತಾಲೀಮು ಯಶಸ್ವಿ
ಜಂಬೂಸವಾರಿಯ ದಿನ ಸಿಡಿಯಲಿರುವ 21 ಕುಶಾಲತೋಪುಗಳ ಸದ್ದಿಗೆ ಗಜಪಡೆಯನ್ನು ಸಜ್ಜುಗೊಳಿಸುವ ಎರಡನೇ ಹಂತದ ತಾಲೀಮು ವಸ್ತುಪ್ರದರ್ಶನ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಏಳು ಫಿರಂಗಿ ಗಾಡಿಗಳ ಮೂಲಕ ಮೂರು ಸುತ್ತುಗಳಲ್ಲಿ ಒಟ್ಟು 21 ಬಾರಿ ಸಿಡಿಮದ್ದು ಸಿಡಿಸಲಾಯಿತು. ಭಾರೀ ಶಬ್ದ ಮತ್ತು ಹೊಗೆಯ ನಡುವೆಯೂ ಗಜಪಡೆ ವಿಚಲಿತವಾಗದೆ ಗಂಭೀರವಾಗಿ ನಿಂತಿತು. ಆದರೆ ಸಿಡಿಮದ್ದಿನ ಶಬ್ದಕ್ಕೆ ಅಶ್ವದಳದ ಕುದುರೆಗಳು ಬೆಚ್ಚಿಬಿದ್ದು ಚಡಪಡಿಸಿದವು.
ಮಹಿಷಾ ದಸರಾಕ್ಕೆ ಚಾಮುಂಡಿ ಬೆಟ್ಟದಲ್ಲಿ ನಿರ್ಬಂಧ
ಮತ್ತೊಂದೆಡೆ ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅಕ್ಟೋಬರ್ 10ರಂದು ಮಹಿಷಾ ದಸರಾ ಆಚರಿಸಲು ಸಮಿತಿ ಸಿದ್ಧತೆ ಮಾಡಿಕೊಂಡಿತ್ತು. ಆದರೆ ದಸರಾ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶದಂತೆ ಅಕ್ಟೋಬರ್ 9ರ ಮಧ್ಯರಾತ್ರಿಯಿಂದ ಅಕ್ಟೋಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆಯ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಬೆಟ್ಟದಲ್ಲಿ ಕಾರ್ಯಕ್ರಮ ನಡೆಸಲು ನಿರ್ಬಂಧ ವಿಧಿಸಲಾಗಿದ್ದು, ಮೈಸೂರಿನ ಪುರಭವನದಲ್ಲಿ ಮಾತ್ರ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಒಂದೆಡೆ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಆಯ್ಕೆಯ ಕುತೂಹಲ, ಮತ್ತೊಂದೆಡೆ ಜಂಬೂಸವಾರಿಗೆ ಗಜಪಡೆಯ ತಾಲೀಮು ಭರಾಟೆ. ಇದರ ನಡುವೆ ಮಹಿಷಾ ದಸರಾ ಆಚರಣೆ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ. ನಾಡಹಬ್ಬದ ಸಿದ್ಧತೆಗಳೊಂದಿಗೆ ಮೈಸೂರಿನಲ್ಲಿ ದಸರಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)


